ಬಾದಾಮಿ: ತೀವ್ರ ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಬಾದಾಮಿ ವಿಧಾನಸಭೆ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.
ಇಂದು ಮಧ್ಯಾಹ್ನ ಬಾದಾಮಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತರಾದ ಸಿ ಎಂ ಇಬ್ರಾಹಿಂ, ಎಸ್. ಆರ್. ಪಾಟೀಲ್, ಸಚಿವ ತಿಮ್ಮಾಪುರ, ಎಚ್.ಕೆ. ಪಾಟೀಲ್, ಹಾಲಿ ಶಾಸಕ ಬಿಬಿ ಚಿಮ್ಮನಕಟ್ಟಿ, ಈ ಹಿಂದೆ ಟಿಕೆಟ್ ಘೋಷಣೆಯಾಗಿದ್ದ ದೇವರಾಜ್ ಪಾಟೀಲ್ ಸೇರಿದಂತೆ ಹಲವು ಮುಖಂಡರೊಂದಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು.
ಈ ವೇಳೆ ಮಾತನಾಡಿದ ಸಿದ್ದರಾಮ್ಯಯ ಅವರು, ನಮ್ಮ ಕಾರ್ಯಕರ್ತರು ಮತ್ತು ಮುಖಂಡರು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾರೆ. ನಾನು ಕೇವಲ ಒಂದು ದಿನ ಮಾತ್ರ ಪ್ರಚಾರ ಮಾಡುತ್ತೇನೆ. ಎರಡೂ ಕ್ಷೇತ್ರದಲ್ಲಿ ನಾನು ಗೆಲುವು ಸಾಧಿಸುತ್ತೇನೆ. ನಾನು ಯಾವುದೇ ಸರ್ವೆಯನ್ನು ನಂಬುವುದಿಲ್ಲ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ಆಗಮಿಸಿದ ಸಿದ್ದರಾಮಯ್ಯ ಅವರು ಬನಶಂಕರಿ ದೇವಿಯ ಆಶೀರ್ವಾದ ಪಡೆದರು. ದೇವಿಯ ದರ್ಶನ ಪಡೆದ ನಂತರ ಮಾತನಾಡಿದ ಸಿದ್ದರಾಮಯ್ಯ ಅವರು ಈ ಹಿಂದೆ ನಾನು ಕೊಪ್ಪಳದಿಂದಲೂ ಎಂಪಿ ಸ್ಥಾನಕ್ಕೆ ಸ್ಪರ್ಧಿಸಿದ್ದೆ. ಈಗ ಇಲ್ಲಿ ಸ್ಪರ್ಧಿಸುವಂತೆ ಈ ಭಾಗದ ಜನರು ಒತ್ತಾಯಿಸಿದರು. ಅಲ್ಲದೆ ಹೈಕಮಾಂಡ್ ಮೇಲೂ ಒತ್ತಡ ತಂದಿದ್ದರು. ಹೀಗಾಗಿ ಬಾದಾಮಿಯಿಂದ ಸ್ಪರ್ಧಿಸುವಂತೆ ಹೈಕಮಾಂಡ್ ನನಗೆ ಸೂಚನೆ ನೀಡಿತು ಎಂದು ತಿಳಿಸಿದರು.
ಇದೇ ವೇಳೆ 2ನೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದಾರಮಯ್ಯ ಅವರು, ಪ್ರಧಾನಿ ಮೋದಿ ಅವರು ವಾರಾಣಸಿ, ವಡೋದರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೂ ಸಹ ಎರಡೆರಡು ಕಡೆ ಸ್ಪರ್ಧಿಸಿದ್ದಾರೆ. ಅವೆಲ್ಲಾ ಎರಡು ಕಡೆ ಯಾಕೆ ನಿಂತಿದ್ದರು? ಅವರಿಗೆ ಸೋಲಿನ ಭಯವಿತ್ತೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
Comments are closed.