ಕರ್ನಾಟಕ

ಬಿಸಿ ಬಿಸಿ ಬೆಣ್ಣೆ ದೋಸೆಗೆ ದಾವಣಗೆರೆ ರವಿ ಹೋಟೆಲ್‌ಗೆ ಬನ್ನಿ

Pinterest LinkedIn Tumblr


ಬೆಣ್ಣೆ ದೋಸೆ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ದಾವಣಗೆರೆ. ಕಾರಣ ಇಲ್ಲಿರುವ ಹೆಚ್ಚು ಬೆಣ್ಣೆ ದೋಸೆ ಹೋಟೆಲ್‌ ಹಾಗೂ ಇಲ್ಲಿ ಸಿಗುವ ಅಪ್ಪಟ ರುಚಿಕರ ಬೆಣ್ಣೆ ದೋಸೆ. ನಗರದ 40 ಬೆಣ್ಣೆದೋಸೆ ಹೋಟೆಲ್‌ಗ‌ಳಲ್ಲಿ ಅತ್ಯಂತ ಹಳೆಯ ಹಾಗೂ ಮೊದಲ ಬೆಣ್ಣೆ ದೋಸೆ ಹೋಟೆಲ್‌ ಎಂದರೆ ರಾಂ ಅಂಡ್‌ ಕೋ ವೃತ್ತದ ಬಳಿಯ ಮಹಾದೇವಪ್ಪನವರ ರವಿ ಬೆಣ್ಣೆ ದೋಸೆ ಹೋಟೆಲ್‌.

ಇಲ್ಲಿ ಸಿಗುವ ಖಾಲಿ ಮತ್ತು ಬೆಣ್ಣೆ ದೋಸೆ ಬಗೆ ಬಗೆಯ ಚಟ್ನಿಗಳು, ಆಲೂಗಡ್ಡೆ ಪಲ್ಯ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ದೇಶ ವಿದೇಶಗಳಲ್ಲೂ ಇಲ್ಲಿ ಸಿಗುವ ದೋಸೆಯ ಅಭಿಮಾನಿಗಳಿದ್ದಾರೆ. ಈ ಹೋಟೆಲ್‌ಗೆ 90 ವರ್ಷಗಳ ಇತಿಹಾಸವಿದೆ. ಬೆಣ್ಣೆದೋಸೆಯ ಮೂಲ ಕತೃವೇ ಇವರಂತೆ. 1928ರಲ್ಲಿ ಬೆಳಗಾವಿ ಮೂಲದಿಂದ ಜೀವನೋಪಾಯಕ್ಕೆಂದು ದಾವಣಗೆರೆಗೆ ವಲಸೆ ಬಂದರು. ಈಗಿನ ಹಳೇಪೇಟೆಯ ವಸಂತ ಚಿತ್ರಮಂದಿರದ ಬಳಿ ಇದ್ದ ಸಲವಗಿ ನಾಟಕ ಕಂಪನಿಯ ಮುಂದೆ ತಿಂಡಿ ವ್ಯಾಪಾರ ಮಾಡಲಾರಂಭಿಸಿದರು.

” ನಮ್ಮ ಮುತ್ತಜ್ಜಿ ಚೆನ್ನಮ್ಮ ಮೊದಮೊದಲು ತುಪ್ಪ ಹಾಕಿ ರಾಗಿ ಹಿಟ್ಟಿನ ದೋಸೆ ಮಾಡಿ ಮಾರಾಟ ಮಾಡುತ್ತಿದ್ದರು. ಆನಂತರ ಅವರ ಮಕ್ಕಳಾದ ಮಹಾದೇವಪ್ಪ ಹಾಗೂ ಶಾಂತಪ್ಪ ಅಂಗಡಿಯ ಜವಬ್ದಾರಿಯನ್ನು ತೆಗೆದುಕೊಂಡು ರಾಗಿ ಬದಲಿಗೆ ಅಕ್ಕಿ ಹಾಗೂ ತುಪ್ಪದ ಬದಲಿಗೆ ಬೆಣ್ಣೆ ಹಾಕಿ ದೋಸೆ ಮಾಡಲಾರಂಭಿಸಿದರು. ನಮ್ಮ ತಂದೆ ಮಹಾದೇವಪ್ಪ ಮಾಡುತ್ತಿದ್ದ ದೋಸೆಗೆ ವರನಟ ಡಾ.ರಾಜ್‌ಕುಮಾರ್‌, ನರಸಿಂಹರಾಜು, ಬಾಲಕೃಷ್ಣ ಅವರು ಅಭಿಮಾನಿಯಾಗಿದ್ದರು ಎನ್ನುತ್ತಾರೆ ಹೋಟೆಲ್‌ನ ಮಾಲೀಕ ರವಿಶಂಕರ್‌.

ರುಚಿಯ ಗುಟ್ಟು: ರವಿ ಬೆಣ್ಣೆ ದೋಸೆ ಹೋಟೆಲ್‌ನಲ್ಲಿ ಇಂದಿಗೂ ಕಟ್ಟಿಗೆ ಒಲೆಯಲ್ಲಿಯೆ ದೋಸೆ ಮಾಡುವುದು. ಮುಖ್ಯವಾಗಿ ಮತ್ತಿ, ಬಿಲ್ವಾರ ಹಾಗೂ ಹೊನ್ನೆಯ ಕಟ್ಟಿಗೆಗಳನ್ನು ಮಾತ್ರ ಬಳಸುತ್ತಾರೆ. ರೆಡಿಮೆಡ್‌ ಬೆಣ್ಣೆಗೆ ಇಲ್ಲಿ ಜಾಗವಿಲ್ಲ. ಶುದ್ಧ ಎಮ್ಮೆ ಬೆಣ್ಣೆಯೆ ಆಗಬೇಕು. ಇನ್ನು ಅಕ್ಕಿಯ ವಿಚಾರಕ್ಕೆ ಬಂದರೆ ಕಳೆದ 30 ವರ್ಷಗಳಿಂದ ಜಯಾ ಬ್ರಾಂಡ್‌ನ‌ ಅಕ್ಕಿಯನ್ನೇ ಬಳಸುತ್ತಿರುವುದುರಿಂದ ರುಚಿಯಲ್ಲಿ ವ್ಯತ್ಯಾಸವಾಗಿಲ್ಲ.

ಅಕ್ಕಿಯನ್ನು ಒಂದು ದಿನ ಮುಂಚೆ ನೀರಲ್ಲಿ ನೆನಸಿ ಅದನ್ನು 5-6 ಗಂಟೆ ಗಾಳಿಯಲ್ಲಿ ಒಣಗಿಸಿ, ಬೀಸಿ ಹಿಟ್ಟು ಮಾಡಿಕೊಳ್ಳಲಾಗುತ್ತದೆ. ಇದಕ್ಕೆ ಒಂದಿಷ್ಟು ಉದ್ದಿನ ಬೇಳೆ ರುಬ್ಬಿ ಹಾಕಿ ಎರಡನ್ನು ಕಲಸಿ ಒಂದು ರಾತ್ರಿ ನೆನೆಯಿಟ್ಟು ಅಮೇಲೆ ದೋಸೆಗೆ ಬಳಸುತ್ತಾರೆ. “ಇವುಗಳಲ್ಲಿ ಯಾವುದೇ ಒಂದು ಕೊರತೆ ಆದರೂ ಅಂಗಡಿಯನ್ನು ಮುಚ್ಚುತ್ತೇವೆ ಹೊರತು, ರುಚಿ ಕೆಡಿಸಿಕೊಡುವುದಿಲ್ಲ’ ಎನ್ನುತ್ತಾರೆ ಮಾಲೀಕರ ಸಹೋದರ ಮುಖ್ಯ ಬಾಣಸಿಗ ಜಗದೀಶ್‌.

ಈ ಹೋಟೆಲ್‌ನಲ್ಲಿ ಪ್ರತಿನಿತ್ಯ 25ಕೆ.ಜಿ ಹಿಟ್ಟಿನ ದೋಸೆ ಮಾತ್ರ ಮಾಡಲಾಗುತ್ತದೆ. ಬೆಳಗ್ಗೆ 7.30ರಿಂದ 10.30 ಹಾಗೂ ಸಂಜೆ 4ರಿಂದ 6.30 ರವರೆಗೂ ಹೋಟೆಲ್‌ ತೆರೆದಿರುತ್ತದೆ. ಸಮಯ ಮುಗಿದ ನಂತರ ಯಾರೇ ಬಂದರೂ ಇಲ್ಲಿ ದೋಸೆ ಸಿಗುವುದಿಲ್ಲ. ಇನ್ನು ಸ್ವಂಸೇವಾ ಪದ್ಧತಿ ಜಾರಿ ಇದ್ದು ಸರತಿಯ ಪ್ರಕಾರವೇ ಇಲ್ಲಿ ತಿಂಡಿ ಸಿಗುವುದು. ಯಾವ ಸೆಲಬ್ರಿಟಿ ಬಂದರೂ ಇಲ್ಲಿ ಅವರು ಸಾಮಾನ್ಯರೇ. ಮಾಲೀಕರಾಗಲಿ ಅಂಗಡಿ ಸದಸ್ಯರಾಗಲಿ ಅವರಿಗೆ ಯಾವುದೇ ಪ್ರಾಶಸ್ತ್ಯ ನೀಡುವುದಿಲ್ಲ.

ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ಬ್ಯಾಡಗಿ ಮೆಣಸಿನಕಾಯಿಯ ಕೆಂಪುಚಟ್ನಿ ಈ ಹೋಟೆಲ್‌ನ ವಿಶೇಷ. ಉಳಿದ ದಿನ ಹಸಿಮೆಣಸಿನಕಾಯಿ ಚಟ್ನಿ. ಇದರ ಜೊತೆಗೆ ಆಲುಗಡ್ಡೆಯ ಪಲ್ಯ ಕೊಡುತ್ತಾರೆ. ಈ ಗರಿ ಗರಿಯಾದ ದೋಸೆಯನ್ನು ಒಮ್ಮೆ ಬಾಯಲಿಟ್ಟರೆ ಕರಗಿದ್ದೇ ಗೊತ್ತಾಗುವುದಿಲ್ಲ. ಈ ಹೋಟೆಲ್‌ಗೆ 60 ವರ್ಷಕ್ಕೂ ಹಿಂದಿನ ಗ್ರಾಹಕರಿದ್ದು, ವಾರದಲ್ಲಿ 3-4 ಬಾರಿ ಇಲ್ಲಿ ಬಂದು ದೋಸೆ ತಿನ್ನಲೇಬೇಕು. ನಗರದ ಯಾವುದೇ ಗಣ್ಯರ ಮನೆಯ ಕಾರ್ಯಕ್ರಮವಾದರೂ ಇವರೇ ಅಲ್ಲಿ ದೋಸೆ ಮಾಡಿಕೊಡುತ್ತಾರೆ.

ಇತ್ತೀಚೆಗೆ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿ ದಾವಣಗೆರೆ ಭೇಟಿ ಕೊಟ್ಟಾಗ ಇವರ ಸಹೋದರರ ಬೆಣ್ಣೆ ದೋಸೆ ಹೋಟೆಲ್‌ನಲ್ಲಿ ಇದೇ ಬಾಣಸಿಗ ಜಗದೀಶ್‌ ಅವರೇ ಕೈ ದೋಸೆ ಸವಿದು ಖುಷಿಪಟ್ಟಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪ, ಜೆ.ಎಚ್‌. ಪಟೇಲ್‌, ಧರ್ಮಸಿಂಗ್‌ ಸೇರಿದಂತೆ ಇಂದಿನ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕಾರಣಿಗಳು, ಸಿನಿಮಾ ನಟ ಶಿವರಾಜಕುಮಾರ್‌, ಪುನೀತ್‌, ಸುದೀಪ್‌, ವಿಜಯರಾಘವೆಂದ್ರ, ಮಾಲಾಶ್ರೀ ಬಂದಿದ್ದು, ದಾವಣಗೆರೆಗೆ ಬರುವ ಎಲ್ಲಾ ನಟ ನಟಿಯರು ಇಲ್ಲಿಗೆ ಭೇಟಿಕೊಟ್ಟು ದೋಸೆ ಸವಿಯುತ್ತಾರೆ.

* ಜಯಪ್ರಕಾಶ್‌ ಬಿರಾದಾರ್‌

-ಉದಯವಾಣಿ

Comments are closed.