ಕರ್ನಾಟಕ

ಪಂಚ ಪ್ರಶ್ನೆ: ಸಿಎಂ ಬಾದಾಮಿಗೆ ಬಂದ್ರೆ ಕಾಂಗ್ರೆಸ್‌ಗೆ ಬಂಪರ್

Pinterest LinkedIn Tumblr


ಸಿದ್ದರಾಮಯ್ಯ ಸಂಪುಟದಲ್ಲಿ ಆರಂಭಿಕ ಮೂರು ವರ್ಷಗಳ ಕಾಲ ಏಕೈಕ ಮಹಿಳಾ ಸಚಿವೆಯಾಗಿದ್ದ ಉಮಶ್ರೀ ಕಷ್ಟ ಜೀವಿ. ದೂರದ ಬೆಂಗಳೂರಿನಿಂದ ರಾಜಕೀಯ ಆಶ್ರಯ ಅರಸಿ ಬಂದ ಉಮಾಶ್ರೀ ಹಠ ಸಾಧಿಸಿ, ತೇರದಾಳ ಮತಕ್ಷೇತ್ರದಲ್ಲಿ ಸ್ಪರ್ಧಿಸಿ 2008ರಲ್ಲಿ ಸೋಲುಂಡರು. ಆದರೂ ಧೃತಿಗೆಡದೇ 5 ವರ್ಷ ಕ್ಷೇತ್ರದಲ್ಲಿ ಕೆಲಸ ಮಾಡಿ, 2013ರಲ್ಲಿ ಜಯ ಸಾಧಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ರಬಕವಿಯಲ್ಲೇ ಮನೆ ಮಾಡಿರುವ ಅವರು, ತೇರದಾಳದಲ್ಲಿ 3ನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರೊಂದಿಗೆ ಸಂದರ್ಶನ

1. ಬಾದಾಮಿಯಲ್ಲಿ ಸಿಎಂ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ಲಾಭ ಆಗಲಿದೆಯೇ?

ಸಿಎಂ ಬಾದಾಮಿಯಲ್ಲಿ ಸ್ಪರ್ಧಿಸುವುದರಿಂದ ರಾಜ್ಯಕ್ಕೆ ಲಾಭವಾಗಲಿದೆ. ಮತ್ತೊಮ್ಮೆ ಕಾಂಗ್ರೆಸ್‌ ಸರಕಾರ ಅಧಿಕಾರ ಪಡೆಯಲು ಸಿಎಂ ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಸಿಎಂ ಬರುತ್ತಾರೆ ಎನ್ನುವ ಕಾರಣಕ್ಕೆ ಉತ್ತರ ಕರ್ನಾಟಕದಲ್ಲಿ ಸಂಚಲನ ಮೂಡಿದೆ. ಬಿಜೆಪಿಯನ್ನು ಹಣಿಯಬೇಕು ಎನ್ನುವುದಕ್ಕಿಂತ ಮತ್ತೊಮ್ಮೆ ಕಾಂಗ್ರೆಸ್‌ ಸರಕಾರ ಸ್ಥಾಪನೆಯಾಗಬೇಕು ಎನ್ನುವುದು ನಮ್ಮ ಗುರಿ. ಸಿಎಂ ಸ್ಪರ್ಧೆಯಿಂದಾಗಿ ಬಿಜೆಪಿ ಮೂಲೆಗುಂಪಾಗಲಿದೆ. ಜನರು ಕಾಂಗ್ರೆಸ್‌ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲಿದ್ದಾರೆ. ಇಲ್ಲಿ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ.

2. ಬಿಜೆಪಿಯ ಅಮಿತ್‌ ಶಾ ತಂತ್ರಗಾರಿಕೆ ಬಗ್ಗೆ ನಿಮ್ಮ ಅಭಿಪ್ರಾಯ?

ಗುಜರಾತ್‌, ಉತ್ತರಪ್ರದೇಶದಲ್ಲಿ ಶಾ ಅವರು ಮಾಡಿದ ರಾಜಕೀಯ ನಮ್ಮ ರಾಜ್ಯದಲ್ಲಿ ನಡೆಯೋದಿಲ್ಲ. ಕರ್ನಾಟಕದ ಜನತೆ ಪ್ರಬುದ್ಧರಾಗಿದ್ದಾರೆ. ಶಾ ಅಂತಹವರ ಕುತಂತ್ರ, ಸುಳ್ಳು ರಾಜಕಾರಣಕ್ಕೆ ಜನ ಬೆಲೆ ನೀಡುವುದಿಲ್ಲ. ಧರ್ಮಗಳ ಮಧ್ಯೆ ಕಲಹವೆಬ್ಬಿಸಲು ಇಲ್ಲಿ ಅವಕಾಶವೇ ಇಲ್ಲ. ಕಾಂಗ್ರೆಸ್‌ ಸರಕಾರದ ಜನಪರ ಕಾರ್ಯಕ್ರಮ, ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸು ಚುನಾವಣೆಯಲ್ಲಿ ಪ್ರಭಾವ ಬೀರಲಿದೆ.

3. ಸಚಿವೆಯಾಗಿ ನೀವು ಉತ್ತರ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರಕ್ಕೆ ಆದ್ಯತೆ ನೀಡಲಿಲ್ಲ ಎಂಬ ಆರೋಪವಿದೆಯಲ್ಲ?

ನಾನು ಪ್ರತಿನಿಧಿಸುವ ಕ್ಷೇತ್ರವೇ ಉತ್ತರ ಕರ್ನಾಟಕದ್ದಾಗಿದೆ. ನಾನು ಇಲ್ಲಿನ ಮನೆ ಮಗಳಂತಿದ್ದೇನೆ. ಬೆಂಗಳೂರು ಕೇಂದ್ರೀಕೃತವಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮಗಳನ್ನು ವಿಕೇಂದ್ರೀಕರಣಗೊಳಿಸಿದ್ದೇನೆ. ಹೈದರಾಬಾದ್‌, ಮುಂಬೈ ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಉತ್ತರ ಕರ್ನಾಟಕದಲ್ಲೇ ನಡೆದಿದೆ. ಅಕಾಡೆಮಿಗೆ ಅಧ್ಯಕ್ಷರೂ ಈ ಭಾಗದವರೇ ಇದ್ದಾರೆ. ಚಾಲುಕ್ಯ ಪ್ರಾಧಿಕಾರ ಸ್ಥಾಪಿಸುವ ಮೂಲಕ ಇಲ್ಲಿನ ಅಭಿವೃದ್ಧಿಗೆ ಕೊಡುಗೆ ಕೊಟ್ಟಿದ್ದೇನೆ. ನನ್ನ ಮೇಲಿರುವ ಆರೋಪಗಳೆಲ್ಲ ಸುಳ್ಳು.

4. ಮಹಿಳೆಯರಿಗೆ ಟಿಕೆಟ್‌ ನೀಡಲು ಪಕ್ಷಗಳು ಹಿಂಜರಿಯುವುದೇಕೆ?

ಎಲ್ಲ ಪಕ್ಷಗಳೂ ಪುರುಷರಿಗೆ ಸಮಾನವಾಗಿ ಮಹಿಳೆಯರಿಗೂ ಟಿಕೆಟ್‌ ನೀಡಬೇಕು. ಈಗಾಗಲೇ ಪಂಚಾಯಿತಿ ಮಟ್ಟದಲ್ಲಿ ಮೀಸಲಾತಿ ಮೂಲಕ ಮಹಿಳೆಯರು ಸ್ಥಾನ ಗಿಟ್ಟಿಸಿ ಉತ್ತಮ ಕೆಲಸ ಮಾಡಿದ್ದಾರೆ. ಮಹಿಳೆಯರೂ ಕೂಡ ಟಿಕೆಟ್‌ ಕೊಡಲೇಬೇಕು ಎಂದು ಅಹವಾಲು ಮಂಡಿಸಬೇಕು. ದೊರೆತ ಅವಕಾಶವನ್ನು ಬಳಸಿಕೊಂಡು ರಾಜಕೀಯವಾಗಿ ಬೆಳೆಯಬೇಕು. ಕಾಂಗ್ರೆಸ್‌ನಲ್ಲಿ ಮಹಿಳೆಯರನ್ನು ಗುರುತಿಸಿ ಟಿಕೆಟ್‌ ನೀಡಲಾಗಿದೆ. ಮಹಿಳೆಯರಿಗೆ ಆದ್ಯತೆ ದೊರೆತಿದೆ ಎನ್ನುವುದಕ್ಕೆ ಶಾಸಕಿ, ಸಚಿವೆಯಾಗಿರುವ ನಾನೇ ಉದಾಹರಣೆ.

4. ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಹೇಗಿದೆ?

ಸರಕಾರದ ಕಾರ್ಯಕ್ರಮಗಳನ್ನು ನೇರವಾಗಿ ಜನರಿಗೆ ತಲುಪಿಸುವಲ್ಲಿ ನಾನು ಯಶಸ್ವಿಯಾಗಿದ್ದೇನೆ. ತೇರದಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ಪರ ಅಭಿಪ್ರಾಯವಿದೆ. ಮಹಿಳೆಯರು, ರೈತರು, ಯುವಜನತೆಗಾಗಿ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಸರಕಾರಿ ಯೋಜನೆಗಳ ಮೂಲಕ ಕೋಟ್ಯಂತರ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಒದಗಿಸಲಾಗಿದೆ. ಆಡಳಿತ ವಿರೋಧಿ ಅಲೆ ನಮ್ಮ ಕ್ಷೇತ್ರದಲ್ಲಿಲ್ಲ. ನಾನು ಗೆಲುವು ಸಾಧಿಸುವುದು ನಿಶ್ಚಿತವಾಗಿದೆ.

Comments are closed.