ರಾಷ್ಟ್ರೀಯ

ಟಾಯ್ಲೆಟ್‌ ಇಲ್ಲದಿದ್ದರೆ ವೇತನ ಇಲ್ಲ!

Pinterest LinkedIn Tumblr


ಶ್ರೀನಗರ: ಜಮ್ಮು-ಕಾಶ್ಮೀರದ ಕಿಶ್ತ್ವಾರ್‌ ಜಿಲ್ಲೆಯ 600 ಮಂದಿ ಸರಕಾರಿ ನೌಕರರ ವೇತನವನ್ನು ತಡೆ ಹಿಡಿಯಾಗಿದೆ. ಇದಕ್ಕೆ ಕಾರಣ ಅವರ ಮನೆಗಳಲ್ಲಿ ಟಾಯ್ಲೆಟ್‌ ಇಲ್ಲದಿರುವುದು!

ಹೌದು, ಬಯಲು ಶೌಚದ ವಿರುದ್ಧ ಕಠಿಣ ಸಂದೇಶ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಜಿಲ್ಲೆಯ 616 ಸರಕಾರಿ ನೌಕರರ ಮನೆಗಳಲ್ಲಿ ಶೌಚಾಲಯಗಳಿಲ್ಲ ಎಂಬ ವರದಿಯನ್ನು ಸಹಾಯಕ ಕಮೀಷನರ್‌ ಅನಿಲ್‌ ಕುಮಾರ್‌ ಚಂಡೈಲ್‌ ಅವರು ನೀಡಿದ್ದರು. ಅದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಅಂಗ್ರೇಜ್‌ ಸಿಂಗ್‌ ರಾಣಾ ಅವರು ಆ ನೌಕರರ ವೇತನ ತಡೆಗೆ ಸೂಚಿಸಿದ್ದಾರೆ.

ಸ್ವಚ್ಛ ಭಾರತ ಯೋಜನೆಯಡಿ ಮನೆ ಮನೆಗೆ ಶೌಚಾಲಯ ಕಟ್ಟಿಸುವ ನಿಟ್ಟಿನಲ್ಲಿ ಶೇಕಡಾ 71.95ರ ಗುರಿ ಸಾಧಿಸಲಾಗಿದೆ. ಲಡಾಖ್‌ ಪ್ರದೇಶದ ಲೇಹ್‌ ಮತ್ತು ಕಾರ್ಗಿಲ್‌ ಜಿಲ್ಲೆಗಳು, ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಮತ್ತು ಶ್ರೀನಗರ ಜಿಲ್ಲೆಗಳನ್ನು ಬಯಲು ಶೌಚಮುಕ್ತ ಎಂದು ಘೋಷಿಸಲಾಗಿದೆ. ಅನಂತ್‌ ನಾಗ್‌ ಮತ್ತು ಪುಲ್ವಾಮಾ ಜಿಲ್ಲೆಗಳು ಏಪ್ರಿಲ್‌ ಅಂತ್ಯದೊಳಗೆ ಬಯಲು ಶೌಚ ಮುಕ್ತಗೊಳ್ಳಲಿವೆ. ಆದರೆ, ಕಿಶ್ತ್ವಾರ್‌ನಲ್ಲಿ ಕೇವಲ 57.23 ಶೇಕಡಾ ಗುರಿ ಸಾಧನೆಯಾಗಿದ್ದು, ಅದಕ್ಕಾಗಿ ಸರಕಾರಿ ನೌಕರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.

”ಸರಕಾರಿ ನೌಕರರಾಗಿ ನಮ್ಮ ವರ್ತನೆ ಮತ್ತು ಬದುಕಿನ ರೀತಿ ಮಾದರಿಯಾಗಿರಬೇಕು. ನಾವು ಸಮಾಜದ ಇತರರು ಅನುಸರಿಸುವಂಥ ಆದರ್ಶಗಳಾಗಬೇಕು. ನಾವೇ ಮನೆಯಲ್ಲಿ ಟಾಯ್ಲೆಟ್‌ ಕಟ್ಟಿಸಿಕೊಳ್ಳದಿದ್ದರೆ ಹೇಗೆ,” ಎಂದು ಜಿಲ್ಲಾಧಿಕಾರಿ ರಾಣಾ ಅವರು ನೌಕರರನ್ನು ಪ್ರಶ್ನಿಸಿದ್ದಾರೆ.

Comments are closed.