ಕರ್ನಾಟಕ

ಮೂರು ಪಕ್ಷಗಳಲ್ಲೂ ಇದ್ದಾರೆ ಕ್ರಿಮಿನಲ್‌ ಆರೋಪಿತರು

Pinterest LinkedIn Tumblr


ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಘೋಷಿಸಿದ ಅಭ್ಯರ್ಥಿಗಳಲ್ಲಿ ಕ್ರಿಮಿನಲ್‌ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳು ಹೆಚ್ಚಿದ್ದಾರೆ ಎಂದು ಅಸೋಸಿಯೇಷನ್‌ ಆಫ್ ಡೆಮಾಕ್ರಟಿಕ್‌ ರಿಫಾಮ್ಸ್‌ì (ಎಡಿಆರ್‌) ಹೇಳಿದೆ.

ಕಾಂಗ್ರೆಸ್‌ ಈಗಾಗಲೇ 218 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಮೊದಲು 72, 2ನೇ ಪಟ್ಟಿ ಯಲ್ಲಿ 82 ಸೇರಿ 154 ಅಭ್ಯರ್ಥಿಗಳನ್ನು ಅಂತಿಮಗೊ ಳಿಸಿದೆ. ಜೆಡಿಎಸ್‌ 126 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ.

ಈ ಮೂರು ಪಕ್ಷಗಳು ಘೋಷಿಸಿರುವ ಅಭ್ಯರ್ಥಿಗಳಲ್ಲಿ ಬಿಜೆಪಿಯ 111, ಕಾಂಗ್ರೆಸ್‌ನ 148 ಹಾಗೂ ಜೆಡಿಎಸ್‌ನ 58 ಅಭ್ಯರ್ಥಿಗಳು ವಿಧಾನಸಭೆ ಚುನಾವಣೆಯಲ್ಲಿ ಪುನರ್‌ ಸ್ಪರ್ಧೆ ಮಾಡುತ್ತಿದ್ದಾರೆ. ಇವರಲ್ಲಿ ಬಿಜೆಪಿ 30, ಕಾಂಗ್ರೆಸ್‌ನ 48 ಹಾಗೂ ಜೆಡಿಎಸ್‌ನ 17 ಅಭ್ಯರ್ಥಿಗಳ ಮೇಲೆ ಕ್ರಿಮಿನಲ್‌ ಪ್ರಕರಣ ಇದೆ. ಜತೆಗೆ ಬಿಜೆಪಿಯ 19, ಕಾಂಗ್ರೆಸ್‌ನ 23 ಮತ್ತು ಜೆಡಿಎಸ್‌ 9 ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ ಎಂದು ಎಡಿಆರ್‌ ಸಮೀಕ್ಷೆ ತಿಳಿಸಿದೆ.

ಪುನರ್‌ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಬಿಜೆಪಿಯ ಶೇ.27, ಕಾಂಗ್ರೆಸ್‌ನ ಶೇ.32 ಹಾಗೂ ಜೆಡಿಎಸ್‌ನ ಶೇ.29 ಅಭ್ಯರ್ಥಿಗಳು ಕ್ರಿಮಿನಲ್‌ ಪ್ರಕರಣ ಹಾಗೂ ಬಿಜೆಪಿಯ ಶೇ.17, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ತಲಾ ಶೇ.16 ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ. ಇವರಲ್ಲಿ ಬಿಜೆಪಿಯ 97, ಕಾಂಗ್ರೆಸ್‌ನ 134 ಮತ್ತು ಜೆಡಿಎಸ್‌ನ 46 ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ. ಬಿಜೆಪಿಯ ಶೇ.87, ಕಾಂಗ್ರೆಸ್‌ನ ಶೇ.91 ಹಾಗೂ ಜೆಡಿಎಸ್‌ನ ಶೇ.79 ಅಭ್ಯರ್ಥಿಗಳು ಕೋಟ್ಯಾಧಿಪತಿ ಗಳಾಗಿದ್ದಾರೆ ಎಂಬ ಮಾಹಿತಿ ನೀಡಿದೆ. ಬಿಜೆಪಿಯಿಂದ ಪುನರ್‌ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಸರಾಸರಿ ಆಸ್ತಿ ವಿವರ 8,92,67,255 ರೂ.(8 ಕೋಟಿ), ಕಾಂಗ್ರೆಸ್‌ ಅಭ್ಯರ್ಥಿಗಳ ಸರಾಸರಿ ಆಸ್ತಿ ವಿವರ 28,23,51,893 ರೂ.(28 ಕೋಟಿ) ಮತ್ತು ಜೆಡಿಎಸ್‌ ಅಭ್ಯರ್ಥಿಗಳ ಸರಾಸರಿ ಆಸ್ತಿ ವಿವರ 14,91,14,815(14 ಕೋಟಿ) ರೂ.ಗಳಷ್ಟಿದೆ ಎಂದು ಎಡಿಆರ್‌ ತಿಳಿಸಿದೆ.

ಏನೇನು ಶಿಫಾರಸು?
ಗಂಭೀರ ಕ್ರಿಮಿನಲ್‌ ಮೊಕದ್ದಮೆ ಹೊತ್ತಿರುವ ಅಭ್ಯರ್ಥಿಗಳಿಗೆ ಮೂರು ಪಕ್ಷದಿಂದ ನಿರಂತರವಾಗಿ ಟಿಕೆಟ್‌ ನೀಡುತ್ತಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಗಂಭೀರ ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿರುವ ಮತ್ತು ಅಪರಾಧ ಚಟುವಟಿಕೆ ಹಿನ್ನೆಲೆ ಇರುವ ಅಭ್ಯರ್ಥಿಗಳಿಗೆ ನೀಡಿರುವ ಟಿಕೆಟ್‌ ತಡೆ ಹಿಡಿಯಬೇಕು. ಚುನಾವಣೆಯಲ್ಲಿ ಹಣದ ದುರುಪಯೋಗ ಮತ್ತು ಮತದಾರರನ್ನು ಸೆಳೆಯಲು ವಸ್ತು ಅಥವಾ ಇನ್ಯಾವುದೇ ರೂಪದಲ್ಲಿ ಆಮಿಷ ವೊಡ್ಡುವುದನ್ನು ರಾಜಕೀಯ ಪಕ್ಷಗಳು ನಿಲ್ಲಿಸಬೇಕು. ಅಭ್ಯರ್ಥಿಗಳ ಆಯ್ಕೆ ಪಾರದರ್ಶಕವಾಗಿ ಇರಬೇಕು ಮತ್ತು ಆಯ್ಕೆಯ ಮಾನದಂಡವನ್ನು ಬಹಿರಂಗಪಡಿಸಬೇಕು ಎಂದು ಎಡಿಆರ್‌ ಶಿಫಾರಸಿನಲ್ಲಿ ತಿಳಿಸಿದೆ.

-Udayavani

Comments are closed.