ರಾಷ್ಟ್ರೀಯ

ತಂದೆಯಿಂದಲೇ ಲೈಂಗಿಕ ಶೋಷಣೆ: ನೇಣಿಗೆ ಕೊರಳೊಡ್ಡಿದಳು ನತದೃಷ್ಟ ಬಾಲೆ

Pinterest LinkedIn Tumblr


ಬೆಟ್ಟಿಯಾ (ಬಿಹಾರ): ಹೆತ್ತ ತಂದೆಯಿಂದಲೇ ಲೈಂಗಿಕ ಶೋಷಣೆ ಅನುಭವಿಸಿದ ನತದೃಷ್ಟ ಬಾಲೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಮಜ್‌ಹೌಲಿಯಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆ ಸಂಬಂಧ ಪಾಪಿ ತಂದೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ಪಶ್ಚಿಮ ಚಂಪಾರಣ್‌ದ ಪೊಲೀಸ್ ಅಧೀಕ್ಷಕ ಜಯಂತ್ ಕಾಂತ್ ತಿಳಿಸಿದ್ದಾರೆ.

ಘಟನೆ ಸಂಬಂಧ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಮೃತ ಬಾಲಕಿಯ ತಾಯಿ ಪ್ರಕರಣ ದಾಖಲಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಬಂಧಿತ ವ್ಯಕ್ತಿ ತನ್ನ ಪುತ್ರಿಯ ಜೊತೆ ಅಸಭ್ಯ ಭಂಗಿಯಲ್ಲಿರುವುದನ್ನು ಗ್ರಾಮದ ಕೆಲವರು ಗಮನಿಸಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಬಾಲಕಿ ಹಾಗೂ ಆಕೆಯ ತಾಯಿ ವಾರದ ಹಿಂದಷ್ಟೇ ಗ್ರಾಮ ಪಂಚಾಯತಿ ಮುಖಂಡರನ್ನು ಸಂಪರ್ಕಿಸಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೂ ಸಹ ಮಾಹಿತಿ ನೀಡಲಾಗಿತ್ತು ಎಂದು ಗ್ರಾಮದ ಸರಪಂಚ್ ಅವರ ಪತಿ ತಿಳಿಸಿದ್ದಾರೆ.

ತಂದೆಯ ಹೇಯ ಕೃತ್ಯದಿಂದ ಮನೆ ಬಿಟ್ಟು ಹೋಗಿದ್ದ ಬಾಲಕಿಯನ್ನು ಮರಳಿ ಮನೆಗೆ ಕರೆತರಲಾಗಿತ್ತು. ಆದರೆ, ಬಾಲಕಿ ದುಡುಕಿನ ನಿರ್ಧಾರ ಕೈಗೊಂಡು ಗುರುವಾರ ಮುಂಜಾನೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು.

Comments are closed.