ಕರ್ನಾಟಕ

ಭಿಕ್ಷುಕ ಕಾಲೊನಿ ನಿವಾಸಿಗಳಿಗೆ ಮೊದಲ ಬಾರಿಗೆ ಮತದಾನ ಹಕ್ಕು

Pinterest LinkedIn Tumblr

ಶಾಂತ ತಮ್ಮಯ್ಯ ಬೆಂಗಳೂರು

ಸುಂಕದಕಟ್ಟೆಯ ಭಿಕ್ಷುಕರ ಕಾಲೊನಿಯಲ್ಲಿರುವ ನಿರಾಶ್ರಿತರಿಗೆ ಇದೇ ಮೊದಲ ಬಾರಿಗೆ ಮತಹಾಕುವ ಹಕ್ಕು ದೊರೆಯುತ್ತಿದೆ. ಮೇ 12ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.

ವಸತಿರಹಿತ ಭಿಕ್ಷುಕರಿಗೂ ಮತದಾನದ ಅವಕಾಶ ಕಲ್ಪಿಸಬೇಕು ಎಂಬ ಹೈಕೋರ್ಟ್‌ ಆದೇಶದಂತೆ ಬಿಬಿಎಂಪಿ ಅಕಾರಿಗಳು ಮಾಗಡಿ ರಸ್ತೆಯ ಭಿಕ್ಷುಕರ ಕಾಲೊನಿಗೆ ಹೋಗಿ ಮತದಾರರ ಪಟ್ಟಿ ತಯಾರಿಗೆ ಸಿದ್ಧತೆ ನಡೆಸಿದ್ದಾರೆ. ಐನೂರು ಮಂದಿ (ಏ.17ರ ಮಂಗಳವಾರಕ್ಕೆ ) ಇದ್ದು, 450 ಮಂದಿ ಮತದಾನಕ್ಕೆ ಅರ್ಹರಾಗಿದ್ದಾರೆ. ಉಳಿದವರಲ್ಲಿ ಕೆಲವರು ಅಸ್ವಸ್ಥರು ಹಾಗೂ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದು, ಅವರು ಮತ ಚಲಾಯಿಸಲು ಸಾಧ್ಯವಿಲ್ಲ. ಹಾಗಾಗಿ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಮೂಲಕ ನಿರಾಶ್ರಿತರಿಗೆ ಇದೇ ಮೊದಲ ಬಾರಿಗೆ ಮತಹಾಕುವ ಹಕ್ಕು ದೊರೆತಿದೆ. ಏ.21ರ ನಂತರ ಗುರುತಿನ ಚೀಟಿ ಅವರ ಕೈ ಸೇರಲಿದೆ.

ಅಂಚೆ/ ಮತಗಟ್ಟೆ:
ನ್ಯಾಯಾಲಯದ ಆದೇಶದಂತೆ ಏ.14ರ ಶನಿವಾರ ಬಿಬಿಎಂಪಿ ಆಯುಕ್ತರು ಹಾಗೂ ಅಕಾರಿಗಳು ಕಾಲೋನಿಗೆ ಹೋಗಿ, ಅಲ್ಲಿನ ಅಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ಚರ್ಚಿಸಿದ್ದಾರೆ. ನಂತರ ಅಲ್ಲಿರುವವರಲ್ಲಿ ಅರ್ಹರು, ಅನರ್ಹರನ್ನು ವಿಂಗಡಿಸಿ, ಅವರ ಫೋಟೋ ಹಾಗೂ ಅಗತ್ಯ ಮಾಹಿತಿ ಪಡೆದು, ಗುರುತಿನ ಚೀಟಿ ಮುದ್ರಣಕ್ಕೆ ಮುಂದಾಗಿದ್ದಾರೆ. ಅಲ್ಲದೆ ಮತದಾನ ಮಾಡುವುದು ಹೇಗೆ ಎಂಬುದನ್ನು ಡೆಮೋ ಮೂಲಕ ಅವರಿಗೆ ತಿಳಿಸಿಕೊಡಲಾಗಿದೆ. ಎಲ್ಲಾ ಪ್ರಕ್ರಿಯೆ ಎರಡೇ ದಿನದಲ್ಲಿ ಮುಕ್ತಾಯವಾಗಿದೆ. ಆದರೆ, ಅವರು ಮತ ಚಲಾಯಿಸುವ ಸ್ಥಳ ಅಂತಿಮವಾಗಿಲ್ಲ. ಕಾಲೋನಿಗೆ ಸಮೀಪವಿರುವ ಯಾವುದಾದರು ಮತಗಟ್ಟೆ(ಬೂತ್‌)ಯಲ್ಲಿ ಮತ ಚಲಾಯಿಸಿದಲ್ಲಿ, ಅಗತ್ಯ ಪೊಲೀಸ್‌ ಭದ್ರತೆ ನೀಡುವುದಾಗಿ ಬಿಬಿಎಂಪಿ ಅಕಾರಿಗಳು ತಿಳಿಸಿದ್ದಾರೆ. ಅವರನ್ನು ಕರೆದೊಯ್ಯಲು ಅಗತ್ಯ ವ್ಯಾನ್‌ಗಳು ಆ ಕಾಲೊನಿಯಲ್ಲೇ ಇವೆ. ಆದರೂ ಅಷ್ಟೊಂದು ಮಂದಿಯನ್ನು ಕರೆದೊಯ್ದು ವಾಪಾಸ್‌ ಕರೆತರುವುದು ಕಷ್ಟ. ಒಂದು ವೇಳೆ ಅವರು ಅಕಾರಿಗಳ ಕಣ್ತಪ್ಪಿಸಿ ಪರಾರಿಯಾದಲ್ಲಿ, ಅಹಿತಕರ ಘಟನೆಗಳು ನಡೆದಲ್ಲಿ ಸಮಸ್ಯೆಯಾಗುತ್ತದೆ. ಹಾಗಾಗಿ ಅದಕ್ಕೆ ಬೇರೆ ಮಾರ್ಗ ಕಲ್ಪಿಸುವಂತೆ ಕಾಲೋನಿಯ ಅಕಾರಿಗಳು ಮನವಿ ಮಾಡಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಅಕಾರಿಗಳು ಕಾಲೋನಿ ಆವರಣದಲ್ಲಿನ ಸರಕಾರಿ ಶಾಲೆ ಇಲ್ಲವೇ, ಅಲ್ಲಿಯೇ ಬೂತ್‌ ತೆರೆಯುವುದು, ಅಥವಾ ಅಂಚೆ ಮೂಲಕ ಮತ ಚಲಾಯಿಸಲು ಕ್ರಮಕೈಗೊಳ್ಳುವುದೇ ಎಂಬ ಗೊಂದಲದಲ್ಲಿದ್ದಾರೆ.

ಎಲ್ಲೆಡೆ ಸಿದ್ಧತೆ

ರಾಜ್ಯದ ವಿವಿಧೆಡೆ ಒಟ್ಟು 14 ಭಿಕ್ಷುಕರ ಕೇಂದ್ರಗಳಿದ್ದು, ಆ ಎಲ್ಲಾ ಕೇಂದ್ರಗಳಲ್ಲೂ ಮತಚಲಾಯಿಸಲು ಅರ್ಹರನ್ನು ಪತ್ತೆ ಮಾಡಲಾಗುತ್ತಿದೆ. ಆ ಎಲ್ಲರಿಗೂ ಗುರುತಿನ ಚೀಟಿ ನೀಡಿ ಮತಚಲಾಯಿಸಲು ಅವಕಾಶ ನೀಡಲಾಗುವುದು. ಆಯಾ ನಗರ ಸಭೆ, ಮಹಾನಗರ ಪಾಲಿಕೆಗಳು ಅದಕ್ಕೆ ಸಿದ್ಧತೆ ನಡೆಸಿವೆ ಎನ್ನುತ್ತಾರೆ ಭಿಕ್ಷುಕರ ಕಾಲೊನಿಯ ಅಕಾರಿಗಳು.

ಭಿಕ್ಷುಕರ ವಸತಿ ಪತ್ತೆಯಾಗಿ ಅವರು ಇಲ್ಲಿಂದ ಮನೆಗೆ ಹೋದಲ್ಲಿ ಗುರುತಿನ ಚೀಟಿ ಅವರಿಗೆ ಕೊಡಲಾಗುವುದು. ಹೊರರಾಜ್ಯದವರಿಗೂ ಮತ ಹಾಕಲು ಅವಕಾಶ ನೀಡಲಾಗಿದೆ.

– ಶಿವಲಿಂಗಯ್ಯ, ಮೇಲ್ವಿಚಾರಕರು, ಭಿಕ್ಷುಕರ ಕಾಲೋನಿ.

ಹೈಕೋರ್ಟ್‌ ಆದೇಶದಂತೆ ಮುಖ್ಯ ಚುನಾವಣಾ ಅಕಾರಿಗಳು ನೀಡಿದ ಸೂಚನೆ ಮೇರೆಗೆ ಹೊರ ರಾಜ್ಯದ ನಿರಾಶ್ರಿತರಿಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ.

– ಮಂಜುನಾಥ್‌ ಎನ್‌.ಪ್ರಸಾದ್‌, ಆಯುಕ್ತರು, ಬಿಬಿಎಂಪಿ

Comments are closed.