ಕರ್ನಾಟಕ

ರೋಹಿಣಿ ಸಿಂಧೂರಿಗೆ ತೀವ್ರ ಹಿನ್ನಡೆ: ವರ್ಗಾವಣೆ ತಡೆ ಅರ್ಜಿ ವಜಾ

Pinterest LinkedIn Tumblr


ಹಾಸನ: ವರ್ಗಾವಣೆಯನ್ನು ಪ್ರಶ್ನಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಆಡಳಿತ ನ್ಯಾಯಮಂಡಳಿ (CAT)ವಜಾ ಮಾಡಿದೆ. ಇದರಿಂದಾಗಿ ರೋಹಿಣಿ ಅವರು ತೀವ್ರ ಹಿನ್ನಡೆ ಅನುಭವಿಸಿದ್ದು ವರ್ಗವಾಗಿ ಹೋಗಬೇಕಾಗಿರುವ ಅನಿವಾರ್ಯತೆ ಎದುರಾಗಿದೆ.

ಸರ್ಕಾರ ಕಾನೂನು ಬದ್ಧವಾಗಿಯೇ ವರ್ಗಾವಣೆ ಮಾಡಿದೆ ಎಂದು ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪೊನ್ನಣ್ಣ ಅವರು ವಾದ ಮಂಡಿಸಿದರು. ಪೊನ್ನಣ್ಣ ವಾದಕ್ಕೆ ಮಾನ್ಯತೆ ನೀಡಿ ಸಿಂಧೂರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಲಾಗಿದೆ.

ಹೈಕೋರ್ಟ್‌ ಮೊರೆ

ಆದೇಶದ ಬಗ್ಗೆ ಎಪ್ರಿಲ್‌ 19 ರಂದು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸುವುದಾಗಿ ವಕೀಲ ಸುಬ್ರಹ್ಮಣ್ಯ ಜೋಯಿಸ್‌ ಅವರು ತಿಳಿಸಿದ್ದಾರೆ.

ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ ಸ್ಥಾನಕ್ಕೆ ವರ್ಗಾವಣೆಗೊಂಡಿದ್ದರು.ಇದನ್ನು ಪ್ರಶ್ನಿಸಿ ಕೇಂದ್ರ ಆಡಳಿತ ನ್ಯಾಯಮಂಡಳಿಗೆ ಸಿಂಧೂರಿ ಅರ್ಜಿ ಸಲ್ಲಿಸಿದ್ದರು.

ಎ ಮಂಜು ವಿರುದ್ಧ ಸಮರ

ಚುನಾವಣೆ ಘೋಷಣೆ ನಂತರ ನೀತಿ ಸಂಹಿತೆ ಜಾರಿಯಲ್ಲಿರುವಾಗ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ನಿಯಮಬಾಹಿರವಾಗಿ ಕೆಲಸ ನಡೆಯುತ್ತಿದೆ ಎಂದು ಸ್ವತಃ ಜಿಲ್ಲಾಧಿಕಾರಿಯೇ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು.ಅದಾದ ಬಳಿಕ ಎ.ಮಂಜು ಅವರು, ಜಿಲ್ಲಾಧಿಕಾರಿ ದುರುದ್ದೇಶದಿಂದ ತಮ್ಮ ವಿರುದ್ಧ ಎಫ್ಐಆರ್‌ ದಾಖಲಿಸಿದ್ದು, ಜಿಲ್ಲಾಧಿಕಾರಿ ವರ್ಗ ಮಾಡುವಂತೆ ಕೋರಿ ಚುನಾವಣಾ ಆಯೋಗಕ್ಕೆ ಏ.7ರಂದು ದೂರು ಸಲ್ಲಿಸಿದ್ದರು. ಈ ಸಂಬಂಧ ಚುನಾವಣಾ ಆಯೋಗ ಮೈಸೂರು ಪ್ರಾದೇಶಿಕ ಆಯುಕ್ತರ ವರದಿ ಕೇಳಿತ್ತು. ವಿಚಾರಣೆ ನಡೆಸಿದ ಮೈಸೂರು ಪ್ರಾದೇಶಿಕ ಆಯುಕ್ತ ಶಿವಯೋಗಿ ಎನ್‌.ಕಳಸದ್‌, ಸಚಿವರು ರೋಹಿಣಿ ಸಿಂಧೂರಿ ವಿರುದ್ಧ ನೀಡಿರುವ ದೂರಿನಲ್ಲಿ ಯಾವುದೇ ಹುರುಳಿಲ್ಲ. ಇದೊಂದು ಆಧಾರ ರಹಿತ ಆರೋಪ ಎಂದು ವರದಿಯಲ್ಲಿ ಹೇಳಿದ್ದರು.

ರೋಹಿಣಿ ಸಿಂಧೂರಿ ಅವರನ್ನು ಮೈಸೂರಿಗೆ, ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ರಂದೀಪ್‌ ಡಿ.ಅವರನ್ನು ಹಾಸನಕ್ಕೆ ಸರ್ಕಾರ ವರ್ಗಾಯಿಸಿತ್ತು.

ಸರ್ಕಾರದ ಆದೇಶದ ವಿರುದ್ಧ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಮೆಟ್ಟಿಲೇರಿದ ರೋಹಿಣಿ ಸಿಂಧೂರಿ ಅವರು ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ತಂದು ಹಾಸನದಲ್ಲೇ ಉಳಿದುಕೊಂಡಿದ್ದರು.

-ಉದಯವಾಣಿ

Comments are closed.