ಕರ್ನಾಟಕ

5 ರುಪಾಯಿ ವೈದ್ಯ ಖ್ಯಾತಿಯ ಡಾ.ಶಂಕರೇಗೌಡ ಬಿಜೆಪಿ ಸೇರುವ ಸಾದ್ಯತೆ, ಮಂಡ್ಯದಲ್ಲಿ ಅಂಬರೀಶ್ ವಿರುದ್ಧ ಸ್ಪರ್ಧೆ?

Pinterest LinkedIn Tumblr


ಮಂಡ್ಯ: ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಟ ಅಂಬರೀಶ್ ಪ್ರಬಲ ಸ್ಪರ್ಧಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಅಂಬರೀಶ್ ವಿರುದ್ಧ ಸೆಣಸಲು 5 ರುಪಾಯಿ ವೈದ್ಯ ಖ್ಯಾತಿಯ ಡಾ.ಶಂಕರೇಗೌಡ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.

ಹೌದು.. ಮಂಡ್ಯದಲ್ಲಿ ಡಾ.ಶಂಕರೇಗೌಡ ಅವರು ಐದು ರುಪಾಯಿ ವೈದ್ಯ ಎಂದೇ ಖ್ಯಾತಿ ಪಡೆದವರು. ವೈದ್ಯಕೀಯ ಸೇವೆ ಕೇವಲ ಶ್ರೀಮಂತರಿಗೆ ಮಾತ್ರ ಎಂಬ ಪರಿಸ್ಥಿತಿ ಇರುವ ಈ ಕಾಲದಲ್ಲಿ ಕೇವಲ 5 ರುಪಾಯಿ ತೆಗೆದುಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಜಿ ಶಂಕರೇಗೌಡ ಅವರು ಇದೀಗ ವ್ಯಾಪಕ ಖ್ಯಾತಿ ಗಳಿಸಿದ್ದಾರೆ. ಶಂಕರೇ ಗೌಡ ಅವರ ಸೇವೆ ಕೇವಲ ಮಂಡ್ಯ ಮಾತ್ರವಲ್ಲದೇ ರಾಜ್ಯವೂ ಸೇರಿದಂತೆ ದೇಶ-ವಿದೇಶಗಳಲ್ಲೂ ಶಂಕರೇಗೌಡ ಅವರು ಕುರಿತು ಶ್ಲಾಘನೆ ವ್ಯಕ್ತವಾಗಿದೆ. ಇಂತಹ ಶಂಕರೇ ಗೌಡ ಅವರನ್ನೇ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.

ವಾಹಿನಿಯೊಂದು ವರದಿ ಮಾಡಿರುವಂತೆ ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಶಂಕರೇಗೌಡ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಸಿದ್ದು, ನಾಳೆ‌ ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಅಂಬರೀಶ್ ಸೋಲಿಸಲು ಮಾಸ್ಟರ್ ಪ್ಲ್ಯಾನ್
ಇನ್ನು ಈ ಬಾರಿ ಮಂಡ್ಯದಲ್ಲಿ ಅಂಬರೀಶ್ ಸೋಲಿಸಲು ಎಸ್ ಎಂ ಕೃಷ್ಣ ನೇತೃತ್ವದಲ್ಲಿ ಬಿಜೆಪಿ ರಣತಂತ್ರ ಸಿದ್ದಪಡಿಸುತ್ತಿದೆ. ಜೆಡಿಎಸ್ ಪ್ರಭಾವಿ ಮುಖಂಡರನ್ನು ತನ್ನತ್ತ ಸೆಳೆದು ಮಂಡ್ಯದಲ್ಲಿ ಶತಾಯಗತಾಯ ಖಾತೆ ತೆರೆಯಲು ಬಿಜೆಪಿ ಹರಸಾಹಸ ಮಾಡುತ್ತಿದೆ. ಜೆಡಿಎಸ್ ನಾಯಕರನ್ನ ಬಿಜೆಪಿ ಸೇರಿಸಿಕೊಳ್ಳುವುದರಿಂದ ಜೆಡಿಎಸ್’ನ ಬಹುತೇಕ ಮತಗಳು ಬಿಜೆಪಿ ಪಾಲಾಗಾಲಿವೆ ಎಂಬ ಆಲೋಚನೆ ಬಿಜೆಪಿ ನಾಯಕರದ್ದು.

ಮತ್ತೊಂದು ವರದಿಯನ್ವಯ ಕಳೆದೆರಡು‌ ದಿನದ ಹಿಂದೆ ಜೆಡಿಎಸ್’ನ‌ ಪ್ರಭಾವಿ ನಾಯಕ ಚಂದಗಾಲು ಶಿವಣ್ಣ ಬಿಜೆಪಿ ಸೇರಿದ್ದರು. ಚಂದಗಾಲು ಶಿವಣ್ಣರನ್ನು ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾನ್ನಾಗಿ ಹಾಗೂ ಶಂಕರೇಗೌಡರನ್ನ ಲೋಕಸಭಾ ಅಭ್ಯರ್ಥಿ ಮಾಡುವ ಭರವಸೆಯನ್ನು ಹಿರಿಯ ನಾಯಕರು ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಅಂಬರೀಶ್ ಅವರನ್ನು ಶತಾಯಗತಾಯ ಸೋಲಿಸಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ.

Comments are closed.