ಕರ್ನಾಟಕ

ಜಾತಿಗಣತಿ ಸಿದ್ಧಪಡಿಸಿ ಮುಚ್ಚಿಟ್ಟುಕೊಂಡಿದ್ದೇಕೆ?..ಸಿಎಂ ವಿರುದ್ಧ ಹರಿಹಾಯ್ದ ದೇವೇಗೌಡ

Pinterest LinkedIn Tumblr


ಬೆಂಗಳೂರು: ನೂರಾರು ಕೋಟಿ ವೆಚ್ಚ ಮಾಡಿ ಸಿದ್ಧಪಡಿಸಿರುವ ಜಾತಿ ಗಣತಿ ವರದಿಯನ್ನು ಬಹಿರಂಗಪಡಿಸದೆ ಮುಚ್ಚಿಟ್ಟುಕೊಂಡಿರುವುದು ಏಕೆ ಎಂದು ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಪಕ್ಷದ ಕಚೇರಿ ‘ಜೆಪಿ ಭವನ’ದಲ್ಲಿ ಶನಿವಾರ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು ”ವರದಿ ಬಹಿರಂಗಪಡಿಸಲು ಹಿಂದೇಟು ಹಾಕುತ್ತಿರುವುದು ಏಕೆ? ಯಾವ್ಯಾವ ಜಾತಿ ಸ್ಥಿತಿಗತಿ ಏನು ಎಂಬುದು ಗೊತ್ತಾಗಲಿ. ನೀವು ಆಸಕ್ತಿ ವಹಿಸಿ ಮಹತ್ವಾಕಾಂಕ್ಷೆಯಿಂದ ಸಿದ್ಧಪಡಿಸಿರುವ ಜಾತಿ ಜನಗಣತಿಯನ್ನು ಬಹಿರಂಗಪಡಿಸಿ” ಎಂದು ಸಿಎಂಗೆ ಸವಾಲೆಸೆದರು.

ಇಂಡಿಯಾ ಟುಡೇ -ಕಾರ್ವಿ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಗೆಲುವು ಹಾಗೂ ಸಿಎಂ ಸಿದ್ದರಾಮಯ್ಯ ಜನಪ್ರಿಯರು ಎಂದು ಹೇಳಿದ್ದು, ಇಂತಹ ಸಮೀಕ್ಷೆಗಳು ಬಹಳಷ್ಟು ಬಂದಿವೆ ಎಂದು ಲೇವಡಿ ಮಾಡಿದ ದೇವೇಗೌಡರು ”2013ರ ವಿಧಾನಸಭೆ ಚುನಾವಣೆಯಲ್ಲಿ ಇದೇ ಸಮೀಕ್ಷೆಯಲ್ಲಿ ಜೆಡಿಎಸ್‌ 13 ಸ್ಥಾನ ಗೆಲ್ಲುತ್ತೆ ಎಂದು ಹೇಳಿತ್ತು ಆದರೆ, ಪಕ್ಷ 40 ಸ್ಥಾನ ಗೆದ್ದಿತು. ಈ ಬಾರಿ 43 ಸ್ಥಾನ ಬರುತ್ತವೆ ಎಂದು ಹೇಳಿದ್ದು, ನಾವು 120 ಸ್ಥಾನ ಗೆಲ್ಲುವುದು ಶತಸಿದ್ಧ . ಸಮೀಕ್ಷೆಗಳು ನೀಡುವ ಅಂಕಿಗಳನ್ನು 3 ರಿಂದ ಗುಣಿಸಿದರೆ ಜೆಡಿಎಸ್‌ನ ನಿಜವಾದ ಶಕ್ತಿಯ ಬಗ್ಗೆ ಸ್ಪಷ್ಟತೆ ಸಿಗುತ್ತದೆ” ಎಂದರು.

ಮಹದೇವಪ್ಪ ಎಂಬಿಬಿಎಸ್‌ ಮುಗಿಸಿದ್ದರಾ?

”ಎಂಬಿಬಿಎಸ್‌ ಮುಗಿಸದಿದ್ದರೂ ಡಾ.ಎಚ್‌.ಸಿ.ಮಹದೇವಪ್ಪ ಅವರನ್ನು ಕರೆತಂದು ಆರೋಗ್ಯ ಸಚಿವರನ್ನಾಗಿ ಮಾಡಿದ್ದು ದೇವೇಗೌಡರು. ಎಲ್ಲ ಜಾತಿ, ಸಮುದಾಯಗಳ ಬಗ್ಗೆ ಸ್ಪಷ್ಟ ಕಲ್ಪನೆ ಇದ್ದದ್ದು ದೇವೇಗೌಡರಿಗೆ ಮಾತ್ರ. ತಮ್ಮನ್ನು ಗುರುತಿಸಿದ್ದು ಯಾರು, ಬೆಳೆಸಿದ್ದು ಯಾರು ಎಂಬುದನ್ನು ಸಿದ್ದರಾಮಯ್ಯ ಸುತ್ತಮುತ್ತ ಇರುವವವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು,”ಎಂದು ಜೆಡಿಎಸ್‌ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್‌.ಸಿಂಧ್ಯ ಟೀಕಿಸಿದರು.

Comments are closed.