ಕರ್ನಾಟಕ

5 ಕೋಟಿ ದಾಟಲಿದೆ ಮತದಾರರ ಸಂಖ್ಯೆ​​​​​​​

Pinterest LinkedIn Tumblr


ಬೆಂಗಳೂರು: 2018ರ ರಾಜ್ಯ ವಿಧಾನಸಭಾ ಚುನಾವಣೆಗೆ ಒಟ್ಟು ಮತದಾರರ ಸಂಖ್ಯೆ ಐದು ಕೋಟಿ ದಾಟುವ ನಿರೀಕ್ಷೆಯಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ಹೇಳಿದ್ದಾರೆ.

ಪ್ರಸ್‌ ಕ್ಲಬ್‌ ಆಫ್ ಬೆಂಗಳೂರು ಹಾಗೂ ಬೆಂಗಳೂರು ವರದಿಗಾರರ ಕೂಟ ಶನಿವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಇದೇ ಫೆ.28ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿ ಪ್ರಕಾರ ರಾಜ್ಯದ ಒಟ್ಟು ಮತದಾರರ ಸಂಖ್ಯೆ 4.96 ಕೋಟಿ ಇದೆ. ಹೆಸರು ಸೇರ್ಪಡೆಗೆ ಎ.8ರಂದು ಮಿಂಚಿನ ನೋಂದಣಿ ಅಭಿಯಾನ ನಡೆಸಲಾಯಿತು. ಆಗ 6.45 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಅಲ್ಲದೇ ಹೊಸದಾಗಿ ಹೆಸರು ಸೇರಿಸಲು ಎ.14ರವರೆಗೆ ಅವಕಾಶವಿತ್ತು. ಈ ಹಿನ್ನೆಲೆಯಲ್ಲಿ ಮತದಾರರ ಸಂಖ್ಯೆ ಐದು ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಪ್ರತಿ ಬಾರಿ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆಗೆ ವಿಶೇಷ ಒತ್ತು ನೀಡುತ್ತದೆ. ಆದರಂತೆ ಈ ಬಾರಿಯೂ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನವನ್ನು ರಾಜ್ಯದಲ್ಲಿ ಅತ್ಯಂತ ಮತದಾರ ಸ್ನೇಹಿಯನ್ನಾಗಿ ನಡೆಸಲಾಯಿತು. ಹೊಸ ಹೆಸರುಗಳ ಸೇರ್ಪಡೆಗೆ ಸಾಕಷ್ಟು ಅವಕಾಶಗಳನ್ನು ನೀಡಲಾಯಿತು. ಇದಕ್ಕಾಗಿ ವಿಭಿನ್ನ ಜಾಗೃತಿ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಯಿತು. ಪರಿಣಾಮವಾಗಿ ಏಳು ಲಕ್ಷ ಯುವ ಮತದಾರರು ಸೇರಿದಂತೆ 15 ಲಕ್ಷ ಹೊಸ ಮತದಾರರು ಸೇರ್ಪಡೆಗೆಯಾಗಿದ್ದಾರೆ.

ಅದರಂತೆ ಒಟ್ಟು ಮತದಾರರ ಸಂಖ್ಯೆ 4.96 ಕೋಟಿ ಆಗಿದೆ. ಹೆಸರು ಸೇರ್ಪಡೆಗೆ ಹೆಚ್ಚುವರಿ ಅವಕಾಶ ನೀಡಿಲಾಗಿದೆ. ತೃತೀಯ ಲಿಂಗಿಗಳು, ಬುಡಕಟ್ಟು ಸಮುದಾಯಗಳು ಮತ್ತು ವಸತಿರಹಿತರ ಹೆಸರು ಸೇರ್ಪಡೆಗೆ ವಿಶೇಷ ಗಮನ ಹರಿಸಲಾಗುತ್ತಿದೆ. ಇನ್ನಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳನ್ನು ಪರಿಶೀಲಿಸಿ ತ್ವರಿತಗತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ. ಮತದಾರರ ಸಂಖ್ಯೆ ಐದು ಕೋಟಿ ದಾಟಬಹುದು ಎಂದು ಆಯೋಗ ಅಂದಾಜಿಸಿದೆ. ಪರಿಷ್ಕೃತ ಪಟ್ಟಿ ಪ್ರಕಟಿಸಿದ ಬಳಿಕವಷ್ಟೇ ಅಂತಿಮ ಮತದಾರರ ಸಂಖ್ಯೆ ನಿಖರವಾಗಿ ಗೊತ್ತಾಗಲಿದೆ ಎಂದರು.

ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆ ಎಂಬುದು 2018ರ ವಿಧಾನಸಭೆ ಚುನಾವಣೆಗೆ ಘೋಷ ವಾಕ್ಯ ನೀಡಲಾಗಿದೆ. ಅದಕ್ಕೆ ತಕ್ಕಂತೆ ಆಯೋಗ ನಡೆದುಕೊಳ್ಳುತ್ತಿದೆ. ಎಲ್ಲ ವರ್ಗದ ಮತದಾರರು, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಸಿಬ್ಬಂದಿ ಎಲ್ಲರನ್ನೂ ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವ ಧ್ಯೇಯ ಇಟ್ಟುಕೊಳ್ಳಲಾಗಿದೆ. ಶಾಂತಿಯುತ, ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸುವುದು ನಮ್ಮ ಶಪಥ ಆಗಿದೆ. ಈ ಇಡೀ ಪ್ರಕ್ರಿಯೆಯಲ್ಲಿ ಮಾಧ್ಯಮದ ಸಹಕಾರ ಸಹ ಬಹಳ ಮುಖ್ಯವಾಗಿ ಬೇಕು. ಈ ಬಾರಿಯ ಚುನಾವಣೆಯಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಕೆಲವು ಇ-ವ್ಯವಸ್ಥೆ, ಹಲವು ಆ್ಯಪ್‌ಗ್ಳನ್ನು ರೂಪಿಸಲಾಗಿದೆ. ಚುನಾವಣೆಗೆ ಆಯೋಗ ಗರಿಷ್ಠ ಸಿದ್ಧತೆ ಮಾಡಿಕೊಂಡಿದೆ ಸಂಜೀವ ಕುಮಾರ್‌ ತಿಳಿಸಿದರು.

ಮತಗಟ್ಟೆಗಳು ನೆಲಮಹಡಿಯಲ್ಲಿ: 2013ರ ಚುನಾವಣೆಯಲ್ಲಿ ರಾಜ್ಯದ ಸುಮಾರು 800ಕ್ಕೂ ಹೆಚ್ಚು ಮತಗಟ್ಟೆಗಳನ್ನು ಮೊದಲ ಮಹಡಿಯಲ್ಲಿ ಸ್ಥಾಪಿಸಲಾಗಿತ್ತು. ಇದರಿಂದ ಹಿರಿಯ ನಾಗರೀಕರು, ಅಂಗವೀಕಲರಿಗೆ ತುಂಬಾ ತೊಂದರೆಗಳು ಆಗಿದ್ದವು. ಈ ಬಗ್ಗೆ ಅನೇಕ ದೂರು ಮತ್ತು ಆಕ್ಷೇಪಣೆಗಳು ಸಹ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ 2018ರ ಚುನಾವಣೆಗೆ ಮತದಾನ ನಡೆಯುವ 41,314 ಸ್ಥಳಗಳಲ್ಲಿ 58,546 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಅದೆಲ್ಲವೂ ನೆಲಮಹಡಿಯಲ್ಲಿರಲಿವೆ. ಈಗಾಗಲೇ ಪ್ರತಿಯೊಂದು ಮತಗಟ್ಟೆಯ ಸ್ಥಳ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳು ಖಾತರಿಪಡಿಸಿಕೊಂಡಿದ್ದಾರೆ. ಮತಗಟ್ಟೆಗಳಲ್ಲಿ ಮೂಲ ಸೌಕರ್ಯಗಳನ್ನು ಪೂರೈಸುವ ಸಿದ್ಧತೆ ಪೂರ್ಣಗೊಂಡಿದೆ ಎಂದು ಇದೇ ವೇಳೆ ಸಂಜೀವ್‌ ಕುಮಾರ್‌ ಮಾಹಿತಿ ನೀಡಿದರು.

ಮಾಧ್ಯಮ ಸಂವಾದದಲ್ಲಿ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಗಳಾದ ಬಿ.ಆರ್‌. ಮಮತಾ, ಕೆ.ಜಿ. ಜಗದೀಶ್‌, ಉಜ್ವಲ್‌ ಕುಮಾರ್‌ ಘೋಷ್‌, ಜಂಟಿ ಚುನಾವಣಾಧಿಕಾರಿಗಳಾದ ಕೆ.ಎನ್‌. ರಮೇಶ್‌, ರಾಘವೇಂದ್ರ, ನಗರ ಜಿಲ್ಲಾಧಿಕಾರಿ ದಯಾನಂದ್‌, ಪ್ರಸ್‌ಕ್ಲಬ್‌ ಅಧ್ಯಕ್ಷ ಸದಾಶಿವ ಶೆಣೈ ಹಾಗೂ ಪದಾಧಿಕಾರಿಗಳು ಮತ್ತಿತರರು ಇದ್ದರು.

“ಚುನಾವಣಾ ವೆಚ್ಚದ ಮಿತಿ 28 ಲಕ್ಷ ರೂ. ಮಾಡಿರುವುದಕ್ಕೆ ರಾಜಕೀಯ ಪಕ್ಷಗಳು ಅಪಸ್ವರ ಎತ್ತಿವೆ. ಕೆಲವರು ಲಿಖೀತವಾಗಿ ಮನವಿ ಸಹ ಕೊಟ್ಟಿದ್ದಾರೆ. ಆದರೆ, ವೆಚ್ಚ ನಿಗದಿಪಡಿಸುವ ಅಧಿಕಾರಿ ಕೇಂದ್ರ ಚುನಾವಣಾ ಆಯೋಗಕ್ಕೆ ಇದೆ. ಈ ವಿಚಾರದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಯಾವುದೇ ಅಧಿಕಾರವಿಲ್ಲ. ನಮಗೆ ಬಂದಿರುವ ಆಕ್ಷೇಪ, ಮನವಿಗಳನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ’.
– ಸಂಜೀವ್‌ ಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ.

-ಉದಯವಾಣಿ

Comments are closed.