ಕರ್ನಾಟಕ

ಕೇವಲ ಕಾರಿಗಾಗಿ ಚಾಲಕನನ್ನೇ ಹತ್ಯೆಗೈದ ಮೂವರು ಹಂತಕರು !

Pinterest LinkedIn Tumblr

ಬೆಂಗಳೂರು: ಹೊಸೂರಿನ ಬೆದ್ರಪಲ್ಲಿಯ ಮೋರಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಓಲಾ ಕ್ಯಾಬ್‌ ಚಾಲಕ ರಿನ್‌ಸನ್ (23) ಕೊಲೆ ಪ್ರಕರಣ ಭೇದಿಸಿರುವ ದೇವರಜೀವನಹಳ್ಳಿ ಪೊಲೀಸರು, ಸಹೋದರರಿಬ್ಬರು ಸೇರಿ ಮೂವರನ್ನು ಬಂಧಿಸಿದ್ದಾರೆ.

ಅಸ್ಸಾಂನ ಅರೂಪ್ ಶಂಕರ್‌ ದಾಸ್‌ (36), ಅವರ ತಮ್ಮ ದೀಮನ್ ಶಂಕರ್‌ (26) ಹಾಗೂ ಒಡಿಸ್ಸಾದ ಭರತ್‌ ಪ್ರಧಾನ್ (22) ಬಂಧಿತರು. ಈ ಆರೋಪಿಗಳು, ಮಾ. 18ರಂದು ಬಾಡಿಗೆ ನೆಪದಲ್ಲಿ ರಿನ್‌ಸನ್‌ರನ್ನು ಕರೆದೊಯ್ದು ಕೊಲೆ ಮಾಡಿದ್ದರು. ನಂತರ, ಕಾರು ಕದ್ದುಕೊಂಡು ಹೋಗಿದ್ದರು ಎಂದು ಪೊಲೀಸ್ ಕಮಿಷನರ್‌ ಟಿ.ಸುನೀಲ್‌ಕುಮಾರ್‌ ತಿಳಿಸಿದರು.

ಕೇರಳದ ರಿನ್‌ಸನ್, ಪೋಷಕರ ಜತೆ ಕಾವಲ್‌ಬೈರಸಂದ್ರ ಸಮೀಪದ ಮುನಿನಂಜಪ್ಪ ಬ್ಲಾಕ್‌ನಲ್ಲಿ ನೆಲೆಸಿದ್ದರು. ಜ. 18ರ ರಾತ್ರಿ ಕೆಲಸಕ್ಕೆ ಹೋಗಿದ್ದ ಅವರು, ಎರಡು ದಿನಗಳಾದರೂ ಮನೆಗೆ ವಾಪಸಾಗಿರಲಿಲ್ಲ. ಮೊಬೈಲ್ ಸ್ವಿಚ್ಡ್ಆಫ್ ಆಗಿದ್ದರಿಂದ ಆತಂಕಕ್ಕೆ ಒಳಗಾದ ಅವರ ತಂದೆ ಟಿ.ಎಲ್.ಸೋಮನ್, ಮಗ ನಾಪತ್ತೆಯಾಗಿರುವ ಬಗ್ಗೆ ದೇವರಜೀವನಹಳ್ಳಿ ಠಾಣೆಗೆ ದೂರು ಕೊಟ್ಟಿದ್ದರು.

ಮಾ. 27ರಂದು ಶವ ಪತ್ತೆಯಾಗಿತ್ತು. ಯಾರೋ ಕೊಲೆ ಮಾಡಿರುವ ಅನುಮಾನವಿದ್ದಿದ್ದರಿಂದ ವಿಶೇಷ ತಂಡ ರಚಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದೇವೆ. ರೆನಾಲ್ಟ್ ಲಾ‌ಡ್ಜಿ ಕಾರು, ಐ- ಪೋನ್, ಮೊಬೈಲ್ ಹಾಗೂ ಕಾರಿನ ಮೂಲ ದಾಖಲಾತಿಗಳನ್ನು ಆರೋಪಿಗಳಿಂದ ಜಪ್ತಿ ಮಾಡಿದ್ದೇವೆ ಎಂದರು.

ಉಸಿರುಗಟ್ಟಿಸಿ ಕೊಂದರು: ಒರಿಸ್ಸಾ ಹಾಗೂ ಅಸ್ಸಾಂನಿಂದ ಕೂಲಿ ಕಾರ್ಮಿಕರನ್ನು ನಗರಕ್ಕೆ ಕರೆತಂದು ಕಟ್ಟಡ ನಿರ್ಮಾಣ ಕೆಲಸಗಳಿಗೆ ನಿಯೋಜಿಸುವ ಗುತ್ತಿಗೆದಾರರಾಗಿದ್ದ ಆರೋಪಿಗಳು, ಕಾಚರನಾಯಕನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಹೆಚ್ಚಿನ ಹಣ ಸಂಪಾದನೆಗಾಗಿ, ಕಾರುಗಳ್ನು ಕಳವು ಮಾಡಲು ಸಂಚು ರೂಪಿಸಿದ್ದರು. ಪೊಲೀಸರಿಗೆ ಸಿಕ್ಕಿ ಬೀಳಬಾರದೆಂದು ಅವರು ಮೊಬೈಲ್‌ ಬಳಸದಿರಲು ತೀರ್ಮಾನಿಸಿದ್ದರು.

ಮಾ. 18ರಂದು ರಾತ್ರಿ 2 ಗಂಟೆಗೆ ದೇವರಜೀವನಹಳ್ಳಿಯ ವೀರಣ್ಣಪಾಳ್ಯ ರೈಲ್ವೆ ಗೇಟ್ ಬಳಿ ಬಂದಿದ್ದ ಆರೋಪಿಗಳು, ಓಲಾ ಕ್ಯಾಬ್‌ಗಳಿಗಾಗಿ ಮೂವರು ಚಾಲಕರನ್ನು ಕೇಳಿದ್ದರು. ಮೊಬೈಲ್‌ ಆ್ಯಪ್‌ನಲ್ಲಿ ಬುಕ್ಕಿಂಗ್‌ ಮಾಡಿದರೆ ಮಾತ್ರ ಬರುವುದಾಗಿ ಅವರು ಹೇಳಿದ್ದರು. ಆರೋಪಿಗಳ ಬಳಿ ಮೊಬೈಲ್‌ ಇಲ್ಲದಿದ್ದರಿಂದ ಬುಕ್ಕಿಂಗ್‌ ಮಾಡಿರಲಿಲ್ಲ.

ಅದೇ ವೇಳೆ ಚಾಲಕ ರಿನ್‌ಸನ್, ತಮ್ಮ ಕಾರಿನೊಂದಿಗೆ ಸ್ಥಳಕ್ಕೆ ಬಂದಿದ್ದರು. ಅವರ ಬಳಿ ಹೋಗಿದ್ದ ಆರೋಪಿಗಳು, ‘₹1,500 ಕೊಡುತ್ತೇವೆ. ಹೊಸೂರಿಗೆ ಬಿಟ್ಟು ಬನ್ನಿ’ ಎಂದಿದ್ದರು. ಅದಕ್ಕೆ ಒಪ್ಪಿದ್ದ ರಿನ್‌ಸನ್‌, ಮೂವರನ್ನು ಹತ್ತಿಸಿಕೊಂಡು ಕೆ.ಆರ್.ಪುರ, ಸಿಲ್ಕ್ ಬೋರ್ಡ್, ಅತ್ತಿಬೆಲೆ ಮೂಲಕ ಹೊಸೂರು ತಲುಪಿದ್ದರು. ಮಾರ್ಗ ಮಧ್ಯೆ ಸಿಪ್‌ ಕಾರ್ಟ್ ಕೈಗಾರಿಕಾ ಪ್ರದೇಶದಲ್ಲಿ ಆರೋಪಿಯೊಬ್ಬ ಮೂತ್ರ ವಿಸರ್ಜನೆಗಾಗಿ ಕಾರು ನಿಲ್ಲಿಸುವಂತೆ ಹೇಳಿದ್ದ. ನಿರ್ಜನ ಪ್ರದೇಶವಾಗಿದ್ದರಿಂದ ಭಯಗೊಂಡು ಚಾಲಕ, ಕಾರು ನಿಲ್ಲಿಸಿರಲಿಲ್ಲ.

‘ಬೇಡರಹಳ್ಳಿ ಗ್ರಾಮದಲ್ಲಿ ನಮ್ಮ ಮನೆ ಇದೆ’ ಎಂದು ಹೇಳಿದ್ದ ಆರೋಪಿಗಳು, ಅದೇ ಗ್ರಾಮದಲ್ಲಿ ಕಾರು ನಿಲ್ಲಿಸುವಂತೆ ಹೇಳಿದ್ದರು. ಕಾರು ನಿಲ್ಲಿಸುತ್ತಿದ್ದಂತೆ ಚಾಲಕನ ಕುತ್ತಿಗೆ ಹಾಗೂ ಬಾಯಿಯನ್ನು ದೀಮನ್‌ ಒತ್ತಿ ಹಿಡಿದಿದ್ದ. ಮತ್ತೊಬ್ಬ ಆರೋಪಿ, ಚಾಕು ಹಿಡಿದು ಹೆದರಿಸಿದ್ದ. ಕೈಯಿಂದ ಹೊಟ್ಟೆ, ಮುಖಕ್ಕೆ ಗುದ್ದಿದ್ದ. ಇನ್ನೊಬ್ಬ ಆರೋಪಿ ಅರೂಪ್, ಸ್ಕ್ರೂ ಡ್ರೈವರ್‌ನಿಂದ ಚಾಲಕನಿಗೆ ತಿವಿದು, ಕೈಯಿಂದ ಹೊಡೆದಿದ್ದ. ನಂತರ, ಟವಲ್‌ನಿಂದ ಕುತ್ತಿಗೆ ಬಿಗಿದಿದ್ದ. ಉಸಿರುಗಟ್ಟಿ ರಿನ್‌ಸನ್‌ ಸ್ಥಳದಲ್ಲೇ ಮೃತಪಟ್ಟಿದ್ದ’ ಎಂದು ಟಿ.ಸುನೀಲ್‌ಕುಮಾರ್‌ ತಿಳಿಸಿದರು.

‘ಚಾಲಕನ ಬಳಿ ಇದ್ದ ನಗದು, ಮೊಬೈಲ್‌ ತೆಗೆದುಕೊಂಡಿದ್ದ ಆರೋಪಿಗಳು, ಶವವನ್ನು ಮೋರಿಯಲ್ಲಿ ಬಿಸಾಕಿದ್ದರು. ನಂತರ, ಕಾರಿನ ಸಮೇತ ಪರಾರಿಯಾಗಿದ್ದರು. ಮರುದಿನದಿಂದ ಕಾರು ಮಾರಾಟಕ್ಕೆ ಯತ್ನಿಸಿದ್ದರು. ಯಾರೊಬ್ಬರೂ ಕಾರು ಖರೀದಿ ಮಾಡಿರಲಿಲ್ಲ’ ಎಂದರು.

ಅಪಹರಣ ಪ್ರಕರಣದ ಆರೋಪಿಗಳು: ಕಾರು ಕಳವು ಮಾಡುವ ಸಂಚು ರೂಪಿಸುವ ಮುನ್ನ ಆರೋಪಿಗಳು, ಆರ್‌.ಎಂ.ಸಿ ಯಾರ್ಡ್‌ನಲ್ಲಿಯ ಭದ್ರತಾ ಸಿಬ್ಬಂದಿ ಜೆಂಟು ದಾಸ್‌ ಅವರನ್ನು ಅಪಹರಿಸಿದ್ದರು. ನಂತರ, ಜೆಂಟುದಾಸ್ ಅವರ ಸಹೋದರನಿಗೆ ಕರೆ ಮಾಡಿ ₹5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.

ಬಡತನವಿದ್ದಿದ್ದರಿಂದ ಅಷ್ಟು ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಅದರ ಮಧ್ಯೆಯೇ ಜೆಂಟುದಾಸ್‌, ಆರೋಪಿಗಳಿಂದ ತಪ್ಪಿಸಿಕೊಂಡು ಬಂದಿದ್ದರು. ನಂತರ ಆರ್‌.ಎಂ.ಸಿ ಯಾರ್ಡ್‌ ಠಾಣೆಯಲ್ಲಿ ದೂರು ನೀಡಿದ್ದರು. ಅಂದಿನಿಂದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು ಎಂದು ಸುನೀಲ್‌ಕುಮಾರ್‌ ತಿಳಿಸಿದರು.

ಮೃತನ ಮೊಬೈಲ್‌ ಬಳಸಿ ಸಿಕ್ಕಿಬಿದ್ದರು

‘ರಿನ್‌ಸನ್‌ ಅವರನ್ನು ಕೊಲೆ ಮಾಡಿದ ಬಳಿಕ, ಅವರ ಎರಡು ಮೊಬೈಲ್‌ಗಳನ್ನು ಆರೋಪಿಗಳು ತಮ್ಮ ಬಳಿ ಇಟ್ಟುಕೊಂಡಿದ್ದರು. ಅದರಲ್ಲಿ ಒಂದು ಮೊಬೈಲ್‌ನನ್ನು ಇತ್ತೀಚೆಗೆ ದೀಮನ್‌ ಶಂಕರ್‌ ದಾಸ್‌ ಬಳಸಿದ್ದ. ಅದರಿಂದಲೇ ಸುಳಿವು ಸಿಕ್ಕಿತ್ತು’ ಎಂದು ತನಿಖಾಧಿಕಾರಿಗಳು ತಿಳಿಸಿದರು.

Comments are closed.