ಕರ್ನಾಟಕ

ದಲಿತರ ಮನೆಯಲ್ಲಿ ಬಿಎಸ್‌ವೈ ಉಪಹಾರ

Pinterest LinkedIn Tumblr


ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್‌.ಯಡಿಯೂರಪ್ಪ ಅವರು ಶನಿವಾರ ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿ ನಂತರ ಅಂಬೇಡ್ಕರ್‌ ಭಾವಚಿತ್ರ ಮೆರೆವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನ ತಮ್ಮ ನಿವಾಸದಲ್ಲಿ ಸಫಾಯಿ ಕರ್ಮಚಾರಿಗಳೊಂದಿಗೆ ಸಹಭೋಜನ ಸೇವಿಸಿ ಜಯಂತಿ ಆಚರಿಸಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆ ಅಂಬೇಡ್ಕರ್‌ ಜಯಂತಿ ದಿನದಂದೇ ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಯಡಿಯೂರಪ್ಪನವರು ಮೊದಲಿನಿಂದಲೂ ಬಸವಣ್ಣನವರ ತತ್ವದಡಿ, ಅಂಬೇಡ್ಕರ್‌ ಹಾದಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ ಎಂದು ತಿಳಿಸಿದರು.

ಶನಿವಾರ ಬೆಳಗ್ಗೆ 10.30ಕ್ಕೆ ನೆಲಮಂಗಲದ ದಲಿತರ ಕಾಲೋನಿಗೆ ಭೇಟಿ ನೀಡಿ ಸಂವಾದ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ದಲಿತರ ಮನೆಯಲ್ಲಿ ಉಪಾಹಾರ ಸೇವಿಸುತ್ತಾರೆ. ನಂತರ ಶಾಂತಿನಗರದಲ್ಲಿ ಮಧ್ಯಾಹ್ನ 12.30ಕ್ಕೆ ಅಂಬೇಡ್ಕರ್‌ ಭಾವಚಿತ್ರ ಮೆರವಣಿಗೆ ಕಾರ್ಯಕ್ರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 2 ಗಂಟೆ ಯಡಿಯೂರಪ್ಪನವರ ನಿವಾಸವಿರುವ ವಾರ್ಡ್‌ನ ಸಫಾಯಿ ಕರ್ಮಚಾರಿಗಳೊಂದಿಗೆ ಸಂವಾದ ನಡೆಸಿ ಬಳಿಕ ಮನೆಯಲ್ಲೇ ಸಹಭೋಜನ ನಡೆಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ದೊಡ್ಡಬಳ್ಳಾಪುರದ ನೇಕಾರರ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ ನಿಲುವು ಸ್ಪಷ್ಟಪಡಿಸಲಿ: ಪ್ರಧಾನಿಯವರು ಗುರುವಾರ ಚೆನ್ನೈಗೆ ಭೇಟಿ ನೀಡುವ ವೇಳೆ ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ಟ್ವೀಟ್‌ ಮಾಡಿರುವುದು ಕನ್ನಡಿಗರಿಗೆ ಅವಮಾನ ಮಾಡಿದಂತಾಗಿದೆ. ತಮಿಳನಾಡಿನ ಸಂಸದರು, ಅಲ್ಲಿನ ಚಲನಚಿತ್ರ ಕಲಾವಿದರ ಧಾಟಿಯಲ್ಲಿ “ಗೋ ಬ್ಯಾಕ್‌ ಪಿಎಂ’ ಎಂದು ಟ್ವೀಟ್‌ ಮಾಡಿದ್ದಾರೆ.

ಆ ಮೂಲಕ ಕರ್ನಾಟಕದ ವಾದಕ್ಕೆ ವಿರುದ್ಧವಾಗಿರುವ ನಿಲುವನ್ನು ಬೆಂಬಲಿಸಿದಂತಾಗಿದೆ. ಹಾಗಾಗಿ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರು ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಕೂಡಲೇ ರಮ್ಯಾ ಅವರನ್ನು ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ವಿಭಾಗದಿಂದ ತೆಗೆದುಹಾಕಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

-ಉದಯವಾಣಿ

Comments are closed.