ಕರ್ನಾಟಕ

ಪಾರ್ಸಲ್‌ ಹೆಸರಿನಲ್ಲಿ ಲಕ್ಷಾಂತರ ರೂ. ವಂಚಿಸುತ್ತಿದ್ದವರ ಸೆರೆ

Pinterest LinkedIn Tumblr


ಬೆಂಗಳೂರು: ವಿದೇಶಿ ಕರೆನ್ಸಿ ತುಂಬಿರುವ ಪಾರ್ಸೆಲ್‌ ಬಂದಿದೆ ಎಂದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ದೆಹಲಿ ಮೂಲದ ಮೂವರು ಸೈಬರ್‌ ಕ್ರೈಂ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಜಾನ್‌ರಾಜನ್‌ (27), ಪ್ರಶಾಂತ್‌ ಸಿಂಗ್‌ (22) ಹಾಗೂ ನಾಗರಾಜ್‌ ಬಂಧಿತರು.

ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಆರೋಪಿಗಳು ಆನ್‌ಲೈನ್‌ ಮೂಲಕ ಸಾರ್ವಜನಿಕರಿಗೆ ಲಕ್ಷಾಂತರ ರೂ. ವಂಚಿಸಿದ್ದಾರೆ. ಬಂದ ಹಣದಲ್ಲಿ ದೆಹಲಿಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಆರೋಪಿಗಳು ಬಸವನಗರದ ಶಿಕ್ಷಕಿರೊಬ್ಬರಿಗೆ 7.20 ಲಕ್ಷ ರೂ. ವಂಚಿಸಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು 2017 ಜ.16 ರಂದು ಬಸವನಗರದ ಶಿಕ್ಷಕಿರೊಬ್ಬರಿಗೆ ಕರೆ ಮಾಡಿ, ವಿದೇಶದಿಂದ ಮಾರ್ಷಲ್‌ ಎಂಬುವವರಿಂದ ಪಾರ್ಸೆಲ್‌ ಬಂದಿದೆ. ಈ ಪಾರ್ಸೆಲ್‌ ಮೇಲೆ ನಿಮ್ಮ ಮೊಬೈಲ್‌ ಸಂಖ್ಯೆ ಬರೆದಿದ್ದು, ಕಸ್ಟಮ್ಸ್‌ ಕ್ಲಿಯರೆನ್ಸ್‌ಗೆ 35 ಸಾವಿರ ರೂ. ಪಾವತಿಸಬೇಕಿದೆ ಎಂದು ಹೇಳಿ ಆನ್‌ಲೈನ್‌ ಮೂಲಕ 35 ಸಾವಿರ ರೂ.ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು.

ಹಣ ಖಾತೆಗೆ ವರ್ಗಾವಣೆಯಾಗುತ್ತಿದ್ದಂತೆ ಶಿಕ್ಷಕಿ ತಮ್ಮನ್ನು ನಂಬಿದ್ದಾರೆ ಎಂದುಕೊಂಡು ಅವರಿಂದ ಇನ್ನಷ್ಟು ಹಣ ಕಸಿಯಲು ಮುಂದಾದ ಆರೋಪಿಗಳು ಮತ್ತೆ ಕರೆ ಮಾಡಿ, ಪಾರ್ಸೆಲ್‌ನಲ್ಲಿ ಅಪಾರ ಪ್ರಮಾಣದ ವಿದೇಶಿ ಕರೆನ್ಸಿಗಳಿವೆ. ಹೀಗಾಗಿ ದಂಡ ರೂಪದಲ್ಲಿ 1.10 ಲಕ್ಷ ರೂ. ಪಾವತಿಸಬೇಕು ಎಂದು ಹೇಳಿ ಹಲವು ಬಾರಿ ಅವರ ಖಾತೆಯಿಂದ ಕಳೆದೊಂದು ವರ್ಷದಲ್ಲಿ 75 ಸಾವಿರ, 1.50 ಲಕ್ಷ , 2 ಲಕ್ಷ, 1 ಲಕ್ಷ ಹಾಗೂ 50 ಸಾವಿರ ರೂ. ಒಟ್ಟು 7.20 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ನಕಲಿ ಇ-ಮೇಲ್‌: ಅನುಮಾನಗೊಂಡ ಶಿಕ್ಷಕಿ, ಈ ಬಗ್ಗೆ ಕೇಳಿದಾಗ ಭಾರತೀಯ ರಿಸರ್ವ್‌ ಬ್ಯಾಂಕಿನ ನಕಲಿ ಇ-ಮೇಲ್‌ ಐಡಿ ಸೃಷ್ಟಿಸಿ, ಈ ಮೂಲಕ ನಿಮಗೆ ಸ್ಪಷ್ಟನೆ ಬರುತ್ತದೆ ಎಂದು ಹೇಳಿದ್ದರು. ಅಲ್ಲದೆ, ಕಳೆದ ಜ.26ರಂದು ಮತ್ತೆ ಕರೆ ಮಾಡಿ ಪಾರ್ಸೆಲ್‌ನಲ್ಲಿ ಅಪಾರ ಪ್ರಮಾಣದ ವಿದೇಶಿ ಕರೆನ್ಸಿ ಕುರಿತ ಎಲ್ಲಾ ಕಾನೂನು ಪ್ರಕ್ರಿಯೆ ಮುಗಿದಿದ್ದು,

ಆದಾಯ ತೆರಿಗೆ ರೂಪದಲ್ಲಿ 8 ಲಕ್ಷ ರೂ. ಪಾವತಿಸಿದರೆ ಪಾರ್ಸೆಲ್‌ ನಿಮ್ಮದಾಗುತ್ತದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಹೆಸರಿನಲ್ಲಿ ಶಿಕ್ಷಕಿಗೆ ಇ-ಮೇಲ್‌ ಕಳುಹಿಸಿದ್ದರು. ಇದರಿಂದ ಅನುಮಾನ ಮತ್ತಷ್ಟು ಹೆಚ್ಚಾಗಿ ಶಿಕ್ಷಕಿ ಕೂಡಲೇ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.

ಈ ಸಂಬಂಧ ತನಿಖೆ ನಡೆಸಿದ ಪೊಲೀಸರು, ಆರೋಪಿಗಳ ಕಾಲ್‌ ಡಿಟೇಲ್ಸ್‌, ಬ್ಯಾಂಕ್‌ ಖಾತೆ ಸಂಖ್ಯೆ ಪರಿಶೀಲಿಸಿದಾಗ ಅವರು ದೆಹಲಿಯಲ್ಲಿ ಸಕ್ರಿಯವಾಗಿರುವುದು ಗೊತ್ತಾಗಿದೆ. ಕೂಡಲೇ ದೆಹಲಿಗೆ ತೆರಳಿ ಅವರನ್ನು ಬಂಧಿಸಲಾಗಿದೆ.

ಅಲ್ಲದೆ,ಆರೋಪಿಗಳು ಹೊಂದಿದ್ದ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿ, ಹಣ ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ 2 ಮೊಬೈಲ್‌, 2 ಸಿಮ್‌ಕಾರ್ಡ್‌, ಪ್ಯಾನ್‌ಕಾರ್ಡ್‌, ಎಟಿಎಂ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ನೈಜೀರಿಯಾ ಮೂಲದ ವ್ಯಕ್ತಿ ಶಾಮೀಲು: ಶಿಕ್ಷಕಿಗೆ ವಂಚಿಸಿದ್ದ ಆರೋಪಿಗಳಿಗೆ ನೈಜಿರೀಯಾ ಮೂಲದ ವ್ಯಕ್ತಿಯೊಬ್ಬ ಸಹಾಯಮಾಡಿರುವ ಶಂಕೆಯಿದೆ. ಆನ್‌ಲೈನ್‌ ಮೂಲಕ ವಂಚಿಸುವುದನ್ನೇ ಕಾಯಕ ಮಾಡಿಕೊಂಡಿದ್ದ ಈ ತಂಡದಲ್ಲಿ ಇತರರು ಭಾಗಿಯಾಗಿರುವ ಶಂಕೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

-ಉದಯವಾಣಿ

Comments are closed.