ಕರ್ನಾಟಕ

ಸಂವಿಧಾನ ಬದಲಾಯಿಸ್ತೀರಲ್ಲ!; ಸಭಿಕನ ಪ್ರಶ್ನೆಗೆ ಬಿಎಸ್‌ವೈ ಉತ್ತರವೇನು?

Pinterest LinkedIn Tumblr


ನೆಲಮಂಗಲ: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ಅವರು ಅಂಬೇಡ್ಕರ್‌ ಜನ್ಮದಿನಾಚರಣೆಯ ಹಿನ್ನಲೆಯಲ್ಲಿ ದಲಿತ ಸಮುದಾಯದವರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಸಭಿಕರ ಸಾಲಿನಲ್ಲಿದ್ದ ವ್ಯಕ್ತಿಯೊಬ್ಬರು ಸಂವಿಧಾನ ಬದಲಾವಣೆ ಬಗ್ಗೆ ಪ್ರಶ್ನಿಸಿ ಯಡಿಯೂರಪ್ಪ ಅವರನ್ನು ತಬ್ಬಿಬ್ಬು ಮಾಡುವಂತೆ ಮಾಡಿದ್ದಾರೆ.

ನೆಲಮಂಗಲದ ಮೈಲನಹಳ್ಳಿಯಲ್ಲಿ ದಲಿತರ ಮನೆಯಲ್ಲಿ ಉಪಹಾರ ಸೇವಿಸಿ ದ ಬಳಿಕ ಯಡಿಯೂರಪ್ಪ ಅವರು ಮಾತುಕತೆ ನಡೆಸಿದರು.

ಸಮಾರಂಭದಲ್ಲಿ ಯಡಿಯೂರಪ್ಪ ಅವರು ಭಾಷಣ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ವೇದಿಕೆ ಮುಂಭಾಗಕ್ಕೆ ಬಂದು ‘ನೀವು ಇಲ್ಲಿ ಹೀಗೆ ಹೇಳ್ತೀರಿ, ಆದ್ರೆ ಅನಂತ್‌ ಕುಮಾರ್‌ ಹೆಗಡೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂತ ಹೇಳಿದ್ದಾರಲ್ಲ ‘ ಎಂದು ಏರು ಧ್ವನಿಯಲ್ಲಿ ಕೇಳಿದರು. ಅಷ್ಟರಲ್ಲೆ ಸ್ಥಳದಲ್ಲಿದ್ದ ಪೊಲೀಸರು ವ್ಯಕ್ತಿಯನ್ನು ಹಿಡಿದಿದ್ದರು.

ನಿಲ್ಲಪ್ಪಾ.. ಏನು ನಿನ್ನ ಹೆಸರು ಎಂದು ಕೇಳಿದ ಯಡಿಯೂರಪ್ಪ ಅವರು ಪೊಲೀಸರ ಬಳಿ ಅವರನ್ನು ಬಿಡಿ ಎಂದರು.

‘ನೋಡಪ್ಪಾ.. ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನದಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ. ನಾವು ಸಂವಿಧಾನವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ.ಬದಲಾವಣೆ ಮಾಡುವುದು ತಪ್ಪು’ ಎಂದರು.

ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರು ನಾವು ಸಂವಿಧಾನ ಬದಲಾವಣೆ ಮಾಡುತ್ತೇವೆ. ಅದನ್ನು ಬದಲಾಯಿಸಲೆಂದೇ ನಾವು ಬಂದಿರುವುದು ಎಂದು ಹೇಳಿಕೆ ನೀಡಿದ್ದರು. ಈ ಕುರಿತು ದಲಿತ ಸಂಘಟನೆಗಳು ಸೇರಿದಂತೆ ಹಲವರು ವ್ಯಾಪಕ ಆಕ್ರೋಶ ಹೊರ ಹಾಕಿದ್ದರು.

-ಉದಯವಾಣಿ

Comments are closed.