ಕರ್ನಾಟಕ

ಚಿನ್ನದಾಸೆಗೆ 15 ಲಕ್ಷ ಕಳೆದುಕೊಂಡ ಲಂಡನ್‌ ರಿಟರ್ನ್

Pinterest LinkedIn Tumblr


ಬೆಂಗಳೂರು: ಲಂಡನ್‌ನಲ್ಲಿದ್ದ ಉದ್ಯೋಗ ಬಿಟ್ಟು ಬಂದು ಸ್ವಂತ ಉದ್ಯಮ ಆರಂಭಿಸುವ ಯೋಚನೆಯಲ್ಲಿದ್ದ ಎಂಜಿನಿಯರ್‌ ಪದವೀಧರ ಯುವಕ “ಚಿನ್ನದ ಬಿಸ್ಕೆಟ್‌’ ಆಮಿಷಕ್ಕೆ ಒಳಗಾಗಿ 15 ಲಕ್ಷ ರೂ. ಕಳೆದುಕೊಂಡಿದ್ದಾರೆ.

“ಚಿನ್ನದ ಬಿಸ್ಕೆಟ್‌’ ಆಮಿಷ ತೋರಿಸಿದ ತಮಿಳುನಾಡಿನ ಕೃಷ್ಣಗಿರಿಯ ದೀನ್‌ ದಯಾಳನ್‌ ಜಿ ಎಂಬಾತನನ್ನು ಏಪ್ರಿಲ್‌ 9 ರಂದು ಬೆಂಗಳೂರಿನ ತಾರಾ ಹೋಟೆಲ್‌ಗೆ ಕರೆಸಿಕೊಂಡ ವಂಚಕರು 15 ಲಕ್ಷ ರೂ. ಪಡೆದುಕೊಂಡಿದ್ದಾರೆ. ಬಳಿಕ ಏಕಕಾಲದಲ್ಲಿ ಈ ಪ್ರಮಾಣದ ಚಿನ್ನದ ಬಿಸ್ಕೆಟ್‌ ನೀಡಲು ಚುನಾವಣಾ ನೀತಿ ಸಂಹಿತೆಯ ಕತೆ ಕಟ್ಟಿ ಪರಾರಿಯಾಗಿದ್ದಾರೆ.

ಚಿನ್ನದ ಬಿಸ್ಕೆಟ್‌ ತಂದುಕೊಡುವ ಆಸೆಯಿಂದ ದಿನಪೂರ್ತಿ ತನ್ನ ತಂದೆಯ ಜತೆ ತಾರಾ ಹೋಟೆಲ್‌ನಲ್ಲಿ ಕಾದು ಕುಳಿತಿದ್ದ ಜೀನ್‌ದಯಾಳ್‌ಗೆ ಆರೋಪಿಗಳ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ಮೋಸಹೋಗಿರುವುದು ಗೊತ್ತಾಗಿದೆ. ಮಾರನೇ ದಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಚೆನೈನ ಶಕ್ತಿ, ವಿಜಯ್‌ಕುಮಾರ್‌, ಜಾನ್‌ ಎಂಬುವವರು ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಾಲಿಬಾಲ್‌ ಪ್ರಾಕ್ಟೀಸ್‌ ಟು ದೋಖಾ!: ಲಂಡನ್‌ನ ಕಂಪೆನಿಯೊಂದರಲ್ಲಿ ನೌಕರರಾಗಿದ್ದ ದೀನ್‌ದಯಾಳ್‌, ಕೃಷ್ಣಗಿರಿಯಲ್ಲಿ ಸ್ವಂತ ಉದ್ಯಮ ಮಾಡುವ ಇಚ್ಛೆಯಿಂದ ಕೆಲಸ ತೊರೆಂದು ವಾಪಾಸಾಗಿದ್ದರು. ಕಳೆದ ಆರು ತಿಂಗಳ ಹಿಂದೆ ಚೆನೈನ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಸಮೀಪದಲ್ಲಿದ್ದ ಮೈದಾನಕ್ಕೆ ವಾಲಿಬಾಲ್‌ ಪ್ರಾಕ್ಟೀಸ್‌ಗೆ ಹೋಗಿದ್ದರು.

ಆಗ ಆರೋಪಿ ಶಕ್ತಿಯ ಪರಿಚಯವಾಗಿತ್ತು. ತಾನು ರಿಯಲ್‌ ಎಸ್ಟೇಟ್‌ ಡೀಲರ್‌ ಎಂದು ಹೇಳಿಕೊಂಡಿದ್ದ ಶಕ್ತಿಯ ಬಳಿ ತಾನು ಹೊಸ ಉದ್ಯಮ ಸ್ಥಾಪಿಸುವ ಬಗ್ಗೆ ದೀನ್‌ದಯಾಳ್‌ ಹೇಳಿಕೊಂಡಿದ್ದರು. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಹಣ ಹೂಡಿಕೆ ಮಾಡುವಂತೆ ಶಕ್ತಿ ಸಲಹೆ ನೀಡಿದರೂ ದೀನ್‌ದಯಾಳ್‌ ಒಪ್ಪಿರಲಿಲ್ಲ. ಹೀಗಾಗಿ ವಂಚನೆಗೆ ಹೊಸ ಯೋಜನೆ ರೂಪಿಸಿದ ಶಕ್ತಿ, ತನಗೆ ವಿದೇಶದಿಂದ ಚಿನ್ನ ಆಮದು ಮಾಡಿಕೊಳ್ಳುವ ಸ್ನೇಹಿತನಿದ್ದು,

ಕಡಿಮೆ ಬೆಲೆಗೆ “ಚಿನ್ನದ ಬಿಸ್ಕೆಟ್‌’ ತಂದುಕೊಡುತ್ತಾನೆ. ನೀನು ಚಿನ್ನಾಭರಣ ಮಾರಾಟ ಮಾಡು ಎಂದು ನಂಬಿಸಿ ವಿಜಯ್‌ಕುಮಾರ್‌ ಎಂಬಾತನನ್ನು ಪರಿಚಯಿಸಿದ್ದ. ಈ ವೇಳೆ ವಂಚಕರಿಬ್ಬರು, ಚಿನ್ನಾಭರಣ ಆಮದು ಮಾಡಿಕೊಳ್ಳಲು ತಾವು ಲೈಸನ್ಸ್‌ ಹೊಂದಿದ್ದೇವೆ ಎಂದು ಹೇಳಿ ನಕಲಿ ಲೈಸನ್ಸ್‌, ಏರ್‌ಪೋರ್ಟ್‌ನಿಂದ ನೀಡುವ ಅನುಮತಿ ಪತ್ರ (ಅದೂ ನಕಲಿ), ಒಂದೆರಡು ಚಿನ್ನದ ಬಿಸ್ಕೆಟ್‌ ತೋರಿಸಿದ್ದರು. ಇದನ್ನು ನಂಬಿದ ದೀನ್‌ದಯಾಳ್‌ ಚಿನ್ನದ ಬಿಸ್ಕೆಟ್‌ ಖರೀದಿಸಲು ಒಪ್ಪಿಕೊಂಡಿದ್ದ.

ಚುನಾವಣೆ ನೀತಿ ಸಂಹಿತೆ ಕತೆ ಹೇಳಿ ಎಸ್ಕೇಪ್‌ ಆದ್ರು!: ಅದರಂತೆ ಆರೋಪಿಗಳು ಹಣದೊಂದಿಗೆ ಬೆಂಗಳೂರಿಗೆ ಬರುವಂತೆ ಹೇಳಿ, ಇಂತಹ ವಿಳಾಸದಲ್ಲಿ ಬಂದಿರುವಂತೆ ತಿಳಿಸಿದ್ದರು. ಆರೋಪಿಗಳ ಸೂಚನೆಯಂತೆ 15 ಲಕ್ಷ ರೂ.ನೊಂದಿಗೆ ತನ್ನ ತಂದೆಯ ಜತೆ ಏ. 9ರಂದು ಬೆಂಗಳೂರಿಗೆ ಬಂದಿದ್ದ ದೀನ್‌ದಯಾಳ್‌ ಬೆಳಗ್ಗೆ 11 ಗಂಟೆ ಸುಮಾರಿಗೆ “ಲೀ ಮೆರಿಡಿಯನ್‌’ ಹೋಟೆಲ್‌ಗೆ ತೆರಳಿ ಕೊಠಡಿ ಪಡೆದಿದ್ದರು. ಆಗಲೇ ಮೂವರು ಆರೋಪಿಗಳು ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು.

ನಂತರ ದೀನ್‌ದಯಾಳ್‌ ಮತ್ತು ಅವರ ತಂದೆಯ ಜತೆ ಮಾತುಕತೆ ನಡೆಸಿದ ಆರೋಪಿಗಳು, ಚಿನ್ನದ ಬಿಸ್ಕೆಟ್‌ ಕೊಡುವುದಾಗಿ ಹೇಳಿ ಹಣ ಪಡೆದುಕೊಂಡರು. ಹಣ ಕೈಸೇರಿದ ಬಳಿಕ ಹೊಸ ವರಸೆ ಆರಂಭಿಸಿದ ಶಕ್ತಿ, ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೆಚ್ಚು ಪ್ರಮಾಣದ ಚಿನ್ನ ತಂದರೆ ಸಿಕ್ಕಿಬೀಳಬಹುದು ಎಂಬ ಉದ್ದೇಶದಿಂದ ಇಲ್ಲಿಗೆ ತಂದಿಲ್ಲ. ಸ್ವಲ್ಪ ಹೊತ್ತು ಇಲ್ಲೇ ಇರಿ.

ಸ್ನೇಹಿತನೊಬ್ಬ ನಿಮಗೆ ಚಿನ್ನದ ಬಿಸ್ಕೆಟ್‌ ತಂದುಕೊಡುತ್ತಾನೆ. ಅಲ್ಲಿಯವರೆಗೂ ಜಾನ್‌ ನಿಮ್ಮ ಜತೆಗಿರುತ್ತಾನೆ ಎಂದು ಹೇಳಿ ಜಾನ್‌ನನ್ನು ಅಲ್ಲೇ ಬಿಟ್ಟು ಶಕ್ತಿ ಹಾಗೂ ವಿಜಯ್‌ಕುಮಾರ್‌ ಹೊರಟು ಹೋಗಿದ್ದರು. ಕೆಲ ಕ್ಷಣಗಳಲ್ಲೇ ವಾಪಸ್‌ ಬಂದ ಶಕ್ತಿ, ನಮ್ಮ ಕಾರಿಗೆ ಜಾನ್‌ನ ಬೆರಳಚ್ಚು ಸೆನ್ಸಾರ್‌ ಮಾಡಲಾಗಿದೆ. ಒಂದೆರಡು ನಿಮಿಷ ವಾಪಸ್‌ ಬರುತ್ತೇವೆ ಎಂದು ಹೇಳಿ ಜಾನ್‌ನನ್ನೂ ಕರೆದುಕೊಂಡು ಹೋದವರು ಪರಾರಿಯಾಗಿದ್ದಾರೆ.

ಹಲವು ಗಂಟೆ ಕಾದರೂ ಶಕ್ತಿ ಮತ್ತಿತರರು ಅಥವಾ ಚಿನ್ನದ ಬಿಸ್ಕೆಟ್‌ ತಂದುಕೊಡುವ ಅವರ ಸ್ನೇಹಿತ ಬಾರದೇ ಇದ್ದಾಗ ಅನುಮಾನಗೊಂಡ ದೀನ್‌ದಯಾಳ್‌, ಶಕ್ತಿಯ ಮೊಬೈಲ್‌ಗೆ ಕರೆ ಮಾಡಿದ್ದ. ಈ ವೇಳೆ ಮೆಜೆಸ್ಟಿಕ್‌ಗೆ ಬರುವಂತೆ ಶಕ್ತಿ ಹೇಳಿದ್ದ. ಅದರಂತೆ ದೀನ್‌ದಯಾಳ್‌ ಮೆಜೆಸ್ಟಿಕ್‌ಗೆ ತೆರಳಿ ಶಕ್ತಿಗೆ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್ ಆಗಿತ್ತು. ಆರೋಪಿಗಳು ಪರಾರಿಯಾಗಿದ್ದರು ಎಂದು ದೀನ್‌ದಯಾಳ್‌ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಮಿಳುನಾಡಿಗೆ ತನಿಖಾ ತಂಡ!: ಪ್ರಕರಣ ಸಂಬಂಧ ತನಿಖೆ ಮುಂದುವರಿಸಲಾಗಿದ್ದು, ಆರೋಪಿಗಳು ವಂಚನೆ ಎಸಗಿದ ಹೋಟೆಲ್‌ನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಆರೋಪಿಗಳು ಬಳಸಿದ ಕಾರಿನ ನಂಬರ್‌ ಜಾಡು ಹಿಡಿಯಲಾಗಿದ್ದು, ತಮಿಳುನಾಡಿಗೆ ಒಂದು ತಂಡ ಕಳುಹಿಸಲಾಗುತ್ತದೆ. ಆರೋಪಿಗಳು ಅಲ್ಲಿಯೂ ಈ ಹಿಂದೆ ವಂಚನೆ ಎಸಗಿರುವ ಸಾಧ್ಯತೆ ಸಂಬಂಧ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

* ಮಂಜುನಾಥ್‌ ಲಘುಮೇನಹಳ್ಳಿ

-ಉದಯವಾಣಿ

Comments are closed.