ಕರ್ನಾಟಕ

ಮನೆ ಬಾಗಿಲಿಗೇ ಬರಲಿದೆ ಫೋಟೋ ಓಟರ್‌ ಸ್ಲಿಪ್‌

Pinterest LinkedIn Tumblr


ಬೆಂಗಳೂರು: ಮತದಾನಕ್ಕೆ ಒಂದು ವಾರ ಇರುವಾಗ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳ ಏಜೆಂಟರು “ಮತದಾರ
ಚೀಟಿ’ಗಳನ್ನು ಎಲ್ಲ ಮನೆಗಳಿಗೆ ಹಂಚುವ ಮತ್ತು ಮತದಾನದ ದಿನ ಮತಗಟ್ಟೆ ಬಳಿ ಪೆಂಡಾಲ್‌ ಹಾಕಿ ಮತದಾರ ಚೀಟಿ
ಪೂರೈಸುವ ವ್ಯವಸ್ಥೆಯನ್ನು ನಾವು ನೋಡಿದ್ದೇವೆ. ಹಣ ಹಂಚಿಕೆ ಮತ್ತು ಆಮಿಷಗಳಿಗೆ ಇದು ದಾರಿ ಮಾಡಿಕೊಡುತ್ತದೆ ಎಂದು ಅರಿತ ಚುನಾವಣಾ ಆಯೋಗ, ಇದಕ್ಕೆ ಕಡಿವಾಣ ಹಾಕಿ ಕೆಲವು ವರ್ಷಗಳಿಂದ ಸ್ವತಃ ತಾನೇ ಮತದಾರರ ಚೀಟಿ ಹಂಚುವ ವ್ಯವಸ್ಥೆ ಜಾರಿಗೆ ತಂದಿತು. ಈಗ ಒಂದು ಹೆಜ್ಜೆ ಮುಂದೆ ಹೋಗಿ ಈ ಬಾರಿಯ ಚುನಾವಣೆಯಲ್ಲಿ ಮತದಾರರ ಭಾವಚಿತ್ರ ಹೊಂದಿರುವ ಮತದಾರರ ಚೀಟಿ (ಫೋಟೋ ಓಟರ್‌ ಸ್ಲಿಪ್‌) ವಿತರಿಸುತ್ತಿದೆ.

ಮತದಾನಕ್ಕೆ ಏಳು ದಿನ ಇರುವಾಗ ಈ ಫೋಟೋ ಓಟರ್‌ ಸ್ಲಿಪ್‌ಗ್ಳನ್ನು ಸಂಬಂಧಿಸಿದ ಮತಗಟ್ಟೆ ಅಧಿಕಾರಿಯು, ಆ ಮತಗಟ್ಟೆಯ ವ್ಯಾಪ್ತಿಗೆ ಬರುವ ಎಲ್ಲ ಮತದಾರರ ಮನೆಗೆ ತಲುಪಿಸುತ್ತಾರೆ. ಆ ಕ್ಷೇತ್ರದ ಮತದಾರರ ಪಟ್ಟಿ ಯಾವ ಭಾಷೆಯಲ್ಲಿ ಪ್ರಕಟವಾಗಿರುತ್ತದೋ ಅದೇ ಭಾಷೆಯಲ್ಲಿ ಫೋಟೋ ಓಟರ್‌ ಸ್ಲಿಪ್‌ ಮುದ್ರಿಸಲಾಗಿರುತ್ತದೆ. ಸಂಬಂಧಪಟ್ಟ ಮತದಾರರಿಗೆ ಮಾತ್ರ ಅವರ ಫೋಟೋ ಓಟರ್‌ ಸ್ಲಿಪ್‌ ನೀಡಬೇಕು. ಫೋಟೋ ಓಟರ್‌ ಸ್ಲಿಪ್‌ ಪಡೆದ ಬಳಿಕ ಆ ಮತದಾರರಿಂದ ಹಸ್ತಾಕ್ಷರ ಅಥವಾ ಹೆಬ್ಬೆಟ್ಟು
ಗುರುತು ಪಡೆದುಕೊಳ್ಳುತ್ತಾರೆ. ಅವರನ್ನು ಬಿಟ್ಟು ಬೇರೆ ಯಾರಿಗೂ ಕೊಡುವಂತಿಲ್ಲ. ಹಾಗೇನಾದರೂ ಆದರೆ, ಮತಗಟ್ಟೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಮತದಾರರು ಸಿಗದೇ ಇದ್ದಾಗ ಅವರ ಫೋಟೋ ಓಟರ್‌ ಸ್ಲಿಪ್‌ಗ್ಳನ್ನು ಮುಚ್ಚಿದ ಲಕೋಟೆಯಲ್ಲಿ ಹಾಕಿ ಆ ಕ್ಷೇತ್ರದ ಚುನಾವಣಾಧಿಕಾರಿಗೆ ಒಪ್ಪಿಸುತ್ತಾರೆ. ಹಾಗಾಗಿ, ಮತದಾರರ ಚೀಟಿ ವಿಚಾರದಲ್ಲಿ ರಾಜಕೀಯ ಪಕ್ಷಗಳು ಅಥವಾ
ಅಭ್ಯರ್ಥಿಗಳ ಏಜೆಂಟರನ್ನು ನೆಚ್ಚಿಕೊಳ್ಳಬೇಡಿ. ಆಯೋಗವೇ ನಿಮ್ಮ ಸೇವೆಗೆ ಬರಲಿದೆ.

ಮತದಾರರಿಗೆ ಇಲ್ಲಿದೆ ಗೈಡ್‌
ಈ ಬಾರಿ ಆಯೋಗ ಭಾವಚಿತ್ರ ಹೊಂದಿರುವ ಮತದಾರರ ಚೀಟಿಯನ್ನು ಅವರವರ ಮನೆಗೆ ವಿತರಿಸಲಿದೆ. ಮತದಾನಕ್ಕೆ
7 ದಿನ ಮುಂಚೆ ಈ ಫೋಟೋ ಓಟರ್‌ ಸ್ಲಿಪ್‌ಗ್ಳನ್ನು ಸಂಬಂಧಿಸಿದ ಮತಗಟ್ಟೆ ಅಧಿಕಾರಿ ಮತದಾರರಿಗೆ ತಲುಪಿಸಲಿದ್ದಾರೆ. ಚೀಟಿ ಪಡೆದ ಮತದಾರರಿಂದ ಹಸ್ತಾಕ್ಷರ ಅಥವಾ ಹೆಬ್ಬೆಟ್ಟು ಗುರುತು ಪಡೆದುಕೊಳ್ಳುತ್ತಾರೆ.

-ಉದಯವಾಣಿ

Comments are closed.