ಕರ್ನಾಟಕ

ರಾಜ್ಯದಲ್ಲೂ ಬ್ಯಾಂಕ್‌ಗಳಿಗೆ ಪಂಗನಾಮ

Pinterest LinkedIn Tumblr


ಬೆಂಗಳೂರು: ಬ್ಯಾಂಕ್‌ನಲ್ಲಿ ಸಾಲ ಪಡೆದು ವಂಚಿಸಿರುವ ಹಗರಣಗಳು ದೇಶಾದ್ಯಂತ ಸುದ್ದಿ ಮಾಡುತ್ತಿರುವ ಬೆನ್ನಲ್ಲೇ, ರಾಜ್ಯದಲ್ಲಿಯೂ ಇಂತದ್ದೇ ಪ್ರಕರಣಗಳು ಬೆಳಕಿಗೆ ಬರಲಾರಂಭಿಸಿದೆ. ಬೆಂಗಳೂರಿನ ಜಯನಗರದ ಯುಕೋ ಬ್ಯಾಂಕ್‌ಗೆ 19.03 ಕೋಟಿ ರೂ. ವಂಚಿಸಿರುವ ಪ್ರಕರಣ ಈಗ ಸಿಬಿಐ ಅಧಿಕಾರಿಗಳಿಂದ ಬಯಲಾಗಿದೆ.

ಗೃಹಸಾಲ, ಉದ್ಯಮ ಸಾಲ, ನಿವೇಶನ ಖರೀದಿ ಸೇರಿ ಹಲವು ಯೋಜನೆಗಳಡಿ 18 ಮಂದಿ ನಕಲಿ ದಾಖಲೆ ಕೊಟ್ಟು 19.03 ಕೋಟಿ ರೂ. ಸಾಲ ಪಡೆದಿದ್ದರು. ಈ ಹಗರಣದಲ್ಲಿ ಬ್ಯಾಂಕ್‌ನ ಹಿಂದಿನ ಮ್ಯಾನೇಜರ್‌ ಶಾಮೀಲಾಗಿರುವುದು ಪತ್ತೆಯಾಗಿದೆ. ಜಯನಗರದ ಯುಕೋ ಬ್ಯಾಂಕ್‌ ಶಾಖೆಯಲ್ಲಿ 2013ರ ಆಗಸ್ಟ್‌ ನಿಂದ 2016ರವರ ಜೂನ್‌ವರೆಗೆ ಶಾಖೆಯ ಮ್ಯಾನೇಜರ್‌ ಆಗಿದ್ದ ಕೆ.ಆರ್‌. ಸರೋಜಾ ಆರೋಪಿಯಾಗಿದ್ದಾರೆ.

ಈ ಕುರಿತು ಬೆಂಗಳೂರು ವಲಯ ಯುಕೋಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಜಯನಗರ ಯುಕೋ ಬ್ಯಾಂಕ್‌ ಶಾಖೆಯ ಈ ಹಿಂದಿನ ಮ್ಯಾನೇಜರ್‌ ಸರೋಜಾ, ಸಾಲ ಮಂಜೂರು ಪ್ರಕ್ರಿಯೆಯಲ್ಲಿ ಮಧ್ಯವರ್ತಿಯಾಗಿದ್ದ ಬಿ.ಎಸ್‌. ಶ್ರೀನಾಥ್‌, ಆರ್‌ ಅಂಡ್‌ಜಿ ಅಸೋಸಿಯೇಟ್‌ ಮಾಲೀಕ ಗೋಪಿನಾಥ್‌ ಅಗ್ನಿಹೋತ್ರಿ, ಜಂಬೂನಾಥ್‌, ಎನ್‌.ವೆಂಕಟೇಶ್‌ ಅಸೋಸಿಯೇಟ್ಸ್‌ ಮಾಲೀಕ ಎನ್‌. ವೆಂಕಟೇಶ್‌ ಸೇರಿ ಮತ್ತಿತರರ ವಿರುದ್ಧ ಎಫ್ಐಆರ್‌ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಈ ಪ್ರಕರಣವೂ ಸೇರಿ ಕಳೆದ ಮೂರು ತಿಂಗಳ ಅವದಿಯಲ್ಲಿ ಬೆಂಗಳೂರು ವಿಭಾಗದ ಸಿಬಿಐ ಅಧಿಕಾರಿಗಳು ಎಸ್‌ಬಿಐ ಸೇರಿ ಇನ್ನಿತರೆ ಬ್ಯಾಂಕ್‌ಗಳಿಗೆ ನಕಲಿ ದಾಖಲೆಗಳನ್ನು ನೀಡಿ 1,680 ಕೋಟಿ ರೂ.ಮೊತ್ತದ ಆರು ಪ್ರತ್ಯೇಕ ಪ್ರಕರಣಗಳ ತನಿಖೆ ಚುರುಕುಗೊಳಿಸಿದ್ದಾರೆ.

ಎಸ್‌ಬಿಐನ ಮೂರು ಪ್ರಕರಣ:
1,268 ಕೋಟಿ ರೂ. ವಂಚನೆ
ಜೆ ಅಂಬೆ ಗೌರಿ ಚೆಮ್‌ ಲಿಮೆಟೆಡ್‌ ಹಾಗೂ ಮತ್ತಿತರರು 65 ಕೋಟಿ ರೂ. ವಂಚಿಸಿರುವ ಸಂಬಂಧ ಎಸ್‌ಬಿಐನ ಜನರಲ್‌ ಮ್ಯಾನೇಜರ್‌ ಮಲ್ಲಿಕಾ ಕೆ.ಪಿ. ಫೆ.12ರಂದು ಸಿಬಿಐಗೆ ದೂರು ನೀಡಿದ್ದಾರೆ. ಇದಲ್ಲದೇ, ಎಸ್‌ಬಿಐನ ಜನರಲ್‌ ಮ್ಯಾನೇಜರ್‌ ಜಿ.ಡಿ. ಚಂದ್ರಶೇಖರ್‌ ಮಾರ್ಚ್‌ 21ರಂದು ಕಾನಿಷ್‌R ಗೋಲ್ಡ್‌ ಪ್ರೈ. ಲಿಮೆಟೆಡ್‌ ಹಾಗೂ ಮತ್ತಿತರರು 824. 15 ಕೋಟಿ ರೂ. ಸಾಲ ಪಡೆದು ವಂಚಿಸಿದ್ದಾರೆ. ಹಾಗೂ ನತೆಲ್ಲಾ ಸಂಪತ್‌ ಜ್ಯುವೆಲರಿ ಕಂಪೆನಿ ಹಾಗೂ ಮತ್ತಿತರರು 379.75 ಕೋಟಿ ರೂ. ವಂಚಿಸಿದ್ದಾರೆಂದು ಮಾರ್ಚ್‌ 24ರಂದು ಪ್ರತ್ಯೇಕವಾಗಿ ಎರಡು ದೂರುಗಳನ್ನು ದಾಖಲಿಸಿದ್ದಾರೆ.

ಯೂನಿಯನ್‌ ಬ್ಯಾಂಕ್‌ಗೆ
313 ಕೋಟಿ ರೂ. ವಂಚನೆ
ಟೋಟೆಮ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಕಂಪೆನಿ ಸೇರಿ ಇನ್ನಿತರರು 313.84 ಕೋಟಿ ರೂ. ವಂಚಿಸಿದ್ದಾರೆಂದು ಆರೋಪಿಸಿ ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾದ ಸೀನಿಯರ್‌ ಮ್ಯಾನೇಜರ್‌ ಶೇಕ್‌ ಮೊಹಮದ್‌ ಅಲಿ ಮಾರ್ಚ್‌ 22ರಂದು ದೂರು ನೀಡಿದ್ದರು.

ಐಎಫ್ಕೆಸಿಐಗೆ 80
ಕೋಟಿ ರೂ.ದೋಖಾ
ಶ್ರೀಕೃಷ್ಣ ಷೇರು ಮಾರುಕಟ್ಟೆ ಕಂಪೆನಿ, ಆಂಧ್ರ ಪ್ರದೇಶ ಇಂಡಸ್ಟ್ರಿಯಲ್‌ ಅಂಡ್‌ ಟೆಕ್ನಿಕಲ್‌ ಕನ್ಸಲ್ಟೆನ್ಸಿ ಕಂಪೆನಿ, ಕೈಗಾರಿಕೆ ಮತ್ತು ಮಿಟ್‌ಕಾನ್‌ ಕನ್ಸಲ್ಟೆನ್ಸಿ ಎಂಜಿನಿಯರಿಂಗ್‌ ಸರ್ವೀಸ್‌ ಲಿಮಿಟೆಡ್‌ ಮತ್ತಿತರರು 80 ಕೋಟಿ ರೂ. ವಂಚಿಸಿದ್ದಾರೆ ಎಂದು ಐಎಫ್ಸಿಐ ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ ಮಧುರ್‌ ಬಜಾಜ್‌ ಜನವರಿ 25ರಂದು ದೂರು ನೀಡಿದ್ದಾರೆ.

-ಉದಯವಾಣಿ

Comments are closed.