ಕರ್ನಾಟಕ

ಗಂಡನ ಸಾವಾಗುತ್ತೆ ಎಂದು ಹೆದರಿಸಿ ಚಿನ್ನಾಭರಣ ದೋಚಿದ ಕಳ್ಳ ಸ್ವಾಮಿ

Pinterest LinkedIn Tumblr


ಬೆಂಗಳೂರು: “ನಿನ್ನ ಗಂಡನಿಗೆ ಮಾಟ ಮಾಡಿಸಿದ್ದು, ಇನ್ನೆರಡು ದಿನದಲ್ಲಿ ಆತ ಸಾಯ್ತಾನೆ’ ಎಂದು ಆತಂಕ ಹುಟ್ಟಿಸಿದ ನಕಲಿ ಸ್ವಾಮಿ, ಪೂಜೆ ನೆಪದಲ್ಲಿ ಮಹಿಳೆಯ ಚಿನ್ನಾಭರಣ ದೋಚಿದ ಘಟನೆ ಅಮೃತಹಳ್ಳಿಯಲ್ಲಿ ನಡೆದಿದೆ. ನಕಲಿ ಸ್ವಾಮಿಯ ಮಾತು ನಂಬಿ ಚಿನ್ನಾಭರಣ ಕಳೆದುಕೊಂಡ ಜನತಾ ಕಾಲೋನಿ ನಿವಾಸಿ ಕವಿತಾ ರಘು ಎಂಬುವವರು ಅಮೃತಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು. ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಜನತಾ ಕಾಲೋನಿಯ ಬಾಡಿಗೆ ಮನೆಯಲ್ಲಿ ಕವಿತಾ ಹಾಗೂ ಅವರ ಪತಿ ರಘು ವಾಸವಿದ್ದು, ಗುರುವಾರ ಬೆಳಗ್ಗೆ ಎಂದಿನಂತೆ ಪತಿ ರಘು ಪೇಟಿಂಗ್‌ ಕೆಲಸಕ್ಕೆ ತೆರಳಿದ್ದರು. ಬೆಳಗ್ಗೆ 11.30ರ ಸುಮಾರಿಗೆ ಹಸಿರು ಜುಬ್ಟಾ, ಪಂಚೆ, ತಲೆಗೆ ಪೇಟಾ ಧರಿಸಿ, ಜೋಳಿಗೆ ಹಾಕಿಕೊಂಡು ಮನೆಯ ಬಳಿ ಬಂದ ಸುಮಾರು 30 ವರ್ಷದ ಯುವಕ, ಮನೆಯಲ್ಲಿ ಒಬ್ಬರೇ ಇದ್ದ ಕವಿತಾರನ್ನು ಕರೆದು, “ನಿಮ್ಮ ಮನೆಯಲ್ಲಿ ಮಾಟ ಮಂತ್ರ ಮಾಡಿಸಲಾಗಿದೆ. ನಿಮ್ಮ ಗಂಡ ಎರಡು ದಿನದಲ್ಲಿ ಸತ್ತುಹೋಗುತ್ತಾರೆ,’ ಎಂದು ತೆಲುಗು-ಮಿಶ್ರಿತ ಕನ್ನಡದಲ್ಲಿ ಹೇಳಿ ಭಯಹುಟ್ಟಿಸಿದ್ದಾನೆ. ನಿಮ್ಮ ಗಂಡನ ಪ್ರಾಣ ಉಳಿಸಿಕೊಳ್ಳಲು ನಾನು ಹೇಳಿದ ವಿಶೇಷ ಪೂಜೆ ಮಾಡಿದರೆ ಸಾಕು ಎಂದಿದ್ದಾನೆ. ಪತಿಗೆ ಕರೆ ಮಾಡಿ ಕೇಳುತ್ತೇನೆ ಎಂದಾಗ, ಈ ವಿಚಾರ ಯಾರಿಗೂ ಹೇಳಬಾರದು. ನನಗೆ ಕಾಣಿಕೆಯೇನು ಜಾಸ್ತಿ ಬೇಡ, ನೀವು ಅವರಿಗೆ ಹೇಳಿದರೆ ನಾನು ಹೊರಟು ಹೋಗುತ್ತೇನೆ,’ ಎಂದು ಕಳ್ಳಸ್ವಾಮಿ ಹೇಳಿದ್ದಾನೆ.

ಗಂಡನ ಪ್ರಾಣ ಹೋಗುತ್ತೆ ಎಂದು ಭಯಪಟ್ಟ ಕವಿತಾ, ಪೂಜೆ ನೆರವೇರಿಸಲು ಹೇಳಿದ್ದಾರೆ. ಈ ವೇಳೆ ಸ್ವಾಮೀಜಿ, ಮನೆಯಲ್ಲಿ ಕುಳಿತು ಕುಂಕುಮ, ವಿಭೂತಿ ಇನ್ನಿತರೆ ಸಾಮಾಗ್ರಿ ತೆಗೆದಿಟ್ಟು, ಒಂದು ಡಬ್ಬಿ ತೆರೆದು, “ಇದರಲ್ಲಿ ನೀವು ಧರಿಸಿರುವ ಆಭರಣ ಹಾಕಿ, ಪೂಜೆ ಮುಗಿದ ಬಳಿಕ ಸ್ನಾನ ಮುಗಿಸಿ ದೇವರ ಪೋಟೋದ ಮುಂದಿರುವ ಡಬ್ಬಿ ತೆಗೆಯಿರಿ,’ ಎಂದಿದ್ದಾನೆ.

ಕವಿತಾ ಅವರು ಆಭರಣ ತೆಗೆದು ಕೊಟ್ಟಿದ್ದಾರೆ. ಬಳಿಕ ಕವಿತಾ ಅವರು ಕಾಣಿಕೆ ಹಣ ತರಲು ಕೊಠಡಿಗೆ ತೆರಳಿ ವಾಪಾಸ್‌ ಬರುವಷ್ಟರಲ್ಲಿ ಸ್ವಾಮಿ ಪರಾರಿಯಾಗಿದ್ದ. ಆಭರಣ ಇರಿಸಿದ್ದ ಡಬ್ಬಿ ಖಾಲಿ ಇರುವುದು ಕಂಡಾಗ ಮೋಸ ಹೋಗಿರುವುದು ಗೊತ್ತಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಮೋಸದ ಜಾಲವಿರುವ ಶಂಕೆ: ಇಂಥ ಪ್ರಕರಣಗಳ ಹಿಂದೆ ವ್ಯವಸ್ಥಿತ ಜಾಲವಿರುವ ಶಂಕೆಯಿದೆ. ಕವಿತಾ ಅವರಿಗೆ ಮೋಸ ನಡೆದ ಎರಡು ದಿನಗಳ ಹಿಂದೆ ಇಬ್ಬರು ಮಹಿಳೆಯರು ಅದೇ ಭಾಗದಲ್ಲಿ ಓಡಾಡಿಕೊಂಡು ಹಲವರನ್ನು ಮಾತನಾಡಿಸಿದ್ದರು. ಕವಿತಾ ಅವರಿಗೂ, ನಮಗೆ ದೈವಾಂಶ ಸಂಭೂತ ಸ್ವಾಮೀಜಿ ಪರಿಚಯವಿದ್ದಾರೆ. ಅವರು ಕಷ್ಟಗಳಿಗೆ ಪರಿಹಾರ ಹೇಳುತ್ತಾರೆ. ಸಮಸ್ಯೆಯಿದ್ದರೆ ಈ ಕಡೆ ಸ್ವಾಮೀಜಿ ಬಂದಾಗ ಹೇಳಿಕೊಳ್ಳಿ ಎಂದಿದ್ದರು.

ಇದಾದ ಮಾರನೇ ದಿನವೇ ಬಂದ ನಕಲಿ ಸ್ವಾಮಿ, ಚಿನ್ನಾಭರಣ ದೋಚಿದ್ದಾನೆ. ಕವಿತಾ ಅವರ ಪಕ್ಕದ ಮನೆಯ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲಾಗಿದೆ. ಮೂರು ದಿನ ಹಿಂದಷ್ಟೇ ಹೊಸ ಗುಡ್ಡದಹಳ್ಳಿಯಲ್ಲಿಯೂ ಇದೇ ಮಾದರಿಯಲ್ಲಿ ಮಹಿಳೆಯನ್ನು ವಂಚಿಸಲಾಗಿದೆ. ಹೀಗಾಗಿ ಬ್ಯಾಟರಾಯನಪುರ ಠಾಣೆ ಪೊಲೀಸರ ಬಳಿಯೂ ಚರ್ಚಿಸಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

-ಉದಯವಾಣಿ

Comments are closed.