ಕರ್ನಾಟಕ

ಕಾಂಗ್ರೆಸ್ ಪರ ಪ್ರಕಾಶ್ ರೈ ಪ್ರಚಾರ?

Pinterest LinkedIn Tumblr


ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ರಾಜ್ಯದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮೂರೂ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳಲು ಚುನಾವಣೆಯಲ್ಲಿ ಚಿತ್ರರಂಗದ ತಾರೆಯರಿಗೆ ಹಿಂದೆಂದಿಗಿಂತಲೂ ಈಗ ಡಿಮ್ಯಾಂಡ್ ಜಾಸ್ತಿಯಾಗಿದೆ. ತಮ್ಮ ಪರ ಮತ್ತು ತಮ್ಮ ವಿರೋಧಿಗಳ ವಿರುದ್ಧವಿರುವ ತಾರೆಗಳನ್ನು ಚುನಾವಣಾ ಪ್ರಚಾರಕ್ಕೆ ಕರೆತಂದು ಆ ಮೂಲಕ ಅವರ ಅಭಿಮಾನಿಗಳನ್ನು ತಮ್ಮತ್ತ ಸೆಳೆಯುವಂತೆ ಮಾಡಲು ಪಕ್ಷಗಳು ಪ್ಲಾನ್ ಮಾಡಿಕೊಂಡಿವೆ.

ಆರಂಭದಿಂದಲೂ ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಬೆಂಕಿಯುಗುಳುತ್ತಿರುವ ಬಹುಭಾಷಾ ನಟ ಪ್ರಕಾಶ್ ರೈ ಅವರನ್ನು ಈ ಬಾರಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಬಳಸಿಕೊಳ್ಳಲು ಕೈ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ ಮಾತುಗಳು ಕೇಳಿ ಬರುತ್ತಿದೆ. ಪ್ರಕಾಶ್ ರೈ ಅವರನ್ನು ಬಿಜೆಪಿ ವಿರುದ್ಧ ಪ್ರಚಾರದಲ್ಲಿ ಬಳಸಿಕೊಂಡರೆ ಸ್ವಲ್ಪಮಟ್ಟಿನ ಲಾಭವಾಗಬಹುದು ಎಂಬ ಉದ್ದೇಶದಿಂದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ರೈ ಅವರನ್ನು ಪ್ರಚಾರಕ್ಕೆ ಕರೆತರಲು ಸಿದ್ಧತೆ ನಡೆಸಿಕೊಂಡಿದೆ ಎನ್ನಲಾಗುತ್ತಿದೆ.

ಪಟ್ಟಿ ದೊಡ್ಡದಿದೆ: ಕಾಂಗ್ರೆಸ್ ಪರ ಪ್ರಚಾರ ಮಾಡುವಂತೆ ಪ್ರಕಾಶ್ ರೈ ಅವರ ಮನವೊಲಿಸುವಂತೆ ನಟಿ ರಮ್ಯಾ ಅವರಿಗೆ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ. ರಮ್ಯಾ ಕೂಡ ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಪ್ರಕಾಶ್ ಮಾತ್ರವಲ್ಲದೆ ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟಿ ಭಾವನಾ, ಹಿರಿಯ ನಟಿ ಜಯಮಾಲಾ ಸೇರಿದಂತೆ ಕಾಂಗ್ರೆಸ್ ಪರವಾಗಿರುವ ಹಲವು ತಾರೆಯರ ಪಟ್ಟಿ ಈಗಾಗಲೇ ರೆಡಿಯಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇವರನ್ನು ಪ್ರಚಾರ ಕಾರ್ಯದಲ್ಲಿ ಬಳಸಿಕೊಳ್ಳಲು ಕಾಂಗ್ರೆಸ್ ಪ್ರಚಾರ ಸಮಿತಿ ಪ್ಲಾನ್ ಮಾಡಿಕೊಂಡಿದೆ.

Comments are closed.