ಕರ್ನಾಟಕ

ಬಂಗಾರಪ್ಪ ಹೆಸರಿನಲ್ಲಿ ಮತಯಾಚಿಸೋದು ನಿಲ್ಲಿಸಿ

Pinterest LinkedIn Tumblr


ಶಿವಮೊಗ್ಗ: “ಬಂಗಾರಪ್ಪನವರ ಹೆಸರು ಹೇಳಿಕೊಂಡು ಚುನಾವಣಾ ಪ್ರಚಾರ ನಡೆಸುವುದನ್ನು ಶಾಸಕ ಮಧು ಬಂಗಾರಪ್ಪ ಹಾಗೂ ಗೀತಾ ಶಿವರಾಜ್‌ ಕುಮಾರ್‌ ನಿಲ್ಲಿಸಬೇಕು. ಜೆಡಿಎಸ್‌ ಪಕ್ಷದ ಹೆಸರಿನಲ್ಲಿ ಪ್ರಚಾರ ಕೈಗೊಳ್ಳಲಿ. ಇದನ್ನು ಯಾರೂ ಪ್ರಶ್ನಿಸುವುದಿಲ್ಲ’ ಎಂದು ಕುಮಾರ್‌ ಬಂಗಾರಪ್ಪ ತಾಕೀತು ಮಾಡಿದ್ದಾರೆ.

ನಗರದಲ್ಲಿ ಬುಧವಾರ ಮಾತನಾಡಿ, “ಇಷ್ಟು ದಿನ ಎಲ್ಲವನ್ನೂ ಸಹಿಸಿಕೊಂಡಿದ್ದೆ. ಕುಟುಂಬದ ವಿಚಾರ ಬಹಿರಂಗವಾಗಬಾರದು ಎಂದುಕೊಂಡಿದ್ದೆ. ಆದರೆ, ಪದೇ ಪದೆ ಮಾನಸಿಕವಾಗಿ ಘಾಸಿಗೊಳಿಸುತ್ತಿದ್ದಾರೆ. ಹೆತ್ತ ತಂದೆ ತಾಯಿಯನ್ನು ಕಡೆಗಣಿಸುವ ಮಗ ನಾನಲ್ಲ. ಅಂತಹ ಮನಃಸ್ಥಿತಿಯೂ ನನಗಿಲ್ಲ. ಆದರೂ ತಮ್ಮ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವುದು ದುರಂತ. ರಾಜಕೀಯವಾಗಿ ತಮ್ಮ ಮಧ್ಯೆ ಏನೇ ಭಿನ್ನಾಭಿಪ್ರಾಯವಿರಲಿ, ಕೌಟುಂಬಿಕವಾಗಿ ನಾವೆಲ್ಲರೂ ಒಂದಾಗಿರಬೇಕು. ಆದರೆ, ಇದಕ್ಕೆ ಕೆಲವರು ಆಸ್ಪದ ನೀಡುತ್ತಿಲ್ಲ. ಕುಟುಂಬದ ಮಧ್ಯೆ ಹುಳಿ ಹಿಂಡುವ ಕೆಲಸದಲ್ಲಿ ನಿರತರಾಗಿದ್ದಾರೆ’ ಎಂದು ದೂರಿದರು.

ವಾಸ್ತವದಲ್ಲಿ ತಂದೆ-ತಾಯಿಯನ್ನು ಮಧು ಬಂಗಾರಪ್ಪ ಬ್ಲ್ಯಾಕ್‌ವೆುàಲ್‌ ಮಾಡಿ ಕರೆದುಕೊಂಡು ಹೋಗಿದ್ದೇ ಹೊರತು, ಹೊರಹಾಕಿದ್ದಲ್ಲ. ತಮ್ಮ ಮೇಲಿನ ಆರೋಪ ಸತ್ಯಕ್ಕೆ ದೂರ ಎಂದರು. ಜೊತೆಗೆ, ರಾಜಕೀಯವಾಗಿಯೂ ಬಂಗಾರಪ್ಪ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಹೋದರ ಹಾಗೂ ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಮಾಜಿ ಸಚಿವ ಹರತಾಳು ಹಾಲಪ್ಪ ಅವರಲ್ಲಿ ಸಂಪೂರ್ಣ ಮಾಹಿತಿ ಇದೆ. ಇದೇ ಕಾರಣಕ್ಕೆ ಅವರನ್ನು ಪ್ರಕರಣವೊಂದರಲ್ಲಿ ಸಿಲುಕಿಸಲಾಯಿತು ಎಂದು ಆರೋಪಿಸಿದರು.

ರಾಜ್‌ ಕುಟುಂಬದಲ್ಲೂ ಹುಳಿ ಹಿಂಡುವ ಕೆಲಸ
“ಎಲ್ಲರೂ ಒಟ್ಟಾಗಿರಬೇಕು ಎಂದು ರಾಜ್‌ಕುಮಾರ್‌ ಕುಟುಂಬ ಪ್ರಯತ್ನ ಮಾಡುತ್ತದೆ. ಆದರೆ ಕೆಲವರು ಕುಟುಂಬ ಒಡೆಯುವ ಕೆಲಸ ಮಾಡುತ್ತಿದ್ದಾರೆ. ರಾಜ್‌ ಕುಮಾರ್‌ ಕುಟುಂಬದಲ್ಲೂ ಹುಳಿ ಹಿಂಡುವ ಕೆಲಸದಲ್ಲಿ ತೊಡಗಿದ್ದಾರೆ’ ಎಂದು ಕುಮಾರ್‌ ಬಂಗಾರಪ್ಪ ಹೇಳಿದರು.

ಕಳೆದ ಚುನಾವಣೆಯಲ್ಲಿ ಬಂಗಾರಪ್ಪರ ಹೆಸರನ್ನು ಮುಂದಿಟ್ಟುಕೊಂಡು ಅನುಕಂಪದ ಆಧಾರದ ಮೇಲೆ ಮತ ಯಾಚಿಸಿದರು. ಅಷ್ಟೇ ಅಲ್ಲದೆ, ಅನಾರೋಗ್ಯಕ್ಕೆ ಈಡಾಗಿದ್ದ ತಮ್ಮ ತಾಯಿಯನ್ನು ಪ್ರಚಾರಕ್ಕೆ ಕರೆದೊಯ್ದರು. ಇದು ನಿಜಕ್ಕೂ ಬೇಸರದ ಸಂಗತಿ ಎಂದರು. ಶಾಸಕ ಮಧು ಬಂಗಾರಪ್ಪ ತಮ್ಮ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿ. ರಾಜಕೀಯದಲ್ಲಿ ಹಿರಿಯರಾಗಿರುವ ಯಡಿಯೂರಪ್ಪ ಕುರಿತು ಅತ್ಯಂತ ಕೆಟ್ಟ ಪದಗಳನ್ನು ಬಳಕೆ ಮಾಡುತ್ತಿದ್ದಾರೆ. ಇದು ಖಂಡನೀಯ. ಜೊತೆಗೆ ಸಚಿವ ಅನಂತ್‌ ಕುಮಾರ್‌ ಹೆಗಡೆಯವರನ್ನೂ ಬಿಟ್ಟಿಲ್ಲ. ರಾಮಚಂದ್ರಾಪುರ ಮಠದ ಶ್ರೀಗಳ ಕುರಿತಾಗಿಯೂ ಅತ್ಯಂತ ಕೆಟ್ಟದಾಗಿ ನಾಲಿಗೆ ಹರಿಯಬಿಟ್ಟಿದ್ದಾರೆ. ಇಂತಹವರು ಜೆಡಿಎಸ್‌ ಶಾಸಕರಾಗಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

-ಉದಯವಾಣಿ

Comments are closed.