ಕರ್ನಾಟಕ

ವಿದ್ಯಾರ್ಥಿಗೆ ಲೈಂಗಿಕ ಕಿರುಕುಳನೀಡಿದ ಮದರಸಾ ಶಿಕ್ಷಕನ ಸೆರೆ

Pinterest LinkedIn Tumblr
Mohammed Juber, 34, arrested by Talaghattapura police for allegedly sexually harassing a 12- year old student at a Madarasa.

ಬೆಂಗಳೂರು: ಮದರಸಾಕ್ಕೆ ಓದಲು ಬರುತ್ತಿದ್ದ ವಿದ್ಯಾರ್ಥಿಯನ್ನು ಮನೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಮದರಸಾ ಶಿಕ್ಷಕನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿವಾಜಿನಗರ ನಿವಾಸಿ ಮೊಹಮ್ಮದ್‌ ಅಬ್ದುಲ್‌ ಜುಬೇರ್‌ (35) ಬಂಧಿತ ಶಿಕ್ಷಕ. ಈತ ಕಳೆದ ಒಂದು ವರ್ಷದಿಂದ 12 ವರ್ಷದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಸಂಬಂಧ ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆವಲಹಳ್ಳಿಯ ಮದರಸಾದಲ್ಲಿ ನಾಲ್ಕು ವರ್ಷದಿಂದ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಮೊಹಮ್ಮದ್‌ ಜುಬೇರ್‌ ಇದೇ ಮದರಸಾದಲ್ಲಿ
ಮೂರು ವರ್ಷಗಳಿಂದ ವ್ಯಾಸಂಗ ಮಾಡುತ್ತಿರುವ ಕೆ.ಎಸ್‌.ಲೇಔಟ್‌ ನಿವಾಸಿ 12 ವರ್ಷದ ವಿದ್ಯಾರ್ಥಿಯನ್ನು ಓದಿಸುವ ನೆಪದಲ್ಲಿ
ಶಿವಾಜಿನಗರದ ತನ್ನ ಮನೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಮನೆಗೆ ಕರೆದೊಯ್ದ ಬಳಿಕ ಹಣ, ಹಣ್ಣು ಮತ್ತು ಇತರೆ ವಸ್ತುಗಳ ಆಮಿಷವೊಡ್ಡಿ ಒಂದು ವರ್ಷದಿಂದ ಆತ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದು, ಈ ವಿಚಾರವನ್ನು ಹೊರಗೆ ಹೇಳದಂತೆ ಎಚ್ಚರಿಕೆ ನೀಡುತ್ತಿದ್ದ ಎಂದು ವಿದ್ಯಾರ್ಥಿ ಹೇಳಿರುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಇದೇ ರೀತಿ ವಿದ್ಯಾರ್ಥಿಯನ್ನು ಮನೆಗೆ ಕರೆದೊಯ್ದ ಆರೋಪಿ ಜುಬೇರ್‌, ಲೈಂಗಿಕ ಕಿರುಕುಳ ನೀಡಿದ್ದ. ತಡವಾಗಿ ಮನೆಗೆ ಬಂದ ವಿದ್ಯಾರ್ಥಿ ಆತಂಕದಲ್ಲಿ ಇದ್ದುದನ್ನು ಗಮನಿಸಿದ ಆತನ ಅಜ್ಜಿ ಪ್ರಶ್ನಿಸಿದಾಗ ಆತ ಘಟನೆ ಬಗ್ಗೆ ವಿವರಿಸಿದ್ದ. ನಂತರ ಆತನ ಕುಟುಂಬದವರು ಚರ್ಚಿಸಿ ಮಾ.22ರಂದು ಪೊಲೀಸ್‌ ಠಾಣೆಗೆ ತೆರಳಿ ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದರು. ಅದರಂತೆ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಾ.24ರಂದು ಶಿಕ್ಷನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಆದರೆ, ಆರೋಪಿ ಶಿಕ್ಷಕ ತನ್ನ ಮೇಲಿನ ಆರೋಪ ನಿರಾಕರಿಸಿದ್ದು, ನಾನು ಯಾವುದೇ ತಪ್ಪು ಮಾಡಿಲ್ಲ. ಅನಗತ್ಯವಾಗಿ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ಕಳೆದ ಒಂದು ವರ್ಷದಿಂದ ಶಿಕ್ಷಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತ ವಿದ್ಯಾರ್ಥಿ ಪೊಲೀಸ್‌ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಅದರಂತೆ ವಿದ್ಯಾರ್ಥಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೇಷಿಯಲ್‌ ನೆಪದಲ್ಲಿಲೈಂಗಿಕ ಕಿರುಕುಳ ನೀಡಿದವನ ಬಂಧನ
ಬೆಂಗಳೂರು: ವಿದ್ಯಾರ್ಥಿನಿಗೆ ಫೇಷಿಯಲ್‌ ಮಾಡುವಾಗ ಅನುಚಿತವಾಗಿ ವರ್ತನೆ ತೋರಿದ ಆರೋಪದ ಮೇಲೆ ಬ್ಯೂಟಿಪಾರ್ಲರ್‌ ಸಿಬ್ಬಂದಿಯೊಬ್ಬನನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹರಿಯಾಣ ಮೂಲದ ಲಕ್ಕಿ ಸಿಂಗ್‌ ಬಂಧಿತ. ಈತ ಸೌದಿ ಅರೇಬಿಯಾ ಮೂಲದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತಿಕೆರೆ ಎಂ.ಎಸ್‌.ರಾಮಯ್ಯ ಕಾಲೇಜಿನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿರುವ ಸೌದಿ ಅರೇಬಿಯಾ ಮೂಲದ ಯುವತಿ ಹುಡುಗಿಯರ ಹಾಸ್ಟೆಲ್‌ ನಲ್ಲಿ ನೆಲೆಸಿದ್ದಾರೆ. ಮಾ. 21ರಂದು ಯುವತಿ ರಾತ್ರಿ 8 ಗಂಟೆ ಸುಮಾರಿಗೆ ಕಾಲೇಜು ಬಳಿಯಿರುವ ಜಾವೇದ್‌ ಹಬೀಬ್‌ ಪಾರ್ಲರ್‌ಗೆ ಫೇಷಿಯಲ್‌ ಮಾಡಿಸಲು ಹೋಗಿದ್ದರು. ಈ
ವೇಳೆ ಅಲ್ಲಿನ ಮಹಿಳಾ ಸಿಬ್ಬಂದಿ ಬೇರೊಬ್ಬರಿಗೆ ಫೇಷಿಯಲ್‌ ಮಾಡುತ್ತಿದ್ದು, ಅಲ್ಲೇ ಇದ್ದ ಲಕ್ಕಿಸಿಂಗ್‌ ಈಕೆಗೆ ಫೇಷಿಯಲ್‌
ಮಾಡಲು ಮುಂದಾದ. ಊರಿಗೆ ಹೋಗುವ ಧಾವಂತದಲ್ಲಿದ್ದ ಆಕೆ ಅದಕ್ಕೆ ಒಪ್ಪಿ ಕುಳಿತರು.

ಫೇಷಿಯಲ್‌ ಮಾಡುತ್ತಿದ್ದ ವೇಳೆ ಆರೋಪಿ ಲಕ್ಕಿಸಿಂಗ್‌ ಅನಗತ್ಯವಾಗಿ ಯುವತಿಯ ಎದೆ ಹಾಗೂ ಇತರೆ ಖಾಸಗಿ ಅಂಗಾಂಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ. ಈ ಸಂಬಂಧ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

-ಉದಯವಾಣಿ

Comments are closed.