ಕರ್ನಾಟಕ

ಬಿಜೆಪಿ ವಿರುದ್ಧ ಒಗ್ಗೂಡಿ ಹೋರಾಡಿ: ಮಳವಳ್ಳಿ ಸಮಾವೇಶದಲ್ಲಿ ರಾಹುಲ್‌ ಗಾಂಧಿ

Pinterest LinkedIn Tumblr


ಮಳವಳ್ಳಿ: ಬಿಜೆಪಿ ಸಮಾಜದಲ್ಲಿ ದ್ವೇಷ ಹರಡಿಸುವ ಪಕ್ಷ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು. ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಬೇಕಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡಿ ಹೋರಾಡಬೇಕಿದೆ ಎಂದು ಅವರು ನುಡಿದರು.

ಕಾಂಗ್ರೆಸ್‌ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಮಳವಳ್ಳಿಯ ಭಕ್ತ ಕನದಾಸ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನಮ್ಮ ಮುಂದೆ ವಿಧಾನಸಭೆ ಚುನಾವಣೆ ಬರಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜೆಡಿಎಸ್ ಎಂಬ ಪಕ್ಷ ಇದೆ. ಜೆಡಿಎಸ್ ಅಂದ್ರೆ ಜನತಾದಳ ಸಂಘ ಪರಿವಾರ ಎಂಬ ಅರ್ಥ ಇದೆ. ಜೆಡಿಎಸ್ ಪಕ್ಷ ಬಿಜೆಪಿಗೆ ಸಹಾಯ ಮಾಡಲು ತೀರ್ಮಾನಿಸಿದೆ. ಆದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ’ ಎಂದು ರಾಹುಲ್ ಗಾಂಧಿ ಹೇಳಿದರು.

ಮಂಡ್ಯ ಅಭಿವೃದ್ಧಿ ಸ್ಮರಿಸಿದ ರಾಗಾ:
ರಾಜ್ಯ ಸರ್ಕಾರ ಮಂಡ್ಯಕ್ಕೆ ನೀಡಿರುವ ಕೊಡುಗೆಗಳ ಗುಣಗಾನ ಮಾಡಿದ ರಾಹುಲ್‌, ಮಂಡ್ಯ ಜಿಲ್ಲೆಗೆ ರಾಜ್ಯ ಸರ್ಕಾರ ಕೋಟ್ಯಾಂತರ ಅನುದಾನ ನೀಡಿದೆ ಎಂದರು.

ಪೂರಿಗಾಲಿ ಏತ ನೀರಾವರಿ ಯೋಜನೆ, ಆಸ್ಪತ್ರೆ, ಮನೆ ನಿರ್ಮಾಣ, ಸೋಲಾರ್ ಪಾರ್ಕ್ ನಿರ್ಮಾಣ ಮತ್ತು ಉತ್ತಮ ರಸ್ತೆ ನಿರ್ಮಾಣ ಮಾಡಲಾಗಿದೆ.
ನಮ್ಮ ಸರಕಾರ ಬಸವಣ್ಣನ ತತ್ವ ಸಿದ್ದಾಂತ ಪಾಲಿಸಿ ಉತ್ತಮ ಆಡಳಿತ ನೀಡುತ್ತಿದೆ. ಆದ್ದರಿಂದ ಕೋಮುವಾದಿ ಪಕ್ಷ ಬಿಜೆಪಿ ಬೆಂಬಲಿಸದೆ ಎಲ್ಲಾ ಕಡೆ ಬಿಜೆಪಿ ಸೋಲಿಸಿ ಕಾಂಗ್ರೆಸ್ ಬೆಂಬಲಿಸಿ ಬಹುಮತ ನೀಡಿ ಎಂದು ರಾಹುಲ್‌ ಮನವಿ ಮಾಡಿದರು.

ಅವರ ಭಾಷಣದ ಮುಖ್ಯಾಂಶಗಳು:

* ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಕರ್ನಾಟಕದಲ್ಲಿ ರಾಜೀವ್ ಗಾಂಧಿ ಆರೋಗ್ಯ ಭಾಗ್ಯ ಕೊಟ್ಟಿದ್ದೇವೆ. ಕರ್ನಾಟಕದಲ್ಲಿ ಪ್ರಾಥಮಿಕ ಹಂತದಿಂದ ಪದವಿ ವರೆಗೂ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಸಿಗುತ್ತಿದೆ.

* ಇದಕ್ಕೂ ಮುನ್ನ ಮೂರು ತಿಂಗಳು ಗುಜರಾತಿನಲ್ಲಿ ಪ್ರವಾಸ ಮಾಡಿದೆ. ಗುಜರಾತಿನಲ್ಲಿ ಶಿಕ್ಷಣ ಪಡೆಯಲು ಕನಿಷ್ಟ 15 ಲಕ್ಷ ವೆಚ್ಚ ಮಾಡಬೇಕು. ಇದು ಅಲ್ಲಿನ ಯುವ ಸಮೂಹದ ದೊಡ್ಡ ದೂರು. ಗುಜರಾತಿನಲ್ಲಿ ಮೋದಿಯವರು ಶಿಕ್ಷಣ ಸಂಸ್ಥೆಗಳನ್ನು ಬಂಡವಾಳಶಾಹಿಗಳಿಗೆ ಕೊಟ್ಟಿದ್ದಾರೆ.
ಅಲ್ಲಿ ಆರೋಗ್ಯವೂ ದುಬಾರಿಯಾಗಿದೆ. ಆಸ್ಪತ್ರೆಗಳಲ್ಲಿ ದುಬಾರಿ ಹಣ ಕೊಡಬೇಕಿದೆ.

* ಗುಜರಾತ್ ನೀರವ್ ಮೋದಿ ಕೈಯಲ್ಲಿದೆ. ನೀರವ್ ಮೋದಿ ಬ್ಯಾಂಕುಗಳಿಗೆ ವಂಚಿಸಿ ದೇಶ ಬಿಟ್ಟು ಪಲಾಯನ ಮಾಡಿದ. ಈ ಬಗ್ಗೆ ಮೋದಿಯವರು ಒಂದು ಶಬ್ಧ ಆಡಿಲ್ಲ. ಇದೇ ನಮಗೂ ಬಿಜೆಪಿಗೂ ಇರುವ ವ್ಯತ್ಯಾಸ. ನಾವು ನುಡಿದಂತೆ ನಡೆದುಕೊಳ್ಳುತ್ತೇವೆ.

* ಮಂಡ್ಯದಲ್ಲಿ 30 ಸಾವಿರ ಎಕರೆಗೆ ಹನಿ ನೀರಾವರಿ ಕೊಟ್ಟಿದ್ದೇವೆ. ವಸತಿ ಯೋಜನೆಗಳಲ್ಲಿ 12 ಸಾವಿರ ಮನೆಗಳನ್ನು ನೀಡಿದ್ದೇವೆ. 400 ಕೋಟಿ ರೂ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಸಾಧನೆಗಳನ್ನು ಹೇಳಿಕೊಂಡರು.

ಈ ಬಾರಿ ಎಲ್ಲೆಡೆ ಕಾಂಗ್ರೆಸ್ ಬಾವುಟ ಹಾರಿಸಿ. ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ. ಕಾಂಗ್ರೆಸ್ ಏನು ಅಂತ ಈ ಚುನಾವಣೆಯಲ್ಲಿ ಬಿಜೆಪಿಗೆ ತೋರಿಸೋಣ ಎಂದು ರಾಹುಲ್‌ ಕರೆ ನೀಡಿದರು.

Comments are closed.