ಕರ್ನಾಟಕ

ಮಹಿಳೆಯ ಕತ್ತು ಕೊಯ್ದು ಹತ್ಯೆ ಮಾಡಿದ್ದ ಮೂವರು ಹಂತಕರ ಬಂಧನ; ಕುಡಿಯಲು ಹಣಕ್ಕಾಗಿಯೇ ಕೊಲೆ !

Pinterest LinkedIn Tumblr

ಬೆಂಗಳೂರು: ಮೈಸೂರು ರಸ್ತೆಯ ಕಸ್ತೂರಬಾ ನಗರದಲ್ಲಿ ಕವಿತಾ (30) ಎಂಬುವರ ಕತ್ತು ಕೊಯ್ದು ಹತ್ಯೆ ಮಾಡಿದ್ದ ಪ್ರಕರಣವನ್ನು 20 ದಿನಗಳ ಬಳಿಕ ಭೇದಿಸಿರುವ ಬ್ಯಾಟರಾಯನಪುರ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಂಚೆಪಾಳ್ಯದ ಗಿರೀಶ್‌ ಅಲಿಯಾಸ್‌ ಬಂಡೆ ಗಿರಿ (20), ಕೆ.ಜಿ.ನಗರದ ಆಶಿಷ್‌ ಕುಮಾರ್ (21) ಹಾಗೂ ಚಾಮರಾಜಪೇಟೆ ವಿಠ್ಠಲ್‌ ನಗರದ ಅಶೋಕ (24) ಬಂಧಿತರು. ಆರೋಪಿಗಳು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಮೃತ ಕವಿತಾ, ನಾಗದೇವನಹಳ್ಳಿಯ ಸಂಕ್ರಾಂತಿ ವುಡ್ ಫ್ಯಾಕ್ಟರಿಯಲ್ಲಿ ಮಾರಾಟ ಪ್ರತಿನಿಧಿಯಾಗಿದ್ದ ಪತಿ ಶಿವರಾಮು ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ಮಾರ್ಚ್‌ 1ರಂದು ಮನೆಗೆ ನುಗ್ಗಿದ್ದ ಆರೋಪಿಗಳು, ಕವಿತಾರನ್ನು ಕೊಂದು ₹1.40 ಲಕ್ಷ ನಗದು ಹಾಗೂ ಚಿನ್ನಾ
ಭರಣ ದೋಚಿಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದರು.

ಜಾತ್ರೆಯಲ್ಲೇ ಸಂಚು: ಕವಿತಾರ ಪತಿ ಶಿವರಾಮು ಹಾಗೂ ಆರೋಪಿಗಳು, ಚಾಮರಾಜನಗರ ಜಿಲ್ಲೆಯ ಬೆಳವಟಗಿ ಗ್ರಾಮದವರು. ಘಟನೆ ನಡೆಯುವು
ದಕ್ಕೂ 15 ದಿನಗಳ ಮುಂಚೆ ಬೆಳವಟಗಿಯಲ್ಲಿ ಜಾತ್ರೆ ನಡೆದಿತ್ತು. ಶಿವರಾಮ ಕುಟುಂಬ ಸಮೇತ ಹೋಗಿದ್ದರು. ಅಲ್ಲಿಗೆ ಆರೋಪಿಗಳು ಸಹ ಪ್ರತ್ಯೇಕವಾಗಿ ತೆರಳಿದ್ದರು ಎಂದು ಪೊಲೀಸರು ಹೇಳಿದರು.

ಕವಿತಾ ಮೈಮೇಲೆ ಚಿನ್ನಾಭರಣ ಹಾಕಿಕೊಂಡು ಜಾತ್ರೆಯಲ್ಲಿ ಓಡಾಡುತ್ತಿದ್ದರು. ಅವರನ್ನು ನೋಡಿದ್ದ ಆರೋಪಿ ಗಿರಿ, ಶಿವರಾಮು ಅವರನ್ನು ಮಾತನಾಡಿಸಿ ಪರಿಚಯ ಮಾಡಿಕೊಂಡಿದ್ದ. ತಾನೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದ. ನಂತರ, ದಂಪತಿ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದ್ದ. ದಂಪತಿಯ ಬೆಂಗಳೂರಿನ ವಿಳಾಸವನ್ನೂ ತಿಳಿದುಕೊಂಡಿದ್ದ. ಅವರ ಆಭರಣ ದೋಚಲು ಆರೋಪಿಗಳು ಜಾತ್ರೆಯಲ್ಲೇ ಸಂಚು ರೂಪಿಸಿದ್ದರು.

ಜಾತ್ರೆ ಮುಗಿದ ಬಳಿಕ ದಂಪತಿ ಬೆಂಗಳೂರಿಗೆ ವಾಪಸ್‌ ಬಂದಿದ್ದರು. ಆರೋಪಿಗಳು ನಗರಕ್ಕೆ ಬಂದು, ಶಿವರಾಮು ಮನೆಯ ಸುತ್ತಲೂ ಓಡಾಡು
ತ್ತಿದ್ದರು. ಕವಿತಾ ಒಬ್ಬಂಟಿಯಾಗಿದ್ದನ್ನು ಗಮನಿಸಿ ಮನೆಗೆ ನುಗ್ಗಿ ಕೃತ್ಯ ಎಸಗಿದ್ದರು ಎಂದು ‍ಪೊಲೀಸರು ವಿವರಿಸಿದರು.

ಬಾಯಿ ಮುಚ್ಚಿ ಕತ್ತುಕೊಯ್ದ: ‘ಎಂದಿನಂತೆ ಮಕ್ಕಳನ್ನು ಬೆಳಿಗ್ಗೆ ಶಾಲೆಗೆ ಬಿಟ್ಟು ಮನೆಗೆ ವಾಪಸ್‌ ಬಂದಿದ್ದ ಕವಿತಾ, ಬಾಗಿಲು ಹಾಕಿಕೊಂಡು ಕೆಲಸ ಮಾಡುತ್ತಿದ್ದರು. ಅದೇ ವೇಳೆ ಮನೆಗೆ ಬಂದಿದ್ದ ಆರೋಪಿಗಳು, ಬಾಗಿಲು ಬಡಿದಿದ್ದರು. ‘ಯಾರು’ ಎಂದು ಕೇಳಿದ್ದಕ್ಕೆ, ‘ನಾವು ನಿಮ್ಮ ಮನೆ ಪಕ್ಕದಲ್ಲಿ ಕಟ್ಟಡ ನಿರ್ಮಿಸುತ್ತಿರುವ ಕಾರ್ಮಿಕರು’ ಎಂದು ಹೇಳಿದ್ದರು.

ಅದನ್ನು ನಂಬಿದ್ದ ಕವಿತಾ, ಬಾಗಿಲು ತೆರೆಯುತ್ತಿದ್ದಂತೆ ಆರೋಪಿಗಳು ಅವರನ್ನು ಕೊಠಡಿಗೆ ಎಳೆದೊಯ್ದಿದ್ದರು. ಬಾಯಿ ಮುಚ್ಚಿದ್ದ ಗಿರಿ, ಚಾಕುವಿನಿಂದ ಮೂರು ಬಾರಿ ಕತ್ತು ಕೊಯ್ದಿದ್ದ. ರಕ್ತಸ್ರಾವದಿಂದ ಕವಿತಾ ಮೃತಪಟ್ಟರು. ರಕ್ತದ ಕಲೆಗಳನ್ನು ನೋಡಿದ್ದ ಆರೋಪಿ ಅಶೋಕ, ಸ್ಥಳದಲ್ಲೇ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ.

ನಂತರ, ಗಿರಿ ಹಾಗೂ ಆಶಿಷ್‌ ಮನೆಯಲ್ಲಿದ್ದ ಆಭರಣ ಹಾಗೂ ನಗದನ್ನು ಚೀಲದಲ್ಲಿ ತುಂಬಿಕೊಂಡಿದ್ದರು. ಅರ್ಧ ಗಂಟೆಯಾದರೂ ಅಶೋಕ ಮೇಲೆದ್ದಿರಲಿಲ್ಲ. ಆತನ ಮುಖಕ್ಕೆ ನೀರು ಹಾಕಿ ಎಬ್ಬಿಸಿಕೊಂಡು ಹೋಗಿದ್ದರು ಎಂದು ಪೊಲೀಸರು ತಿಳಿಸಿದರು.

ಅಜ್ಜಿ ಮನೆಯಲ್ಲಿ ಸಿಕ್ಕಿಬಿದ್ದ: ತಂದೆ ಶಿವಸ್ವಾಮಿ ಹಾಗೂ ನಾದಿನಿ ಮಂಗಳಗೌರಿ, ಬೆಳಿಗ್ಗೆ 10.30ರ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಕೊಲೆ ಬಗ್ಗೆ ದೂರು ನೀಡಿದ್ದ ಪತಿ ಶಿವರಾಮು ಮೇಲೆಯೇ ಆರಂಭದಲ್ಲಿ ಅನುಮಾನವಿತ್ತು. ಅವರು ಅಮಾಯಕರು ಎಂಬುದು ತನಿಖೆಯಲ್ಲಿ ತಿಳಿಯಿತು ಎಂದು ಪೊಲೀಸರು ಹೇಳಿದರು.

ಶಿವರಾಮು ಸ್ನೇಹಿತರು ಹಾಗೂ ಪರಿಚಯಸ್ಥರ ಬಗ್ಗೆ ಮಾಹಿತಿ ಕಲೆಹಾಕಿದ್ದೆವು. ಜಾತ್ರೆಯಲ್ಲಿ ಗಿರಿ ಪರಿಚಯವಾಗಿದ್ದ ಬಗ್ಗೆ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದರು. ಗಿರಿಯ ಪೂರ್ವಾಪರ ವಿಚಾರಿಸಿದಾಗ, ಹಲವು ಅಪರಾಧ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದು ಗೊತ್ತಾಯಿತು.

ಘಟನೆ ಬಳಿಕ ಆತ, ಕೆಲಸಕ್ಕೂ ಹೋಗಿರಲಿಲ್ಲ. ಆತ ಅಜ್ಜಿಯ ಮನೆಯಲ್ಲಿರುವ ಮಾಹಿತಿ ಸಿಕ್ಕಿತ್ತು. ಅಲ್ಲಿಗೆ ಹೋಗಿ ಆತನನ್ನು ವಶಕ್ಕೆ ಪಡೆದಾಗ, ತಪ್ಪೊಪ್ಪಿಕೊಂಡ. ಉಳಿದ ಆರೋಪಿಗಳ ಹೆಸರನ್ನು ಬಾಯ್ಬಿಟ್ಟ ಎಂದು ಪೊಲೀಸರು ವಿವರಿಸಿದರು.

ವ್ಯಸನಕ್ಕಾಗಿ ಅಪರಾಧ ಕೃತ್ಯ

ಮೂವರು ಆರೋಪಿಗಳು, ಮಾದಕವಸ್ತು ಹಾಗೂ ಮದ್ಯವ್ಯಸನಿಗಳು. ನಿತ್ಯವೂ ಅವರಿಗೆ ಮಾದಕವಸ್ತು ಹಾಗೂ ಮದ್ಯ ಬೇಕಿತ್ತು. ಅದಕ್ಕಾಗಿ, ಹಲವೆಡೆ ಕಳ್ಳತನವನ್ನೂ ಮಾಡುತ್ತಿದ್ದರು.

ಅದರಿಂದ ಬಂದ ಹಣವನ್ನು ವ್ಯಸನಕ್ಕೆ ಖರ್ಚು ಮಾಡುತ್ತಿದ್ದರು. ಜತೆಗೆ, ಸಿನಿಮಾ ನೋಡುವುದು ಹಾಗೂ ಹೊಸ ಬಗೆಯ ಬೆಲೆಬಾಳುವ ಬಟ್ಟೆಗಳನ್ನು ಧರಿಸುವ ಹವ್ಯಾಸವನ್ನೂ ಬೆಳೆಸಿಕೊಂಡಿದ್ದರು. ಇತ್ತೀಚೆಗೆ ವ್ಯಸನಕ್ಕೆ ಹಣ ಸಾಕಾಗಿರಲಿಲ್ಲ. ಹೀಗಾಗಿಯೇ ಈ ಕೃತ್ಯ ಎಸಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

‘ಕದ್ದ ಹಣವನ್ನು ಆರೋಪಿಗಳು ಹಂಚಿಕೊಂಡು, ಖರ್ಚು ಮಾಡಿದ್ದಾರೆ. ಆಭರಣಗಳನ್ನು ಮಾರಾಟ ಮಾಡಿರುವುದಾಗಿ ಹೇಳುತ್ತಿದ್ದಾರೆ. ಅವುಗಳನ್ನು ಜಪ್ತಿ ಮಾಡಬೇಕಿದೆ’ ಎಂದರು.

Comments are closed.