ಕರ್ನಾಟಕ

ಕತ್ತು ಹಿಸುಕಲು ಬಂದ ಪತಿಯನ್ನೇ ರಾಡ್‌ನಿಂದ ಕೊಲೆಗೈದ ಪತ್ನಿ

Pinterest LinkedIn Tumblr


ಬೆಂಗಳೂರು: ಕುಡಿತದ ಅಮಲಿನಲ್ಲಿ ಜಗಳವಾಡಿ ಕತ್ತು ಹಿಸುಕಲು ಬಂದ ಪತಿ ತಲೆಗೆ ರಾಡ್‌ನಿಂದ ಹೊಡೆದು ಪತ್ನಿಯೇ ಕೊಲೆಗೈದ ಘಟನೆ ಮಂಗಳವಾರ ತಡರಾತ್ರಿ ಜೆ.ಪಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಳ್ಳಾರಿಯ ಶಿರಗುಪ್ಪ ಮೂಲದ ರಾಜು ( 35) ಕೊಲೆಯಾದವರು, ಈ ಸಂಬಂಧ ರಾಜು ಪತ್ನಿ ಮಹೇಶ್ವರಿ ( 24)ಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಗಾರೆಕೆಲಸ ಮಾಡುವ ದಂಪತಿ ಜೆ.ಪಿ ನಗರ ಮುಖ್ಯರಸ್ತೆಯ ನಿರ್ಮಾಣ ಹಂತದ ಕಟ್ಟಡದ ಸಮೀಪವೇ ಶೆಡ್‌ ಹಾಕಿಕೊಂಡು ವಾಸವಿದ್ದರು. ದಂಪತಿಗೆ ಐದು ವರ್ಷದ ಒಂದು ಗಂಡು ಹಾಗೂ ಮೂರು ವರ್ಷದ ಹೆಣ್ಣು ಮಗುವಿದೆ. ಇವರ ಜೊತೆ ಮಹೇಶ್ವರಿ ತಾಯಿ ಕೂಡ ವಾಸವಿದ್ದರು. ಹಬ್ಬದ ಪ್ರಯುಕ್ತ ಎಲ್ಲರೂ ಕೆಲದಿನಗಳ ಹಿಂದೆ ಊರಿಗೆ ತೆರಳಿದ್ದು, ಮಕ್ಕಳು ಹಾಗೂ ಅತ್ತೆ ಅಲ್ಲಿಯೇ ಉಳಿದುಕೊಂಡಿದ್ದರು. ಎರಡು ದಿನಗಳ ಹಿಂದಷ್ಟೇ ದಂಪತಿ ವಾಪಾಸಾಗಿದ್ದರು.

ದಂಪತಿ ನಡುವೆ ಜಗಳ: ಹಬ್ಬದ ಹಿನ್ನೆಲೆಯಲ್ಲಿ ಮಾಂಸಾಹಾರ ಊಟ ಮಾಡಿ ಎಂದು ಕಟ್ಟಡದ ಮೇಸಿŒ ಮಹೇಶ್ವರಿಗೆ 500 ರೂ. ಕೊಟ್ಟು ಹೋಗಿದ್ದರು. ಮದ್ಯವ್ಯಸನಿಯಾಗಿದ್ದ ಗಂಡ ರಾಜು, ಮಹೇಶ್ವರಿ ಬಳಿ ಜಗಳವಾಡಿ ಹಣ ಕಿತ್ತುಕೊಂಡು ಹೋಗಿ ಕುಡಿದು ಬಂದಿದ್ದ. ಇದೇ ವಿಚಾರಕ್ಕೆ ಊಟದ ಬಳಿಕವೂ ದಂಪತಿ ನಡುವೆ ಜಗಳ ನಡೆದಿದೆ.

ಮಂಗಳವಾರ ತಡರಾತ್ರಿ 3-30ರ ಸುಮಾರಿಗೆ ರಾಜು, ಮಹೇಶ್ವರಿ ಕತ್ತುಹಿಸುಕಲು ಹೋಗಿದ್ದಾನೆ. ಕೋಪಗೊಂಡ ಆಕೆ, ಅಲ್ಲಿಯೇ ಸಮೀಪದಲ್ಲಿದ್ದ ಕಬ್ಬಿಣದ ರಾಡ್‌ ತೆಗೆದುಕೊಂಡು ಆತನ ತಲೆಗೆ ಎರಡು ಬಾರಿ ಹೊಡೆದಿದ್ದಾಳೆ. ರಾಜು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ.

ತಪ್ಪೊಪ್ಪಿಕೊಂಡ ಮಹೇಶ್ವರಿ: ಬೆಳಗ್ಗೆ ಕಟ್ಟಡದ ಬಳಿ ಬಂದ ಮೇಸಿŒಗೆ ಗಂಡ ರಾತ್ರಿ ಎಲ್ಲೋ ಕುಡಿದು ಬಿದ್ದು ಬಂದಿದ್ದಾನೆ ಎದ್ದೇಳುತ್ತಿಲ್ಲ ಎಂದು ಮಹೇಶ್ವರಿ ತಿಳಿಸಿದ್ದಾರೆ. ಕೂಡಲೇ, ಮೇಸ್ತ್ರೀ ಪೊಲೀಸರಿಗೆ ವಿಷಯ ತಿಳಿಸಿದ್ದು, ವಿಚಾರಣೆ ವೇಳೆ ತಾನೇ ತಲೆಗೆ ರಾಡ್‌ನಿಂದ ಒಡೆದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. ಈ ಸಂಬಂಧ ಜೆ.ಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ಉದಯವಾಣಿ

Comments are closed.