ಕರ್ನಾಟಕ

ಪತಿ ಸಾವು, ಪೆರೋಲ್‌ ಮೇಲೆ ಶಶಿಕಲಾ ಬಿಡುಗಡೆ

Pinterest LinkedIn Tumblr


ಬೆಂಗಳೂರು: ಅನಾರೋಗ್ಯದಿಂದ ಮೃತಪಟ್ಟ ಎಂ. ನಟರಾಜನ್‌ ಅವರ ಧಾರ್ಮಿಕ ವಿಧಿ ವಿಧಾನ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರ ಪತ್ನಿ ಶಶಿಕಲಾ ನಟರಾಜನ್‌ 15 ದಿನಗಳ ಪೆರೋಲ್‌ ಅನುಮತಿ ಮೇರೆಗೆ ಮಂಗಳವಾರ ಚೆನ್ನೈಗೆ ತೆರಳಿದರು.

ನಟರಾಜನ್‌ (74) ಅವರನ್ನು ಮಾ. 16ರಂದೇ ಹೃದಯ ಸಂಬಂಧಿ ಕಾಯಿಲೆ ಉಲ್ಬಣಿಸಿದ ಹಿನ್ನೆಲೆಯಲ್ಲಿ ಚೆನ್ನೈಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ತಡರಾತ್ರಿ 1.35ರ ವೇಳೆಗೆ ನಟರಾಜನ್‌ ನಿಧನಹೊಂದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ತತ್‌ಕ್ಷಣ ಶಶಿಕಲಾ ಅವರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಸಜಾ ಕೈದಿಯಾಗಿರುವ ಶಶಿಕಲಾ ಪತಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ, ಕೆಲಕಾಲ ದಿಗ್ಭ್ರಾಂತರಾಗಿದ್ದರು. ಬಹಳ ಹೊತ್ತು ಯಾರೊಂದಿಗೂ ಮಾತನಾಡಿಲ್ಲ.

ಈ ಅವಧಿಯಲ್ಲಿ ಯಾವುದೇ ರೀತಿಯ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು. ಸಭೆಗಳನ್ನು ನಡೆಸಬಾರದು. ಪತಿಯ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸೇರಿ ಅಂತಿಮ ವಿಧಿ ವಿಧಾನ, ಇನ್ನಿತರ ಕಾರ್ಯಗಳನ್ನು ಮುಗಿಸಿಕೊಂಡು ವಾಪಸ್‌ ಆಗಬೇಕು ಎಂಬ ಷರತ್ತುಗಳನ್ನು ವಿಧಿಸಿ ಪೆರೋಲ್‌ ನೀಡಲಾಗಿದೆ. ಅಪರಾಹ್ನ 1.45ರ ಸುಮಾರಿಗೆ ಬೆಂಬಲಿಗರ ಜತೆ ಚೆನ್ನೈ ಕಡೆ ಪಯಣ ಬೆಳೆಸಿದರು.

– ಉದಯವಾಣಿ

Comments are closed.