ಕರ್ನಾಟಕ

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್: ರಾಜ್ಯದ ಹಲವೆಡೆ ಎಸಿಬಿ ದಾಳಿ

Pinterest LinkedIn Tumblr


ಬೆಂಗಳೂರು: ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ರಾಜ್ಯದ ಹಲವು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಬೆಳಗಾವಿ, ಕಲಬುರಗಿ, ದಾವಣಗೆರೆ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ ಎಸ್‌ಪಿ ಅಮರನಾಥ್ ರೆಡ್ಡಿ ನೇತೃತ್ವದ ತಂಡ ಬೆಳಗಾವಿ ಸ್ಮಾರ್ಟ್ ಸಿಟಿ ಎಂಜನಿಯರ್ ಕಿರಣ್ ಸುಬ್ಬರಾವ್ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಕಲಬುರಗಿಯ ಇಬ್ಬರ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆದಿದೆ. ಜಿಲ್ಲೆ ಹುಮ್ನಾಬಾದ್ ತಾಲೂಕಿನ ಕಾರಾಂಜಾ ನೀರಾವರಿ ಯೋಜನೆಯ ಎಇಇ ವಿಜಯ್ ಕುಮಾರ್ ಮನೆ ಮೇಲೆ ಬೀದರ್ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದು, ಮಹತ್ವದ ದಾಖಲೆ ಪರಿಶೀಲನೆ ನಡೆಸಿದ್ದಾರೆ. ನಗರದ ಭಗವತಿ ನಗರದಲ್ಲಿರುವ ವಿಜಯ್ ಕುಮಾರ್ ನಿವಾಸ ಹಾಗೂ ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಮುಂಚಬಾಳ ಗ್ರಾಮದ ನಿವಾಸದ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.ಸಾರಿಗೆ ಇಲಾಖೆಯ ಉಪ ಮುಖ್ಯ ಭದ್ರತಾ ಅಧಿಕಾರಿ ಶ್ರೀಪತಿ ದೊಡ್ಡ ಲಿಂಗಣ್ಣನವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.

ಅಪಾರ ಪ್ರಮಾಣದ ಅಕ್ರಮ ಆಸ್ತಿ ಸಂಪಾದನೆ ಹಾಗೂ ಫಾರಂ 53, ಫಾರಂ 54 ನಲ್ಲಿ ವಂಚನೆ ಆರೋಪ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಉಪ ತಹಶಿಲ್ದಾರ್ ಕೀರ್ತಿ ಜೈನ್ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಪಶ್ಚಿಮ ವಲಯದ ಎಸ್‌ಪಿ ಶೃತಿ ಹಾಗೂ ಚಿಕ್ಕಮಗಳೂರಿನ ಎಸಿಬಿ ಡಿವೈಎಸ್‌ಪಿ ನಾಗೇಶ್ ಶೆಟ್ಚಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಗೋಪಾಲಕೃಷ್ಣ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ಮಹತ್ವದ ದಾಖಲೆ ಪರಿಶೀಲನೆ ನಡೆಸುತ್ತಿದೆ. ಲೆನಿನ್ ನಗರದ ಕೆಇಬಿ ಬಡಾವಣೆಯ ‘ಉಡುಗಿರಿ’ ನಿವಾಸದ ಮೇಲೆ ಈ ದಾಳಿ ನಡೆದಿದೆ.

ತುಮಕೂರು ಉಪವಿಭಾಗಧಿಕಾರಿ ತಿಪ್ಪೇಸ್ವಾಮಿ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚಿತ್ರದುರ್ಗದಲ್ಲಿ ಎರಡು ಮನೆ ಮತ್ತು ತುಮಕೂರಿನ ಮನೆ, ಕಚೇರಿ ಮೇಲೆ ಏಕಕಾಲದಲ್ಲಿ ನಡೆಸಲಾಗಿದ್ದು, ಕಡತಗಳ ಪರಿಶೀಲನೆ ನಡೆಯುತ್ತಿದೆ. ಡಿವೈಎಸ್‌ಪಿ ಚಂದ್ರಪ್ಪ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

Comments are closed.