ಕರ್ನಾಟಕ

ಕಾಂಗ್ರೆಸ್‌ಗೆ ಸೆಡ್ಡು: ಮಂಡ್ಯದಿಂದ ರಮ್ಯಾ ತಾಯಿ ಸ್ಪರ್ಧೆ?

Pinterest LinkedIn Tumblr


ಮಂಡ್ಯ: ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ತಾಯಿ ರಂಜಿತಾ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆಯೇ? ಈ ಸುದ್ದಿ ಜಿಲ್ಲಾ ರಾಜಕಾರಣದಲ್ಲಿ ಹೊಸ ಸಂಚಲನಕ್ಕೂ ಕಾರಣವಾಗಿದೆ.

ಕಾಂಗ್ರೆಸ್‌ ತಮ್ಮನ್ನು ಸರಿಯಾದ ರೀತಿ ನಡೆಸಿಕೊಳ್ಳುತ್ತಿಲ್ಲ. ಎರಡೂವರೆ ದಶಕಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರೂ ಸೂಕ್ತ ಸ್ಥಾನ-ಮಾನ ನೀಡಿಲ್ಲವೆಂಬ ಕಾರಣದಿಂದ ಅಸಮಾಧಾನ ಗೊಂಡಿರುವ ರಂಜಿತಾ, ಪಕ್ಷೇ ತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧಾರ ಮಾಡಿದ್ದಾರೆ.

ನನ್ನನ್ನು ಗುರುತಿಸಿಲ್ಲ: ಕಾಂಗ್ರೆಸ್‌ ಪಕ್ಷ ರಮ್ಯಾ ಅವರಿಗೆ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಹುದ್ದೆ ನೀಡಿದೆ. ಮಗಳ ವಿಚಾರವಾಗಿ ನನ್ನ ಆಕ್ಷೇಪಣೆ ಇಲ್ಲ, ತಕರಾರೂ ಇಲ್ಲ. ಮಕ್ಕಳು ದೊಡ್ಡವರಾದ ಮೇಲೆ ಅವರ ಜವಾಬ್ದಾರಿ, ಹೊಣೆಯೇ ಬೇರೆಯಾಗಿರುತ್ತದೆ.

ಆದರೆ, ನಾನೂ ಕೂಡ ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸಿದ್ದೇನೆ. ಪಕ್ಷದ ಬೆಳವಣಿಗೆಗೆ ದುಡಿಯಲು ಸಣ್ಣ ಸ್ಥಾನಮಾನ ಬೇಕು ಎನ್ನುವ ಅಪೇಕ್ಷೆ ನನ್ನದು. ಆದರೆ, ಪಕ್ಷದವರು ಇದುವರೆಗೂ ನನ್ನನ್ನು ಗುರುತಿಸಿಲ್ಲ. ಇನ್ನೂ ಎಷ್ಟು ದಿನ ಅಂತ ಕಾಯುವುದು ಎಂಬುದು ಅವರ ಮನದಾಳದ ನೋವಾಗಿದೆ.

ಬಂಡಾಯ ಅಭ್ಯರ್ಥಿಯಾಗಲಾರೆ: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಅಂಬರೀಶ್‌ ಸ್ಪರ್ಧಿಸಿದರೆ ಸಂತೋಷ. ಆದರೆ, ಅವರ ವಿರುದ್ಧ
ರಂಜಿತಾ ಬಂಡಾಯವಾಗಿ ಸ್ಪರ್ಧೆ ಮಾಡುವುದಿಲ್ಲವಂತೆ. ಇದೇ ಕಾರಣಕ್ಕೆ ಅವರು ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿಯನ್ನೂ ಹಾಕಿಲ್ಲ.

ಪಕ್ಷದಿಂದಲೇ ಹೊರ ಬಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದರಲ್ಲಿ ಯಾವ ತಪ್ಪೂ ಇಲ್ಲವೆಂಬುದು ರಂಜಿತಾ ಮನೋಭಾವ. ಕಾಂಗ್ರೆಸ್‌ ಅಥವಾ ಅಂಬರೀಶ್‌ ಅವರನ್ನು ಟೀಕಿಸುವ ಗೋಜಿಗೆ ಹೋಗದೆ ರಮ್ಯಾ ಜಿಲ್ಲೆಗೆ ನೀಡಿರುವ ಕೊಡುಗೆ ಯನ್ನೇ ಶ್ರೀರಕ್ಷೆಯನ್ನಾಗಿಸಿ ಕೊಂಡು ಮತದಾರರ ಬಳಿಗೆ ಹೋಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮುಂದಿನವಾರ ಚರ್ಚೆ: ಮಂಡ್ಯ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸುವ ಕುರಿತಂತೆ ರಂಜಿತಾ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಈ ವಿಷಯ ವನ್ನು ರಮ್ಯಾ ಜೊತೆಗೂ ಚರ್ಚಿಸಿಲ್ಲ. ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲು ನಾನು ಸ್ವತಂತ್ರಳು. ಈ ವಿಷಯವಾಗಿ ಮುಂದಿನ ವಾರ ಮಂಡ್ಯಕ್ಕೆ ಆಗಮಿಸಿ ಜನರು, ಅಭಿಮಾನಿಗಳು, ಬೆಂಬಲಿಗರು ಹಾಗೂ ಮುಖಂಡರೊಟ್ಟಿಗೆ ಚರ್ಚಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.

ನಾನು ಕಾಂಗ್ರೆಸ್‌ ಪಕ್ಷದ ಬಲವರ್ಧನೆಗೆ ಸಾಕಷ್ಟು ಶ್ರಮಿಸಿದ್ದೇನೆ. ಪಕ್ಷದ ಕೆಲಸಗಳಿಗಾಗಿ ಮನೆಯಿಂದಲೇ ಹಣ ತಂದು ಖರ್ಚು
ಮಾಡಿ ದ್ದೇನೆ. ಕಳೆದ ಬಾರಿ ರಾಜ್ಯದ ಅನೇಕ ಕ್ಷೇತ್ರಗಳಿಗೆ ಹೋಗಿ ಸ್ವಂತ ದುಡ್ಡು ಹಾಕಿಕೊಂಡು ಪ್ರಚಾರ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೇವೆ.

ಚುನಾವಣೆಗೆ ನಾನು ಹಣ ಕೊಡಿ ಅಂತ ಇದುವರೆಗೂ ಕಾಂಗ್ರೆಸ್‌ ನಾಯಕರನ್ನು ಕೇಳಿಲ್ಲ. ವಾಸ್ತವ ಹೀಗಿದ್ದರೂ ಕಾಂಗ್ರೆಸ್‌ನವರೇ ನಮ್ಮ ಕಾಲೆಳೆಯುತ್ತಾರೆ. ಮಂಡ್ಯ ಜಿಲ್ಲೆಗೆ ಹೋಗಲೂ ಬಿಡುವುದಿಲ್ಲ. ಜನ ಸಂಪರ್ಕದಲ್ಲಿರುವುದನ್ನೂ ಸಹಿಸುವುದಿಲ್ಲ.

ನಮ್ಮ ಪಕ್ಷ ಅಧಿಕಾರದಲ್ಲಿದ್ದರೂ ನನಗೆ ಪಕ್ಷದ ಒಂದು ಸಣ್ಣ ಹುದ್ದೆಯನ್ನೂ ಕೊಡಲಿಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಪುತ್ರಿಗೆ ಜಾಲತಾಣದ ಹುದ್ದೆ ಕೊಟ್ಟ ಕಾಂಗ್ರೆಸ್‌, ತಾಯಿಗೆ ಕೆಪಿಸಿಸಿ ಸದಸ್ಯ ಸ್ಥಾನವನ್ನೂ ನೀಡಿಲ್ಲ. ಇನ್ನು ಆ ಪಕ್ಷದಲ್ಲಿದ್ದು ಏನು ಪ್ರಯೋಜನ ಎನ್ನುವುದು ರಂಜಿತಾ ಆಪ್ತ ವಲಯದ ಪ್ರಶ್ನೆ.

ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಲೋಚಿಸುತ್ತಿರುವುದು ಸತ್ಯ. ಈ ವಿಷಯವಾಗಿ ಜನಾಭಿಪ್ರಾಯ ಸಂಗ್ರಹಿಸಲು ಮುಂದಿನ ವಾರ ಮಂಡ್ಯ ಕ್ಷೇತ್ರಕ್ಕೆ ಬರುತ್ತಿದ್ದೇನೆ. ಎರಡೂವರೆ ದಶಕಗಳ ಕಾಲ ಸಾಮಾನ್ಯ ಕಾರ್ಯಕರ್ತೆಯಾಗಿ ದುಡಿದರೂ ಕಾಂಗ್ರೆಸ್‌ ಯಾವುದೇ ಸ್ಥಾನ ಕೊಡಲಿಲ್ಲ.
-ರಂಜಿತಾ, ಮಾಜಿ ಸಂಸದೆ ರಮ್ಯಾ ತಾಯಿ

* ಮಂಡ್ಯ ಮಂಜುನಾಥ್‌

-Udayavani

Comments are closed.