ಕರ್ನಾಟಕ

ರೈತರ ಆತ್ಮಸ್ಥೈರ್ಯಕ್ಕೆ ಮುಷ್ಠಿಧಾನ್ಯ: ಬಿಜೆಪಿ ಕಾರ್ಯಕರ್ತರಿಂದ ಹೊಸ ಅಭಿಯಾನ

Pinterest LinkedIn Tumblr


ಬೆಂಗಳೂರು: ರೈತರಿಗೆ ಆತ್ಮಸ್ಥೈರ್ಯ ತುಂಬಲು ಹಾಗೂ ಬಿಜೆಪಿ ಸರ್ಕಾರದ ಸಾಧನೆಯನ್ನು ತಿಳಿಸಲು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯ್ತಿಗಳಲ್ಲಿ ಮುಷ್ಠಿಧಾನ್ಯ ಅಭಿಯಾನ ಮಾ.21ರಿಂದ ಆರಂಭವಾಗಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದರು.

ಶನಿವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಾಜ್ಯಾದ್ಯಂತ ಹದಿನೈದು ದಿನಗಳ ಕಾಲ ಮುಷ್ಠಿಧಾನ್ಯ ಅಭಿಯಾನ ನಡೆಯಲಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ರೈತರಿಗಾಗಿ ಏನೂ ಮಾಡುತ್ತಿಲ್ಲ. ಕೃಷಿ ಹಾಗೂ ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ರೈತರ ಅಭಿವೃದ್ಧಿಗಾಗಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಮುಷ್ಠಿಧಾನ್ಯ ಅಭಿಯಾನ ನಡೆಸಲಾಗುತ್ತದೆ ಎಂದು ತಿಳಿಸಿದರು.

ಮಾ.21ರಿಂದ ಆರಂಭ: “ರೈತಬಂಧು ಯಡಿಯೂರಪ್ಪ’ ಘೊಷಣೆಯಡಿ ಮಾ.21ರಿಂದ ಆರಂಭವಾಗುವ ಈ ಅಭಿಯಾನ ಏ.8ರಿಂದ 10 ರ ಅವಧಿಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಸಂಚರಿಸಲಿದೆ. ಈ ಸಂದರ್ಭದಲ್ಲಿ ರೈತರನ್ನು ಒಗ್ಗೂಡಿಸಿ ಮುಷ್ಠಿಧಾನ್ಯದಿಂದ ಸಂಗ್ರಹವಾದ ಅಕ್ಕಿ, ಜೋಳ, ರಾಗಿಯಿಂದ ಊಟ ಸಿದ್ಧಪಡಿಸಿ, ಸಾಮೂಹಿಕ ಭೋಜನ ಮಾಡಲಾಗುತ್ತಿದೆ. ಹಾಗೆಯೇ ಪ್ರತಿ ಗ್ರಾಮ ಪಂಚಾಯ್ತಿಯ ದೊಡ್ಡಹಳ್ಳಿಯಲ್ಲಿ ಗ್ರಾಮ ಸಭೆಯನ್ನು ನಡೆಸಲಿದ್ದೇವೆ ಎಂದರು.

ಮುಷ್ಠಿಧಾನ್ಯ ಅಭಿಯಾನಕ್ಕಾಗಿ 6000 ಪ್ರಮುಖರನ್ನು ನೇಮಿಸಲಾಗಿದ್ದು, ಇವರಿಗೆಲ್ಲಾ ಒಂದು ಬ್ಯಾಗ್‌ ನೀಡಲಾಗುತ್ತದೆ. ಅದರಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕರಪತ್ರ, ಬಿಜೆಪಿಯ ಸಾಧನೆ, ಕಾಂಗ್ರೆಸ್‌ ರೈತರಿಗೆ ಮಾಡಿರುವ ವಂಚನೆಯ ವಿವರದ ಇನ್ನೊಂದು ಕರಪತ್ರ ಇರಲಿದೆ. ಜತೆಗೆ ಬಿಜೆಪಿಯ ನಾಲ್ಕೈದು ಶಾಲು ಇರಲಿದೆ. ಮುಷ್ಠಿಧಾನ್ಯ ಪ್ರಮುಖರು ರೈತರ ಮನೆ ಮನೆಗೆ ಹೋಗಿ ಅವರಿಂದ ಧಾನ್ಯ ಸಂಗ್ರಹಿಸಿ, ಬಿಜೆಪಿಯ ಕರಪತ್ರವನ್ನು ನೀಡಲಿದ್ದಾರೆ. ಈ ವೇಳೆ ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

ಕೇಂದ್ರದಲ್ಲಿ 50 ವರ್ಷಕ್ಕೂ ಅಧಿಕ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರ ಪೂರ್ಣಗೊಳಿಸದೇ ನೆನೆಗುದಿಗೆ ಬಿದ್ದಿದ್ದ 99 ನೀರಾವರಿ ಯೋಜನೆಗಳನ್ನು ಬಿಜೆಪಿ ಜಾರಿಗೆ ತಂದಿದೆ. ಹಾಸನದ ರೈತರಿಗೆ ಆಲೂಗಡ್ಡೆ ಬೆಲೆಯಲ್ಲಿ ನಷ್ಟವಾದಾಗ ಅದನ್ನು ಭರಿಸಲಾಗಿದೆ. ದಾವಣೆಗೆರೆಯಲ್ಲಿ ಜೋಳದ ಬೆಲೆ ಕುಸಿದಾಗ 1,550 ರೂ. ಬೆಂಬಲ ಬೆಲೆ ನೀಡಿ ಖರೀದಿಸಲಾಗಿತ್ತು ಎಂದರು. ಮುಖಂಡರಾದ ಅರವಿಂದ ಲಿಂಬಾವಳಿ, ರವಿಕುಮಾರ್‌, ಅನ್ವರ್‌ ಮಾನಿಪ್ಪಾಡಿ ಮೊದಲಾದವರು ಇದ್ದರು.

ಬಿಜೆಪಿ ಆಡಳಿತದ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ರೈತರ ಸಾಲ ಮನ್ನಾ ಮಾಡಿದ ಮಾದರಿಯಲ್ಲೇ ಕರ್ನಾಟಕದ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವನ್ನು ರಾಜ್ಯ ಸರ್ಕಾರವೇ ಮನ್ನಾ ಮಾಡಲಿ.
-ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವ

-ಉದಯವಾಣಿ

Comments are closed.