ಕರ್ನಾಟಕ

ಪಕ್ಷ ಬದಲಿಸಿಯೂ ಗೆದ್ದ ಉತ್ತರ ಕರ್ನಾಟಕ ಸರದಾರ‌ರು

Pinterest LinkedIn Tumblr


ಹುಬ್ಬಳ್ಳಿ: ರಾಜಕೀಯ ಚದುರಂಗದಾಟದಲ್ಲಿ ಉತ್ತರ ಕರ್ನಾಟಕದ ಅನೇಕರು ಪಕ್ಷ ಬದಲಿಸಿಯೂ ಗೆಲುವಿನ ನಗೆ ಬೀರಿದ್ದಾರೆ. ಕಲಬುರಗಿ ಜಿಲ್ಲೆಯ ಖಮರುಲ್‌ ಇಸ್ಲಾಂ ಅವರು 1978ರಲ್ಲಿ ಪಕ್ಷೇತರರಾಗಿ, 1989ರಲ್ಲಿ ಮುಸ್ಲಿಂ ಲೀಗ್‌, 1994ರಲ್ಲಿ ಇಂಡಿಯನ್‌ ನ್ಯಾಷನಲ್‌ ಲೀಗ್‌, 1999ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಕ್ಷೇತ್ರ ಪುನರ್‌ ವಿಂಗಡಣೆ ನಂತರ ಕಲಬುರಗಿ ಉತ್ತರ ಕ್ಷೇತ್ರದಿಂದ 2008, 2013ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದರು.

ಕಲಬುರಗಿ ಜಿಲ್ಲೆಯ ಮಾಲಿಕಯ್ಯ ಗುತ್ತೇದಾರ ಅಫ‌ಲ್‌ಪುರ ಕ್ಷೇತ್ರದಿಂದ ಕಾಂಗ್ರೆಸ್‌, ಜನತಾದಳ, ಕೆಸಿಪಿ ಅಭ್ಯರ್ಥಿಯಾಗಿ ಒಟ್ಟು ಏಳು ಬಾರಿ ಗೆಲುವು ಕಂಡಿದ್ದಾರೆ. 1985, 1989ರಲ್ಲಿ ಕಾಂಗ್ರೆಸ್‌ನಿಂದ, 1994ರಲ್ಲಿ ಬಂಗಾರಪ್ಪನವರ ಕರ್ನಾಟಕ ಕಾಂಗ್ರೆಸ್‌ ಪಕ್ಷ(ಕೆಸಿಪಿ)ದಿಂದ ಗೆಲುವು ಸಾಧಿಸಿದ್ದರು. 1999ರಲ್ಲಿ ಜನತಾದಳ, 2008 ಮತ್ತು 2013ರಲ್ಲಿ ಮತ್ತೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ.

ಆರ್‌.ವಿ.ದೇಶಪಾಂಡೆ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಕ್ಷೇತ್ರದಿಂದ ಒಟ್ಟು ಏಳು ಬಾರಿ ಶಾಸಕರಾಗಿದ್ದಾರೆ. 1983, 1985, 1989, 1994ರವರೆಗೆ ಜನತಾ ಪರಿವಾರದಿಂದ ಗೆದ್ದಿದ್ದರು. 1999, 2004 ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಕಂಡಿದ್ದಾರೆ. 2008ರಲ್ಲಿ ಮಾತ್ರ ಸೋಲು ಕಂಡಿದ್ದರು. ಗುರುಪಾದಪ್ಪ ನಾಗಮಾರಪಳ್ಳಿ 1983, 1985, 1989 ಹಾಗೂ 1999ರಲ್ಲಿ ಜನತಾ ಪರಿವಾರದಿಂದ, 2004ರಲ್ಲಿ ಕಾಂಗ್ರೆಸ್‌ನಿಂದ ಔರಾದ್‌ ಶಾಸಕರಾಗಿದ್ದರು.

2008ರಲ್ಲಿ ಬೀದರನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದಿದ್ದರಾದರೂ ಕೆಲವೇ ದಿನದಲ್ಲಿ ರಾಜೀನಾಮೆ ನೀಡಿ ಬಿಜೆಪಿಯಿಂದ ಗೆದ್ದಿದ್ದರು. 2013ರಲ್ಲಿಯೂ ಬಿಜೆಪಿಯಿಂದ ಗೆದ್ದಿದ್ದರು. ಬಿ.ಆರ್‌.ಪಾಟೀಲ ಆಳಂದದಿಂದ 1983, 2004ರಲ್ಲಿ ಜನತಾ ಪರಿವಾರದಿಂದ, 2013ರಲ್ಲಿ ಕೆಜೆಪಿಯಿಂದ ಗೆಲುವು ಸಾಧಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಬಸವರಾಜ ರಾಯರಡ್ಡಿ 1983, 1994, 1999ರಲ್ಲಿ ಜನತಾ ಪರಿವಾರದಿಂದ, 2004 ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದಾರೆ.

ರಾಯಚೂರು ಜಿಲ್ಲೆ ಸಿಂಧನೂರಿನ ಹಂಪನಗೌಡ ಬಾದರ್ಲಿ 1989, 1999ರಲ್ಲಿ ಜನತಾ ಪರಿವಾರದಿಂದ, 2004 ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ, ಬಾಗಲಕೋಟೆ ಕ್ಷೇತ್ರಗಳಿಂದ ಶಾಸಕರಾಗಿರುವ ಎಚ್‌.ವೈ.ಮೇಟಿ, 1989, 1994, 2004ರಲ್ಲಿ ಜನತಾ ಪರಿವಾರದಿಂದ, 2013ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದಿದ್ದಾರೆ.

ವಿಜಯಪುರ ಜಿಲ್ಲೆಯ ಶಿವಾನಂದ ಪಾಟೀಲ ತಿಕೋಟಾ ಕ್ಷೇತ್ರದಿಂದ 1994ರಲ್ಲಿ ಜನತಾದಳ, 1999ರಲ್ಲಿ ಬಿಜೆಪಿಯಿಂದ ಗೆದ್ದಿದ್ದರು. ಬಸವನಗಬಾಗೇವಾಡಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ 2004 ಹಾಗೂ 2013ರಲ್ಲಿ ಗೆದ್ದಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕ್ಷೇತ್ರದಿಂದ ಉಮೇಶ ಕತ್ತಿ 1989, 1994, 1999, 2008ರಿಂದ ಜನತಾ ಪರಿವಾರದಿಂದ ಗೆಲುವು ಸಾಧಿಸಿದ್ದರು. 2008ರಲ್ಲಿ ಜೆಡಿಎಸ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಗೆದ್ದಿದ್ದರು. 2013ರಲ್ಲಿಯೂ ಬಿಜೆಪಿಯಿಂದ ಗೆದ್ದಿದ್ದಾರೆ.

ಅರಭಾವಿ ಕ್ಷೇತ್ರದಿಂದ ಬಾಲಚಂದ್ರ ಜಾರಕಿಹೊಳಿ 2004, 2008ರಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದರು. 2008ರಲ್ಲಿ ರಾಜೀನಾಮೆ ನೀಡಿ ಬಿಜೆಪಿ ಸೇರಿ ಗೆದ್ದಿದ್ದರು. 2013ರಲ್ಲಿಯೂ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಿತ್ತೂರಿನ ಡಿ.ಬಿ.ಇನಾಮದಾರ 1983, 1985ರಲ್ಲಿ ಜನತಾ ಪರಿವಾರದಿಂದ, 1994, 1999 ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದಾರೆ.

ಬಳ್ಳಾರಿ ಜಿಲ್ಲೆ ಸಂಡೂರಿನಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಗೆದ್ದಿದ್ದ ಸಂತೋಷ ಲಾಡ್‌, 2008 ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದ ಧಾರವಾಡ ಜಿಲ್ಲೆ ಕಲಘಟಗಿಯಿಂದ ಗೆದ್ದಿದ್ದಾರೆ. ಉಳಿದಂತೆ ವಿ.ಎಸ್‌.ಕೌಜಲಗಿ, ಲಕ್ಷ್ಮಣ ಸವದಿ, ಅನಿಲ್‌ ಲಾಡ್‌, ಭರಮಗೌಡ ಕಾಗೆ, ಅಮರೇಗೌಡ ಭಯ್ನಾಪುರ, ಸಿ.ಎಂ.ಉದಾಸಿ ಇನ್ನಿತರರು ಪಕ್ಷ ಬದಲಾಯಿಸಿಯೂ ಗೆಲುವು ಕಂಡಿದ್ದಾರೆ.

* ಅಮರೇಗೌಡ ಗೋನವಾರ

-ಉದಯವಾಣಿ

Comments are closed.