ರಾಷ್ಟ್ರೀಯ

ಕೃಷಿ ಬೆಂಬಲ ಬೆಲೆ ಕುರಿತು ಗೊಂದಲ ಬೇಡ: ಪ್ರಧಾನಿ ಮೋದಿ

Pinterest LinkedIn Tumblr


ಹೊಸದಿಲ್ಲಿ: ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಕುರಿತಂತೆ ಪ್ರತಿಪಕ್ಷಗಳು ರೈತರಲ್ಲಿ ಗೊಂದಲ ಸೃಷ್ಟಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಎಲ್ಲ ಪ್ರಮುಖ ಬೆಳೆಗಳಿಗೆ ಎಲ್ಲ ವೆಚ್ಚಗಳನ್ನೂ ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗುತ್ತದೆ. ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟಿನಷ್ಟು ಬೆಂಬಲ ಬೆಲೆ ನೀಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಘೋಷಿಸಲಾದ ಕನಿಷ್ಠ ಬೆಂಬಲ ಬೆಲೆಯ ಲಾಭ ರೈತರಿಗೆ ದಕ್ಕುವಂತೆ ಖಾತ್ರಿಪಡಿಸಲು ರಾಜ್ಯ ಸರಕಾರಗಳ ಜತೆ ಕೇಂದ್ರ ಕೆಲಸ ಮಾಡುತ್ತಿದೆ ಎಂದು ಅವರು ನುಡಿದರು.

ಮೂರು ದಿನಗಳ ಕೃಷಿ ಉನ್ನತಿ ಮೇಳ ಉದ್ದೇಶಿಸಿ ಮಾತನಾಡಿದ ಅವರು, ರೈತರು ತಮ್ಮ ಬೆಳೆ ತ್ಯಾಜ್ಯಗಳನ್ನು ಸುಡದಂತೆ ಮನವಿ ಮಾಡಿದರು. ಇದರಿಂದ ಮಾಲಿನ್ಯವನ್ನೂ ತಡೆಯಬಹುದು ಎಂದು ಪ್ರಧಾನಿ ನೆನಪಿಸಿದರು.

ಖಾದ್ಯ ತೈಲದ ಆಮದು ಪ್ರಮಾಣ ತಗ್ಗಿಸಲು ಹೆಚ್ಚು ಹೆಚ್ಚು ಎಣ್ಣೆ ಬೀಜಗಳನ್ನು ಬೆಳೆಯುವಂತೆ ರೈತರಿಗೆ ಪ್ರಧಾನಿ ಕರೆ ನೀಡಿದರು. ಅಲ್ಲದೆ 2022ರ ವೇಳೆಗೆ ಯೂರಿಯಾ ಬಳಕೆಯನ್ನು ಅರ್ಧಕ್ಕೆ ಇಳಿಸುವ ಅಗತ್ಯವನ್ನೂ ಸಾರಿದರು.

2018-19ರ ಕೇಂದ್ರ ಬಜೆಟ್‌ನಲ್ಲಿ ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗುವುದನ್ನು ಖಾತ್ರಿಪಡಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ನುಡಿದರು.

ಎಲ್ಲ ಅಧಿಸೂಚಿತ ಬೆಳೆಗಳಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟಿನಷ್ಟು ಕನಿಷ್ಠ ಬೆಂಬಲ ಬೆಲೆ ನೀಡಲು ನಿರ್ಧರಿಸಲಾಗಿದೆ ಎಂದು ಮೋದಿ ತಿಳಿಸಿದರು.

ಬೆಂಬಲ ಬೆಲೆ ಕುರಿತಂತೆ ಹಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತ ಜನರಲ್ಲಿ ಗೊಂದಲ ಸೃಷ್ಟಿಸಲು ಹವಣಿಸುತ್ತಿದ್ದಾರೆ. ಆದರೆ, ಬೆಂಬಲ ಬೆಲೆ ನಿರ್ಧಾರದಲ್ಲಿ ಉತ್ಪಾದನಾ ವೆಚ್ಚವೇ ಪ್ರಮುಖ ಅಂಶವಾಗಿರುತ್ತದೆ. ಅದರಲ್ಲಿ ಕೂಲಿಯಾಳುಗಳ ಬಾಡಿಗೆ, ಸ್ವಂತ ವೆಚ್ಚ ಹಾಗೂ ಬಾಡಿಗೆ ಯಂತ್ರಗಳ ವೆಚ್ಚ, ಜಾನುವಾರು ಶಕ್ತಿ ಬಳಕೆ ವೆಚ್ಚ, ಬೀಜ ಮತ್ತು ರಸಗೊಬ್ಬರ ವೆಚ್ಚ, ನೀರಾವರಿ ವೆಚ್ಚ, ರಾಜ್ಯ ಸರಕಾರಕ್ಕೆ ನೀಡುವ ಕಂದಾಯ, ದುಡಿಯುವ ಬಂಡವಾಳದ ಮೇಲಿನ ಬಡ್ಡಿ, ಮತ್ತು ಇತರ ವೆಚ್ಚಗಳೂ ಅಡಕವಾಗಿರುತ್ತವೆ’ ಎಂದು ಮೋದಿ ವಿವರಿಸಿದರು.

Comments are closed.