ಕರ್ನಾಟಕ

ನೋಂದಣಿ ಮಾಡಿಸದೆಯೇ ಕೋಟಿ ಕೋಟಿ ಮೋಸ

Pinterest LinkedIn Tumblr


ಬೆಂಗಳೂರು: ಹಣ ದ್ವಿಗುಣಗೊಳಿಸುವ ಆಮಿಷದಡಿ ನೂರಾರು ಮಂದಿ ಗ್ರಾಹಕರಿಂದ ಕೋಟ್ಯಂತರ ರೂಪಾಯಿ ವಂಚಿಸಿರುವ ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಕಂಪನಿಯನ್ನು ನೋಂದಣಿಯೇ ಮಾಡಿಸಿಲ್ಲ ಎಂಬ ಆಘಾತಕಾರಿ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ.

ಕಂಪನಿ ನೋಂದಣಿಯಾಗಿದೆ ಎಂದೇ ನಂಬಿಸಿ ಪ್ರತಿಷ್ಟಿತರೂ ಸೇರಿ ಜನರಿಂದ ಹೂಡಿಕೆ ಪಡೆದಿದ್ದ. ಆದರೆ, ಆತ ನೋಂದಣಿ ವಿಚಾರದಲ್ಲೂ ಮೋಸ ಮಾಡಿದ್ದ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಆರೋಪಿ ರಾಘವೇಂದ್ರ ಶ್ರೀನಾಥ್‌, ವಿಕ್ರಂ ಇನ್‌ವೆಸ್ಟ್‌ ಕಂಪನಿಯಷ್ಟೇ ಅಲ್ಲದೆ ವಿಕ್ರಂ ಗ್ಲೋಬಲ್‌ ಕಮಾಡಿಟಿಸ್‌ ಪ್ರೈ ಲಿ, ವಿಕ್ರಂ ಲಾಜಿಸ್ಟಿಕ್‌ ಎಂಬ ಇತರೆ ಎರಡು ಕಂಪನಿಗಳನ್ನು ಚೆನ್ನೈನಲ್ಲಿ ನಡೆಸುತ್ತಿದ್ದು, ಒಟ್ಟು ನಾಲ್ಕು ಕಂಪನಿಗಳನ್ನು ತೆರೆದಿದ್ದಾನೆ. ಆದರೆ ಈ ಕಂಪನಿಗಳನ್ನು ನೋಂದಣಿ ಮಾಡಿಸಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಫೈನಾನ್ಸ್‌ ಅಥವಾ ಬೇರೆ ಯಾವುದೇ ಚಿಟ್‌ಫ‌ಂಡ್‌ಗೆ ಸಂಬಂಧಿಸಿದ ಸಂಸ್ಥೆಯನ್ನು ಆರಂಭಿಸುವ ಮೊದಲು ಸಹಕಾರ ನಿಬಂಧಕರ ಕಚೇರಿಯಲ್ಲಿ ನೊಂದಾಯಿಸಬೇಕು.

ಆದಾಯ ತೆರಿಗೆ ಕಟ್ಟಿಲ್ಲ
ವಿಕ್ರಂ ಗ್ಲೋಬಲ್‌ ಕಮಾಡಿಟಿಸ್‌ ಅನ್ನು ರಫ್ತು ಮತ್ತು ಆಮದು ಮಾಡಲು ಸ್ಥಾಪಿಸಿದ್ದು, ಇದರಲ್ಲಿ ಶ್ರೀನಾಥ್‌ ಶೇ.40 ಮತ್ತು ಆತನ ಪತ್ನಿ ಸುನೀತಾ ಶೇ. 20 ಷೇರು ಹೂಡಿಕೆ ಮಾಡಿದ್ದಾರೆ. ಇನ್ನುಳಿದ್ದಂತೆ ಶ್ರೀನಾಥ್‌ ಸ್ನೇಹಿತರು, ಪರಿಚಯಸ್ಥರು ಶೇ.40 ರಷ್ಟು ಹೂಡಿಕೆ ಮಾಡಿದ್ದಾರೆ. ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಕೂಡ ಇದೇ ಮಾದರಿಯಲ್ಲಿ ಸ್ಥಾಪಿಸಿದ್ದು, ಪತ್ನಿ ಸುನೀತಾ ಕಂಪನಿಯ 2ನೇ ನಿರ್ದೇಶಕಿಯಾಗಿದ್ದಾರೆ. ಈ ಕಂಪನಿಯ ಆದಾಯ ತೆರಿಗೆಯನ್ನು ಪಾವತಿಸಿಲ್ಲ. ಎಲ್ಲ ಗ್ರಾಹಕರೊಂದಿಗೆ ಆನ್‌ಲೈನ್‌ ಹಾಗೂ ಚೆಕ್‌ ಮೂಲಕ ವ್ಯವಹಾರ ನಡೆಸಿರುವುದರಿಂದ ಸಾವಿರಾರು ಪುಟಗಳ ಬ್ಯಾಂಕ್‌ ಡಿಟೇಲ್ಸ್‌ ಪರಿಶೀಲಿಸಲಾಗುತ್ತಿದೆ. ಇದೇ ನಮಗೆ ದೊಡ್ಡ ತಲೆನೋವಾಗಿದೆ ಎಂದು ವಿಶ್ವಾಸನೀಯ ಮೂಲಗಳು
“ಉದಯವಾಣಿ’ಗೆ ತಿಳಿಸಿವೆ.

ವಿದೇಶದಲ್ಲಿ ಹಣ ಹೂಡಿಕೆ
ವಿಕ್ರಂ ಇನ್‌ವೆಸ್ಟ್‌ಮೆಂಟ್‌ನ ಕಂಪನಿ ಮುಖ್ಯಸ್ಥ ಸೇರಿ ಎಲ್ಲ ಐವರು ಆರೋಪಿಗಳು ಮಲೇಷಿಯಾ ಸೇರಿದಂತೆ ವಿದೇಶದಲ್ಲಿ ಹಣ ಹೂಡಿಕೆ ಮಾಡಿರುವ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ, ಇದಕ್ಕೆ ಪೂರಕವಾದ ದಾಖಲೆಗಳು ಸಿಗುತ್ತಿಲ್ಲ. ಹೀಗಾಗಿ ಎರಡು ಕಂಪನಿಗಳ ಲೆಕ್ಕಪರಿಶೋಧನೆ ಮುಗಿದ ಬಳಿಕ ಎಲ್ಲವೂ ತಿಳಿಯಲಿದೆ. ಮತ್ತೂಂದೆಡೆ ಆರೋಪಿಗಳು ವಿಚಾರಣೆ ಸಂದರ್ಭದಲ್ಲಿ ಗ್ರಾಹಕರಿಗೆ ಹಣ ವಾಪಸ್‌ ಕೊಡುತ್ತೇವೆ ಎನ್ನುತ್ತಿದ್ದಾರೆ. ಆದರೆ, ಈ ಹಣ ಎಲ್ಲಿ ಹೂಡಿಕೆ ಮಾಡಲಾಗಿದೆ ಎಂಬುದನ್ನು ಹೇಳುತ್ತಿಲ್ಲ.

ಯಶವಂತಪುರದ ಎಪಿಎಂಸಿ ಮಾರುಕಟ್ಟೆ ಮಳಿಗೆಯೊಂದರಲ್ಲಿ ವಿಕ್ರಂ ಗ್ಲೋಬಲ್‌ ಕಮಾಡಿಟಿಸ್‌ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದ ರಾಘವೇಂದ್ರ ಶ್ರೀನಾಥ್‌ ಈರುಳ್ಳಿ ಮತ್ತು ಮೆಣಸಿನಕಾಯಿಯನ್ನು ಮಲೇಷಿಯಾಕ್ಕೆ ರಫ್ತು ಮಾಡುತ್ತಿದ್ದ. ಈ ವ್ಯವಹಾರದಲ್ಲಿ ಹೆಚ್ಚು ಲಾಭವಾಗಿದ್ದ ರಿಂದ 2008ರಲ್ಲಿ ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಕಂಪೆನಿ ಶುರು ಮಾಡಿದ್ದ. ನಂತರ ಎಲ್‌ಐಸಿ ಏಜೆಂಟ್‌ಗಳಾಗಿರುವ ಇತರೆ ಆರೋಪಿಗಳನ್ನು ಜತೆಗೂಡಿಸಿಕೊಂಡು ವ್ಯವಹಾರ ಆರಂಭಿಸಿದ್ದಾನೆ.

ಇದರಲ್ಲಿ ಕೋಟಿಗಟ್ಟಲೆ ಲಾಭ ಬರುತ್ತಿದ್ದಂತೆ ಶ್ರೀನಾಥ್‌ ಮಲೇಷಿಯಾದಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾನೆ ಎಂಬ ಮಾಹಿತಿ ಇದೆ. ಈ ಸಂಬಂಧ ಕೆಲವೊಂದು ದಾಖಲೆಗಳು ಕೂಡ ಪತ್ತೆಯಾಗಿವೆ. ಆದರೆ, ಇವು ನಕಲಿ ಅಥವಾ ಅಸಲಿ ದಾಖಲೆಗಳ ಎಂಬ ಬಗ್ಗೆ ಪರಿಶೀಲಿಸಬೇಕಿದೆ. ವ್ರಿಕ್ರಂ ಇನ್‌ವೆಸ್ಟ್‌ಮೆಂಟ್‌ ಕಂಪೆನಿ ಮತ್ತು ವಿಕ್ರಂ ಗ್ಲೋಬಲ್‌ ಕಮಾಡಿಟಿಸ್‌ ಕಂಪೆನಿಗಳ ಲೆಕ್ಕಪರಿಶೋಧನೆ ಮುಕ್ತಾಯದ ಬಳಿಕ ಎಲ್ಲವೂ ತಿಳಿಯಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಜತೆಗೆ ಆರೋಪಿಗಳು ಅಮೆರಿಕ ಸೇರಿದಂತೆ ಕೆಲ ದೇಶಗಳಲ್ಲೂ ಗ್ರಾಹಕರನ್ನು ಹೊಂದಿದ್ದಾರೆ. ಈ ಗ್ರಾಹಕರ ಮೂಲಕ ಅಲ್ಲಿನ ಕೆಲ ಉದ್ದಿಮೆಗಳಿಗೆ ಹಣ ಹೂಡಿಕೆ ಮಾಡಿದ್ದಾನೆ. ಅಲ್ಲದೇ ತಮಿಳುನಾಡಿನ ಚೆನ್ನೈ ಸೇರಿ ನೆರೆ ರಾಜ್ಯಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಫ್ಲ್ಯಾಟ್‌ ಹಾಗೂ ನಿವೇಶನ ಆಸ್ತಿ ಹೊಂದಿದ್ದಾನೆ. ಈ ಎಲ್ಲ ದಾಖಲೆಗಳನ್ನು ಸಂಪೂರ್ಣವಾಗಿ ಸಿಕ್ಕ ಬಳಿಕ ಜಪ್ತಿ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಮಲೇಷಿಯಾ ವ್ಯಕ್ತಿ ಪಾಲುದಾರಿಕೆ
ಇದರೊಂದಿಗೆ ಚೆನ್ನೈನಲ್ಲಿರುವ ವಿಕ್ರಂ ಲಾಜಿಸ್ಟಿಕ್‌ ಕಂಪನಿಗೆ ಮಲೇಷಿಯಾ ಮೂಲದ ವ್ಯಕ್ತಿಯ ಪಾಲುದಾರಿಕೆ ಇದೆ. ಆತನ ಮಾಹಿತಿಯನ್ನು ಶ್ರೀನಾಥ್‌ ಬಾಯಿ ಬಿಡುತ್ತಿಲ್ಲ. ಇನ್ನು ಎಲ್ಲ ಸಂಸ್ಥೆಗಳ ಆದಾಯವನ್ನು ಚೆನ್ನೈನಲ್ಲಿರುವ ಮತ್ತೂಂದು ವಿಕ್ರಂ ಕಮಾಡಿಟಿಸ್‌ ಕಂಪನಿಯಲ್ಲಿ ತೋರಿಸಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದರು.

ಐಟಿ ಇಲಾಖೆಗೆ ಪತ್ರ
ಮತ್ತೂಂದೆಡೆ ಆರೋಪಿಗಳ ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ನೀಡುವಂತೆ ದಕ್ಷಿಣ ವಿಭಾಗದ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿದ್ದಾರೆ. ಶ್ರೀನಾಥ್‌ ಹಾಗೂ ಇತರೆ ಆರೋಪಿಗಳ ಹೆಸರಿನಲ್ಲಿ ಸ್ಥಾಪಿಸಿರುವ ಕಂಪೆನಿಗಳ ಮಾಹಿತಿ, ವಾರ್ಷಿಕ ವಹಿವಾಟು ಸೇರಿದಂತೆ ಆದಾಯ ತೆರಿಗೆ ಮಾಹಿತಿ ನೀಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.

ಎಲ್‌ಐಸಿಯಿಂದಲೂ ವಿವರ ಕೋರಿಕೆ
ಶ್ರೀನಾಥ್‌ ಹೊರತು ಪಡಿಸಿ ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಕಂಪೆನಿಯಲ್ಲಿ ವೆಲ್ತ್‌ ಮ್ಯಾನೇಜರ್‌ಗಳಾಗಿ ನೇಮಕಗೊಂಡಿರುವ ಸೂತ್ರಂ ಸುರೇಶ್‌, ಪ್ರಹ್ಲಾದ್‌, ನಾಗರಾಜ್‌ ಹಾಗೂ ನರಸಿಂಹಮೂರ್ತಿಯ ಕುರಿತ ಮಾಹಿತಿ ನೀಡುವಂತೆ ಎಲ್‌ಐಸಿಗೂ ಪತ್ರ ಬರೆದಿದ್ದಾರೆ.

ಪ್ರಕರಣ ಸಿಐಡಿಗೆ?
ರಾಘವೇಂದ್ರ ಶ್ರೀನಾಥ್‌ ಮತ್ತು ತಂಡ 300 ಕೋಟಿ ರೂ. ಹಣ ವಂಚಿಸಿದೆ. ಹೀಗಾಗಿ ಇದನ್ನು ಪ್ರಕರಣ ಸಿಐಡಿಗೆ ವಹಿಸುವ ಸಾಧ್ಯತೆಯಿದೆ. ಇದೊಂದು ಭಾರೀ ಪ್ರಮಾಣದ ಆರ್ಥಿಕ ವ್ಯವಹಾರವಾದ್ದರಿಂದ ಸ್ಥಳೀಯ ಪೊಲೀಸರಿಗೆ ತಮ್ಮ ಕೆಲಸದ ಒತ್ತಡಗಳ ನಡುವೆ ಪ್ರಕರಣವನ್ನು ಸಂಪೂರ್ಣವಾಗಿ ಬೇಧಿಸಲು ಕಷ್ಟವಾಗುತ್ತದೆ. ಹೀಗಾಗಿ ಸಿಐಡಿಯ ಆರ್ಥಿಕ ವಿಭಾಗಕ್ಕೆ ಪ್ರಕರಣ ವರ್ಗಾವಣೆ ಮಾಡವ ಬಗ್ಗೆ ಹಿರಿಯ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಾರಿ ನಿರ್ದೇಶನಾಲಯ ಮಾಹಿತಿ
ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವುದರಿಂದ ಜಾರಿ ನಿರ್ದೇಶನಾಲಯ ಮಾಹಿತಿ ಪಡೆಯುವ ಸಾಧ್ಯತೆಯಿದೆ. ಆರೋಪಿಗಳು ಎಲ್ಲ ವ್ಯವಹಾರನ್ನು ನೇರವಾಗಿ ಬ್ಯಾಂಕ್‌ ಹಾಗೂ ಚೆಕ್‌ ಮೂಲಕ ಮಾಡಿರುವುದರಿಂದ ಅಕ್ರಮ ಹಣದ ಪತ್ತೆಯಾಗಿ ಮಾಹಿತಿ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್‌ ವಶಕ್ಕೆ
ಈ ಮಧ್ಯೆ, ಪ್ರಕರಣದ ಆರೋಪಿಗಳಾದ ಸೂತ್ರಂ ಸುರೇಶ್‌, ಪ್ರಹ್ಲಾದ್‌, ನಾಗರಾಜ್‌ ಹಾಗೂ ನರಸಿಂಹಮೂರ್ತಿಯನ್ನು ಮಾರ್ಚ್‌ 16 ರವರೆಗೆ ಮತ್ತೂಮ್ಮೆ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ. ಬುಧವಾರ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಪೊಲೀಸ್‌ ವಶಕ್ಕೆ ಪಡೆಯಲಾಯಿತು.

-ಉದಯವಾಣಿ

Comments are closed.