
ಬೆಂಗಳೂರು:”ವಿದ್ವತ್ ಮೇಲೆ ಮೊಹ್ಮದ್ ನಲಪಾಡ್ ಹಲ್ಲೆ ನಡೆಸಿಲ್ಲ ಎಂದು ಹೇಳಬೇಡಿ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ನಾನು ನೋಡಿದ್ದೇನೆ. ವಿದ್ವತ್ ಮೇಲೆ ಮೊದಲು ಹಲ್ಲೆ ಮಾಡಿರುವುದು ನಲಪಾಡ್ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ”
ಸೋಮವಾರ ನಡೆದ ಮೊಹಮದ್ ನಲಪಾಡ್ ಹ್ಯಾರಿಸ್ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್‌ಕುಮಾರ್ ಉದ್ಗರಿಸಿದ್ದು ಹೀಗೆ..
ನಲಪಾಡ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ ನಾಗೇಶ್,ಉದ್ದೇಶಪೂರ್ವಕವಾಗಿ ವಿದ್ವತ್ ಮೇಲೆ ಹಲ್ಲೆಯಾಗಿಲ್ಲ. ಅದೊಂದು ಆಕಸ್ಮಿಕ ಘಟನೆ, ಒಂದು ಗುಂಪು ವಿದ್ವತ್ ಮೇಲೆ ಹಲ್ಲೆ ನಡೆಸಿದೆ. ಅದರೆ, ನಲಪಾಡ್ ಹಲ್ಲೆ ನಡೆಸಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಬೇಕಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿಗಳು,ಆರೋಪಿ ನಲಪಾಡ್ ಹಲ್ಲೆ ನಡೆಸಿಲ್ಲ ಎಂಬುದನ್ನು ಹೇಳಬೇಡಿ. ಆತನೇ ಮೊದಲು ವಿದ್ವತ್ ಮೇಲೆ ಕೈ ಮಾಡುವ ದೃಶ್ಯಾವಳಿಗಳನ್ನು ನಾನೇ ನೋಡಿದ್ದೇನೆ. ಈ ಅಂಶ ಬಿಟ್ಟು ವಾದ ಮುಂದುವರಿಸಿ ಎಂದರು.
ನಂತರ ವಾದ ಮುಂದುವರಿಸಿದ ಸಿ.ವಿ ನಾಗೇಶ್, ಪ್ರಾಸಿಕ್ಯೂಶನ್ ನೀಡಿರುವ ಸಿಸಿಟಿವಿ ಫೂಟೇಜ್ ಖಚಿತತೆ ಹೇಗೆ ನಂಬಬೇಕು.ಅರ್ಜಿದಾರರಿಗೆ ನೀಡಿಯೇ ಇಲ್ಲ ನೇರವಾಗಿ ನ್ಯಾಯಪೀಠಕ್ಕೆ ಸಲ್ಲಿಸಿರುವುದು ಸರಿಯೇ? ಸಿಸಿಟಿವಿ ದೃಶ್ಯಾವಳಿಗಳ ಅಸಲಿಯತ್ತು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸಾಬೀತಾಗಬೇಕಿದೆ. ಉದ್ದೇಶಪೂರ್ವಕವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ತಿರುಚಿರಬಹುದು ಎಂದರು.
ಅಲ್ಲದೆ,ಪ್ರಕರಣದ ಸುದೀರ್ಘ ವಿಚಾರಣೆ ಹಿನ್ನೆಲೆಯಲ್ಲಿ ಎಲ್ಲ ಪ್ರಕರಣಗಳಂತೆ ಇದೂ ಕೂಡ ಸಾಮಾನ್ಯ ಪ್ರಕರಣವಷ್ಟೆ. ಇದಕ್ಕೆ ಯಾಕಿಷ್ಟು ಹೈಪ್ ನೀಡಲಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಮುಂದುವರಿದ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳು ಅಭಿಪ್ರಾಯವ್ಯಕ್ತಪಡಿಸಿದರು.
ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ವಿದ್ವತ್ ಡಿಸಾcರ್ಜ್ ವರದಿಯನ್ನು ನಕಲು ಮಾಡಲಾಗಿದೆ ಎಂಬ ಪ್ರಾಸಿಕ್ಯೂಶನ್ ವಾದವನ್ನು ತಳ್ಳಿ ಹಾಕಿದ ಸಿ.ವಿ ನಾಗೇಶ್, ವಿದ್ವತ್ ಆರೋಗ್ಯದ ಕುರಿತು ಆಸ್ಪತ್ರೆ ವೈದ್ಯರೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಆಸ್ಪತ್ರೆಗೆ ದಾಖಲಾದ ಮೊದಲ ದಿನದಿಂದಲೂ ಚಿಕಿತ್ಸೆ ನೀಡಿದ ಡಾ. ಆನಂದ್ ವಿರುದ್ಧವೇ ಇದೀಗ ಆರೋಪ ಮಾಡುತ್ತಿರುವುದು ಸರಿಯಲ್ಲ. ಶಾಸಕ ಹ್ಯಾರಿಸ್ ತನ್ನ ಪ್ರಭಾವ ಬಳಸಿಕೊಂಡು ಡಿಸಾcರ್ಜ್ ವರದಿ ಪಡೆದುಕೊಂಡಿಲ್ಲ. ಅಧೀನ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ ವರದಿಯೇ ಅವರಿಗೂ ಸಿಕ್ಕಿದೆ. ಹೀಗಾಗಿ ವಿದ್ವತ್ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿಯೂ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ದಾಖಲೆಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತಪ್ಪೇನು? ಸುಳ್ಳು ವರದಿಯನ್ನು ಸೃಷ್ಟಿಸಲಾಗಿದೆ ಎಂಬ ಪ್ರಾಸಿಕ್ಯೂಶನ್ ವಾದದಲ್ಲಿ ಹುರುಳಿಲ್ಲ ಎಂದರು.
ಸುದೀರ್ಘ ವಾದ ಮಂಡಿಸಿದ ನಾಗೇಶ್, ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ನಡೆದ ಹಲ್ಲೆ ಸಂಬಂಧ ಆರೋಪಿಗಳ ವಿರುದ್ಧ ಐಪಿಸಿ ಕಲಂ 307 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಈ ಕಲಂ ಪ್ರಕರಣಕ್ಕೆ ಕೊಲೆಯತ್ನಕ್ಕೆ ಪ್ರಚೋದನೆಯಾಗಿಲ್ಲ. ಮಾರಾಕಾಸ್ತ್ರಗಳನ್ನು ಬಳಕೆ ಮಾಡಿಲ್ಲ. ಬಾಟಲ್‌ಗಳನ್ನು ಮಾರಕಾಸ್ತ್ರ ಎಂದು ಪರಿಗಣಿಸಲು ಬರುವುದಿಲ್ಲ. ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಂಡಿದೆ. ಸಾಕ್ಷ್ಯಾಧಾರಗಳನ್ನು ಜಫ್ತಿ ಮಾಡಲಾಗಿದೆ. ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಇನ್ನಿತರೆ ಅಂಶಗಳನ್ನು ಪರಿಗಣಿಸಿ ಜಾಮೀನು ಮುಂಜೂರು ಮಾಡುವಂತೆ ಕೋರಿದರು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ಯಾಮಸುಂದರ್ ವಾದ ಮಂಡಿಸಿ, ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಘಟನೆಯನ್ನು 100ಕ್ಕೂ ಹೆಚ್ಚುಮಂದಿ ನೋಡಿದ್ದಾರೆ. ಕೆಲವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕಿದೆ. ಜತೆಗೆ , ವಿದ್ವತ್ ಆರೋಗ್ಯ ಕುರಿತಂತೆ ತನಿಖೆ ಭಾಗವಾಗಿ ಮಲ್ಯ ಆಸ್ಪತ್ರೆಯಲ್ಲಿಯೂ ಕೆಲ ದಾಖಲೆಗಳು ಪಡೆದುಕೊಳ್ಳಬೇಕಿದೆ ಹೀಗಾಗಿ ಜಾಮೀನು ಮುಂಜೂರು ಮಾಡಬಾರದು ಎಂದು ಬಲವಾಗಿ ಪ್ರತಿಪಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಮಾರ್ಚ್ 14ಕ್ಕೆ ಮುಂದೂಡಿದರು.
ನಕ್ಕಲ್ ರಿಂಗ್ ಎಲ್ಲಿಂದ ಬಂತು!
ವಾದ ಮುಂದುವರಿಸಿದ ವಕೀಲ ಸಿ.ವಿ ನಾಗೇಶ್, ವಿದ್ವತ್ ಮೇಲೆ ಹಲ್ಲೆ ವೇಳೆ ನಕ್ಕಲ್ ರಿಂಗ್ ಬಳಸಲಾಗಿದೆ ಎಂಬ ವಿಚಾರವನ್ನು ಪ್ರಾಸಿಕ್ಯೂಶನ್ ಮುಂದಿಟ್ಟಿದೆ. ಆದರೆ, ಪ್ರಕರಣದ ದೂರು, ಎಫ್ಐಆರ್, ಪಂಚನಾಮೆ, ಆರೋಪಿಗಳ ಹೇಳಿಕೆ, ಫರ್ಜಿ ಕೆಫೆ ಓನರ್ ಹೇಳಿಕೆ ಇನ್ನಿತರೆ ದಾಖಲೆಗಳಲ್ಲಿ ಎಲ್ಲಿಯೂ ನಕ್ಕಲ್ ರಿಂಗ್ ಉಲ್ಲೇಖವೇ ಆಗಿಲ್ಲ. ಈ ಎಲ್ಲ ದಾಖಲೆಗಳಲ್ಲಿ ಜಗ್ ಮತ್ತು ಬಾಟಲ್‌ನಿಂದ ಹಲ್ಲೆ ನಡೆಸಲಾಗಿದೆ ಎಂದಷ್ಟೇ ಇರುವಾಗ, ನಕ್ಕಲ್ ರಿಂಗ್ ವಿಚಾರ ಹೇಗೆ ಬಂತು. ಪ್ರಾಸಿಕ್ಯೂಶನ್ ಉದ್ದೇಶಪೂರ್ವಕವಾಗಿಯೇ ನಕ್ಕಲ್ ರಿಂಗ್ ಸೃಷ್ಟಿಸಿದೆ ಎಂದು ಬಲವಾಗಿ ಆರೋಪಿಸಿದರು.
ಪ್ರಕರಣದ ಎಲ್ಲ ದಾಖಲೆಗಳಲ್ಲಿ ಬಾಟಲ್ಸ್ ಹಾಗೂ ಜಗ್ ಇದ್ದಾಗ, ಸ್ಪೆಲ್ಲಿಂಗ್ ಮಿಸ್ಟೇಕ್‌ನಿಂದ ರಿಂಗ್ ಎಂದು ತಿರುಚಿರಬಹುದು. ಯಾವ ರೀತಿಯಲ್ಲಿ ಅದು ರಿಂಗ್ ಎಂದುಕೊಂಡರೋ ಗೊತ್ತಿಲ್ಲ ಎಂದಾಗ, ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಅದನ್ನು ರಿಂಗ್ ಎಂಬ ಅರ್ಥದಲ್ಲಿಯೇ ಓದಿಕೊಳ್ಳಬಹುದು ಎಂದರು.
-ಉದಯವಾಣಿ
Comments are closed.