ಕರಾವಳಿ

ತಂಬಾಕು ಮುಕ್ತ ಶಾಲೆ – ಒಂದು ಪ್ರಯತ್ನ/ ಗೃಹರಕ್ಷಕರಿಗೆ ಸ್ಕೊಬ ಡೈವಿಂಗ್ ತರಬೇತಿ / ಕಂಪ್ಯೂಟರ್ ಬೇಸಿಕ್ ತರಬೇತಿಗೆ ಅಹ್ವಾನ

Pinterest LinkedIn Tumblr

ಮಂಗಳೂರು ಮಾರ್ಚ್ 13: ದ.ಕ ಜಿಲ್ಲಾ ತಂಬಾಕು ನಿಯಂತ್ರಣ ಕೋಶವು 2017-18 ಸಾಲಿನ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿದ ಮಾರ್ಗಸೂಚಿಯಂತೆ ಜಿಲ್ಲೆಯ 95ಕ್ಕೂ ಹೆಚ್ಚು ಶಾಲೆಗಳಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕ ಸಮುದಾಯಕ್ಕೆ ಶಾಲಾ ಆರೋಗ್ಯ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ “ತಂಬಾಕು ಮುಕ್ತ ಶಾಲೆ” ಮಾಡುವಲ್ಲಿ ಶಾಲಾ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಪಾತ್ರ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಪ್ರಕಾರ ಮಕ್ಕಳಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಬಂಧ, ಚಿತ್ರ ಕಲಾ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಅಷ್ಟೇ ಅಲ್ಲದೇ ಕೋಟ್ಪಾ 2003ನ ಸೆಕ್ಷನ್ 6(ಬಿ) ನಾಮ ಫಲಕಗಳನ್ನು ವಿತರಿಸಿ ಶಾಲಾ ತಂಬಾಕು ನಿಯಂತ್ರಣ ಸಮಿತಿಯನ್ನು ಕೂಡಾ ಈ ಸಂದರ್ಭದಲ್ಲಿ ರಚಿಸಲಾಯಿತು. ಈ ಮೂಲಕ ದ.ಕ ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಶಾಲೆಗಳನ್ನು ತಂಬಾಕು ಮುಕ್ತ ಮಾಡುವಲ್ಲಿ ಹೆಜ್ಜೆಯನ್ನು ಇರಿಸಿದೆ.

ಗೃಹರಕ್ಷಕರಿಗೆ ಸ್ಕೊಬ ಡೈವಿಂಗ್ ತರಬೇತಿ :

ಮಂಗಳೂರು ಮಾರ್ಚ್ 13:ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಮಾರ್ಚ್ 12 ಮತ್ತು 13 ರಂದು ಸ್ಕೊಬ ಡೈವಿಂಗ್ ಸಲಕರಣೆಗಳನ್ನು ಪರಿಶೀಲಿಸಿ ತರಬೇತಿಯನ್ನು ನೀಡಲಾಯಿತು.

ಈ ತರಬೇತಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಿಂದ ನುರಿತ ಈಜುಗಾರರು ಹಾಗೂ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯಿಂದ ನುರಿತ ಈಜುಗಾರರು ಹಾಗೂ ಜಿಲ್ಲಾ ಗೃಹರಕ್ಷಕ ದಳದಿಂದ ನುರಿತ ಈಜುಗಾರರಾದ ಉಪ್ಪಿನಂಗಡಿ ಘಟಕದ ಇಸ್ಮಾಯಿಲ್, ಸುದರ್ಶನ್, ವಸಂತ, ಸುಳ್ಯ ಘಟಕದಿಂದ ಪ್ರಭಾಕರ ಪೈ, ಪಣಂಬೂರು ಘಟಕದಿಂದ ರಾಕೇಶ್, ಪುತ್ತೂರು ಘಟಕದಿಂದ ಪ್ರಜ್ವಲ್ ಡಿ’ಸೋಜ, ಬೆಳ್ತಂಗಡಿ ಘಟಕದಿಂದ ಕೇಶವ, ಸುರತ್ಕಲ್ ಘಟಕದಿಂದ ಪಡಿಯಪ್ಪ ಅಣ್ಣಿಗೇರಿ ಹಾಗೂ ಮಂಗಳೂರು ಘಟಕದ ಗೃಹರಕ್ಷಕರು ಹಾಜರಾಗಿದ್ದರು.

ಈ ತರಬೇತಿಯಲ್ಲಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ| ಮುರಳಿ ಮೋಹನ್ ಚೂಂತಾರು, ಉಪಸಮಾದೇಷ್ಟ ರಮೇಶ್, ಜಿಲ್ಲಾ ಅಗ್ನಿಶಾಮಕ ಠಾಣೆಯ ಅಧಿಕಾರಿ ಶೇಖರ್, ಎಸ್‍ಪಿ ಕಚೇರಿಯ ಪ್ರೀತೇಶ್ ಮತ್ತು ಮಂಗಳಾ ಈಜುಕೊಳದ ರಮೇಶ್ ಕುಮಾರ್ ಉಪಸ್ಥಿತರಿದ್ದರು.

ಕಂಪ್ಯೂಟರ್ ಬೇಸಿಕ್ ತರಬೇತಿ :

ಮಂಗಳೂರು ಮಾರ್ಚ್ 13 :ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ದಕ್ಷಿಣಕನ್ನಡ ಜಿಲ್ಲೆ, ಮಂಗಳೂರು ಇದರ ವತಿಯಿಂದ ಕಂಪ್ಯೂಟರ್ ಬೇಸಿಕ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. 7ನೇ ತರಗತಿಯಿಂದ ಮೇಲ್ಪಟ್ಟು ಆಸಕ್ತ ಅಭ್ಯರ್ಥಿಗಳು ಮಾರ್ಚ್ 22 ರೊಳಗೆ ತಮ್ಮ ಹೆಸರನ್ನು ಉದ್ಯೋಗ ವಿನಿಮಯ ಕಚೇರಿಗೆ ಬಂದು ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ದಕ್ಷಿಣಕನ್ನಡ ಜಿಲ್ಲೆ, ಮಂಗಳೂರು, ಈ ಕಛೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 0824-2457139 ಮೂಲಕ ಸಂಪರ್ಕಿಸಲು ದಕ.ಜಿಲ್ಲೆ ಮಂಗಳೂರು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಉದ್ಯೋಗಾಧಿಕಾರಿ ಇವರ ಪ್ರಕಟಣೆ ತಿಳಿಸಿದೆ.

Comments are closed.