ಕರ್ನಾಟಕ

ಬಿಜೆಪಿ ಸೇರ್ಪಡೆ ಸುದ್ದಿ: ಶಾಮನೂರು ಶಿವಶಂಕರಪ್ಪ ಹೇಳಿದ್ದೇನು?

Pinterest LinkedIn Tumblr


ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಕಾಂಗ್ರೆಸ್‌ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಭೇಟಿ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಪ್ರತ್ಯೇಕ ಲಿಂಗಾಯತ ಧರ್ಮ ವಿವಾದದ ಕುರಿತು ಸಿದ್ಧಗಂಗಾ ಮಠದಲ್ಲಿ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದು ಜೊತೆಯಲ್ಲೇ ಊಟವನ್ನೂ ಮಾಡಿದ್ದಾರೆ. ಆ ಬಳಿಕ ಶಾಮನೂರು ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿತ್ತು.

ಅಖಿಲ ಭಾರತ ವಿರಶೈವ ಮಹಾಸಭಾದ ಅಧ್ಯಕ್ಷರಾಗಿರುವ ಶಿವಶಂಕರಪ್ಪ ಅವರು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ತೀವ್ರ ವಿರೋಧ ಹೊಂದಿದ್ದು ಸಚಿವ ಎಂ.ಬಿ.ಪಾಟೀಲ್‌ ಮತ್ತು ಸಿಎಂ ಸಿದ್ದರಾಮಯ್ಯ ಅವರ ಮೇಲೆ ತೀವ್ರ ಆಕ್ರೋಶ ಹೊಂದಿದ್ದಾರೆ ಎನ್ನಲಾಗಿದೆ.

ಬಿಎಸ್‌ವೈ ಅವರು ಶಿವಶಂಕರಪ್ಪ ಅವರನ್ನು ಪಕ್ಷಕ್ಕೆ ಆಹ್ವಾನಿಸಿ ಪುತ್ರ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರನ್ನು ಕರೆತರಲು ಕೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ವಿವಾದಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಕಾರಣ. ನೀವು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗುವುದಾದರೆ ವರಿಷ್ಠರೊಡನೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿರುವುದಾಗಿ ವರದಿಯಾಗಿತ್ತು.

ಬಿಎಸ್‌ವೈ ಅವರ ಆಹ್ವಾನಕ್ಕೆ ಶಿವಶಂಕರಪ್ಪ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಯಡಿಯೂರಪ್ಪ ಕಾಂಗ್ರೆಸ್‌ ಸೇರಲಿ

‘ಆಹ್ವಾನ ನೀಡಿದ ತಕ್ಷಣ ನಾನು ಬಿಜೆಪಿಗೆ ಹೋಗಲು ಸಾಧ್ಯವೆ? ಬೇಕಾದರೆ ಯಡಿಯೂರಪ್ಪನವರು ಕಾಂಗ್ರೆಸ್‌ಗೆ ಬರಲಿ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷವನ್ನು ತೊರೆಯುವುದಿಲ್ಲ’ ಎಂದು ಸೋಮವಾರ ಸುದ್ದಿಗಾರರಿಗೆ ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ.

‘ನಾನು 50 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದೇನೆ, ಯಡಿಯೂರಪ್ಪ ಜೊತೆ ಊಟ ಮಾಡಿದ ತಕ್ಷಣ ಬಿಜೆಪಿ ಸೇರುತ್ತೇನೆ ಎಂದರ್ಥವೇ’ ಎಂದು ಪ್ರಶ್ನಿಸಿದರು.

-ಉದಯವಾಣಿ

Comments are closed.