ರಾಷ್ಟ್ರೀಯ

ಸುನಂದಾ ಪುಷ್ಕರ್‌ ಳನ್ನು ಕೊಲೆ ಮಾಡಲಾಗಿತ್ತು: ‘ರಹಸ್ಯ ವರದಿ’

Pinterest LinkedIn Tumblr


ಹೊಸದಿಲ್ಲಿ : ಸುನಂದಾ ಪುಷ್ಕರ್‌ ನಿಗೂಢ ಸಾವಿಗೆ ಈಗ ಹೊಸದೊಂದು ತಿರುವು ಲಭಿಸಿದೆ. ರಹಸ್ಯ ವರದಿಯೊಂದರ ಪ್ರಕಾರ ಸುನಂದಾ ಪುಷ್ಕರ್‌ ಅವರನ್ನು ಆಕೆಯ ಪತಿ, ಕಾಂಗ್ರೆಸ್‌ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಶಶಿ ತರೂರ್‌ ಅವರೇ ಕೊಂದಿರುವುದಾಗಿ ಈ ವರದಿ ಹೇಳುತ್ತದೆ.

ಸುನಂದಾ ಪುಷ್ಕರ್‌ ಳನ್ನು ಯಾರು ಕೊಂದರೆಂಬುದು ತನಿಖಾಧಿಕಾರಿಗಳಿಗೆ ಆರಂಭದಿಂದಲೇ ಗೊತ್ತಿತ್ತು; ಆದರೆ ಆಕೆಯ ಸಾವು ಇಂದಿನ ವರೆಗೂ ನಿಗೂಢವಾಗಿಯೇ ಉಳಿದಿದೆ ಎಂದು “ಡಿಎನ್‌ಎ” ಗೆ ಸಿಕ್ಕಿರುವ ಈ ವರದಿಯಲ್ಲಿ ಹೇಳಲಾಗಿದೆ.

ಸುನಂದಾ ಪುಷ್ಕರ್‌ ಮೃತ ದೇಹ ಪತ್ತೆಯಾದ ಲೀಲಾ ಹೊಟೇಲ್‌ ಕೋಣೆಯ ತಪಾಸಣೆ ಮತ್ತು ತನಿಖೆ ನಡೆಸಿದ್ದ ದಿಲ್ಲಿಯ ವಸಂತ ವಿಹಾರ್‌ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ ಅವರಿಗೆ ಇದು ಆತ್ಮಹತ್ಯೆ ಪ್ರಕರಣ ಅಲ್ಲ ಎಂಬ ಸ್ಪಷ್ಟವಾದ ಅಭಿಪ್ರಾಯವಿತ್ತು ಎಂದು ಈ ಪ್ರಕರಣದ ಮೊದಲ ವರದಿಯನ್ನು ಸಿದ್ಧಪಡಿಸಿದ್ದ ಆಗಿನ ಉಪ ಪೊಲೀಸ್‌ ಆಯುಕ್ತ ಬಿ ಎಸ್‌ ಜೈಸ್ವಾಲ್‌ ಮೊದಲ ವರದಿಯಲ್ಲಿ ಹೇಳಿರುವುದನ್ನು ಈ ರಹಸ್ಯ ವರದಿಯು ಉಲ್ಲೇಖೀಸಿದೆ.

ಇನ್‌ಕ್ವೆಸ್ಟ್‌ ನಡವಳಿಕೆಯಿಂದ ಅಸಂತೃಪ್ತರಾಗಿದ್ದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟರು ಸರೋಜಿನಿ ನಗರ ಠಾಣಾಧಿಕಾರಿಯಿಂದ ಈ ಪ್ರಕರಣವನ್ನು ಕೊಲೆ ಕೇಸಾಗಿ ತನಿಖೆ ನಡೆಸಲು ಸೂಚಿಸಿದ್ದರು.

ಅಟಾಪ್ಸಿ ವರದಿಯಲ್ಲಿ “ಸುನಂದಾ ಪುಷ್ಕರ್‌ ಸಾವಿಗೆ ವಿಷಪ್ರಾಷನವೇ ಕಾರಣವಾಗಿದೆ; ಸಾಂದರ್ಭಿಕ ಸಾಕ್ಷ್ಯಗಳು ಆಲ್‌ಪ್ರಝೋಲಾಂ ವಿಷ ಇರುವುದನ್ನು ಸೂಚಿಸುತ್ತವೆ. ಆಕೆಯ ದೇಹದ ಮೇಲಿನ ಗಾಯಗಳು ಮಾರಣಾಂತಿಕವಾಗಿರಲಿಲ್ಲ; ಆವು ದೈಹಿಕ ಜಗಳದ ಪರಿಣಾಮವಾಗಿ ಉಂಟಾಗಿರುವುದು ಸ್ಪಷ್ಟವಿತ್ತು”

”ಆದರೆ ಆಕೆಯ ದೇಹದ ಮೇಲೆ ಕಂಡುಬಂದಿರುವ ಇಂಜೆಕ್ಷನ್‌ನ ಹತ್ತು ಗಾಯಗಳು ಮಾತ್ರ ಭಿನ್ನ ಸ್ವರೂಪದ್ದಾಗಿದ್ದವು. 12ನೇ ನಂಬರ್‌ನ ಗಾಯವು ಹಲ್ಲಿನಿಂದ ಕಚ್ಚಿದ ಪರಿಣಾಮವಾಗಿ ಉಂಟಾದ ಗಾಯವಾಗಿತ್ತು. ನಂಬರ್‌ 1ರಿಂದ 15ರ ವರೆಗಿನ ಗಾಯಗಳು 12 ತಾಸುಗಳಿಂದ ನಾಲ್ಕು ದಿನಗಳ ವರೆಗಿನ ಅವಧಿಯಲ್ಲಿ ಉಂಟಾಗದವುಗಳೆಂದು ತೋರಿ ಬರುತ್ತದೆ” ಎಂದು ಹೇಳಲಾಗಿದೆ.

ಇಂಜೆಕ್ಷನ್‌ ಗಾಯದ ಗುರುತುಗಳು ತಾಜಾ ಸ್ವರೂಪದ್ದಾಗಿದ್ದವು ಎಂದು ವರದಿ ಹೇಳುತ್ತದೆ. ಸುನಂದಾ ದೇಹದ ಮೇಲೆ ಜಗಳದ ಪರಿಣಾಮವಾಗಿ ಉಂಟಾದ ಅನೇಕ ಗಾಯಗಳು ಕಂಡು ಬರುತ್ತವೆ ಎಂದು ವರದಿ ಹೇಳುತ್ತದೆ.

-ಉದಯವಾಣಿ

Comments are closed.