ಕರ್ನಾಟಕ

ಗೌರಿ ಲಂಕೇಶ್ ಹತ್ಯೆ: ಬೆಳಗಾವಿ, ಗೋವಾಗೆ ಎಸ್‌ಐಟಿ ತಂಡ

Pinterest LinkedIn Tumblr

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿರುವ ಮದ್ದೂರಿನ ಕೆ.ಟಿ.ನವೀನ್‌ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಎಸ್ಐಟಿ ಅಧಿಕಾರಿಗಳ ತಂಡವು ಕೊಡೈಕೆನಾಲ್‌, ಬೆಳಗಾವಿ ಹಾಗೂ ಗೋವಾಗೆ ಭಾನುವಾರ ಕರೆದೊಯ್ಯುವ ಸಾಧ್ಯತೆ ಇದೆ.

‘ಹತ್ಯೆಗೆ ಒಳಸಂಚು’ ಆರೋಪದಡಿ ಬಂಧಿಸಿರುವ ಆರೋಪಿಯನ್ನು ಶುಕ್ರವಾರದಿಂದ ಐದು ದಿನಗಳವರೆಗೆ ಕಸ್ಟಡಿಗೆ ಪಡೆದಿರುವ ಎಸ್‌ಐಟಿ, ಆ ಅವಧಿಯಲ್ಲಿ ಹತ್ಯೆ ಸಂಬಂಧ ಮಾಹಿತಿ ಕಲೆಹಾಕಬೇಕಿದೆ. ಹೀಗಾಗಿ ತನಿಖೆಯನ್ನು ಚುರುಕುಗೊಳಿಸಿದೆ.

ಕೊಡೈಕೆನಾಲ್‌, ಬೆಳಗಾವಿ ಹಾಗೂ ಗೋವಾದಲ್ಲಿ ನೆಲೆಸಿರುವ ಕೆಲ ವ್ಯಕ್ತಿಗಳೊಂದಿಗೆ ಆರೋಪಿ ಒಡನಾಟವಿಟ್ಟುಕೊಂಡಿದ್ದ ಎಂಬ ಮಾಹಿತಿ ಎಸ್ಐಟಿಗೆ ಸಿಕ್ಕಿದೆ. ಅದನ್ನು ಖಚಿತಪಡಿಸಿಕೊಳ್ಳಲು, ಆ ವ್ಯಕ್ತಿಗಳು ವಾಸವಿರುವ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ಯಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೂ ತಿಳಿಸಿ ಅನುಮತಿ ಪಡೆದಿದ್ದಾರೆ.

‘ಹಿಂದೂ ಯುವಸೇನೆ ಎಂಬ ಸಂಘಟನೆ ಕಟ್ಟಿದ್ದ ಆರೋಪಿ, ದೇಶದ ಹಲವೆಡೆ ನಡೆಯುತ್ತಿದ್ದ ಧರ್ಮಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದ. ಕರ್ನಾಟಕದಲ್ಲೂ ಆತನ ಮುಂದಾಳತ್ವದಲ್ಲಿ ಧರ್ಮಸಭೆಗಳು ನಡೆಯುತ್ತಿದ್ದವು. ಅದಕ್ಕೆ ಮಹಾರಾಷ್ಟ್ರ, ಗೋವಾ ಹಾಗೂ ಉತ್ತರ ಪ್ರದೇಶಗಳ ರಾಜ್ಯಗಳ ಯುವಕರು ಬಂದು ಹೋಗುತ್ತಿದ್ದರು. ಅವರು ಯಾರು ಎಂಬ ಬಗ್ಗೆ ನವೀನ್‌ಬಾಯ್ಬಿಡುತ್ತಿಲ್ಲ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಧ್ವನಿ ಪರೀಕ್ಷೆಗೆ ಮನವಿ: ‘ಸಾಹಿತಿ ಕೆ.ಎಸ್‌.ಭಗವಾನ್ ಹತ್ಯೆಗೆ ಸಂಚು ರೂಪಿಸುತ್ತಿದ್ದ ಆರೋಪಿ, ಸ್ನೇಹಿತರೊಬ್ಬರ ಜತೆ ಮೊಬೈಲ್‌ನಲ್ಲಿ ಆ ಬಗ್ಗೆ ಮಾತನಾಡಿದ್ದ. ಅದರ ಸಂಭಾಷಣೆ ಲಭ್ಯವಾಗಿದ್ದು, ಅದರಲ್ಲಿರುವುದು ಆತನ ಧ್ವನಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಹೀಗಾಗಿ ಆತನ ಧ್ವನಿ ಪರೀಕ್ಷೆಗೆ ಅನುಮತಿ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದೇವೆ’ ಎಂದು ಮೂಲಗಳು ಹೇಳಿವೆ.

Comments are closed.