ಕರ್ನಾಟಕ

ಪ್ರತ್ಯೇಕ ರಾಜ್ಯಧ್ವಜಕ್ಕೆ ಭಾರೀ ಹಿನ್ನಡೆ, ರಾಷ್ಟ್ರಧ್ವಜ ಬಿಟ್ಟು ಇತರೆ ಅಧಿಕೃತ ಧ್ವಜಕ್ಕೆ ಅವಕಾಶವಿಲ್ಲ ಎಂದ ಕೇಂದ್ರ

Pinterest LinkedIn Tumblr

ನವದೆಹಲಿ: ಕರ್ನಾಟಕ ರಾಜ್ಯವು ಹೊಸ ನಾಡಧ್ವಜವೊಂದಕ್ಕೆ ಅನುಮೋದನೆ ನೀಡಿ ಕೇಂದ್ರ ಸರ್ಕಾರದ ಒಪ್ಪಿಗೆಗೆ ಕಳುಹಿಸಲು ಸಿದ್ದವಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳಿಂದ ಈ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಈ ಮೂಲಕ ರಾಜ್ಯ ಸರ್ಕಾರ ನಿರ್ಧಾರಕ್ಕೆ ಭಾರೀ ಹಿನ್ನಡೆಯುಂಟಾದಂತಾಗಿದೆ.

ಪ್ರತ್ಯೇಕ ನಾಡಧ್ವಜ ಹೊಂದಬೇಕೆಂಬ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ನಿರಾಕರಣೆ ತೋರಿದೆ. ವಿಶೇಷ ಸ್ಥಾನಮಾನ ಹೊಂದಿರುವ ಜಮ್ಮು ಮತ್ತು ಕಾಶ್ಮೀರ ಹೊರಪಡಿಸಿದರೆ, ಉಳಿದ ಯಾವ ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 3 ದಿನದ ಹಿಂದೆ ಪ್ರತ್ಯೇಕ ನಾಡಧ್ವಜ ಅನಾವರಣಗೊಳಿಸಿದ್ದರು. ಈ ಧ್ವಜವನ್ನು ಕೇಂದ್ರ ಸರ್ಕಾರದ ಅಂಗೀಕಾರಕ್ಕೆ ಕಳಿಸಲಾಗುವುದು ಎಂದೂ ತಿಳಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರದ ಅಧಿಕಾರಿಗಳು, ಧ್ವಜ ಸಂಹಿತೆ ಹಾಗೂ ಭಾರತದ ರಾಜ್ಯ ಲಾಂಛನ ನಿಯಮ (ಬೇಕಾಬಿಟ್ಟಿ ಬಳಕೆಗೆ ನಿರ್ಧಾರ) ಕಾಯ್ದೆಯಲ್ಲಿ ಕೇವಲ ತ್ರಿವರ್ಣ ಧ್ವಜದ ಬಗ್ಗೆ ಮಾತ್ರ ಉಲ್ಲೇಖಿಸಲಾಗಿದೆ. ಬೇರಾವ ಧ್ವಜದ ಬಗ್ಗೆ ಉಲ್ಲೇಖವಿಲ್ಲ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ಪರಿಚ್ಛೇದದ ಪ್ರಕಾರ ವಿಶೇಷ ಸ್ಥಾನಮಾನದ ಸೌಲಭ್ಯವಿದೆ. ಹೀಗಾಗಿ ಆ ರಾಜ್ಯವು ತನ್ನದೇ ಆದ ಧ್ವಜ ಹೊಂದಲು ಅವಕಾಶವಿದೆ. ಆದರೆ, ಇತರೆ ರಾಜ್ಯಗಳಿಗಿಲ್ಲ. ನಾಳೆ ವಿವಿಧ ರಾಜ್ಯಗಳು, ಜಿಲ್ಲೆಗಳು, ಗ್ರಾಮಗಳು ತಮ್ಮದೇ ಧ್ವಜ ಹೊಂದಲು ಆರಂಭಿಸಿದರೆ ದೇಶದಲ್ಲಿ ಅರಾಜಕತೆ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ವಕ್ತಾರರರನ್ನು ಪ್ರತಿಕ್ರಿಯೆ ನೀಡಿ, ಕರ್ನಾಟಕ ಸರ್ಕಾರದಿಂದ ನಮಗೆ ಯಾವುದೇ ಪ್ರಸ್ತಾಪ ಬಂದಿಲ್ಲ. ಈಗಲೇ ಪ್ರತಿಕ್ರಿಯೆ ನೀಡಿದರೆ ಸರಿಯಲ್ಲ ಎಂದಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ಮತ್ತೊಬ್ಬ ಅಧಿಕಾರಿ ಮಾತನಾಡಿ, ಪ್ರತ್ಯೇಕ ಧ್ವಜಕ್ಕೆ ಅವಕಾಶವಿಲ್ಲ. ನಮ್ಮದು ಒಂದು ದೇಶ, ಒಂದು ಧ್ವಜ ಎಂದು ತಿಳಿಸಿದರು.

Comments are closed.