ಕರ್ನಾಟಕ

ದ.ಭಾರತದಲ್ಲೇ ಮೊದಲು ಜನಸಂಘ, ಬಿಎಸ್ಪಿ ಅರಳಿದ್ದು ಇಲ್ಲಿ

Pinterest LinkedIn Tumblr


ಪಾರಂಪರಿಕ ನಗರಿ, ಸ್ಮಾರಕಗಳ ಖಣಿ ಎಂದು ಖ್ಯಾತಿ ಹೊತ್ತಿರುವ ಬೀದರ ಉತ್ತರ ಕ್ಷೇತ್ರದ ಮತದಾರರು ಜೆಡಿಎಸ್‌ ಹೊರತುಪಡಿಸಿ ಎಲ್ಲ ರಾಜಕೀಯ ಪಕ್ಷಗಳಿಗೆ ಆಶ್ರಯ ನೀಡಿದೆ. ದಕ್ಷಿಣ ಭಾರತದಲ್ಲೇ ಜನಸಂಘ ಮತ್ತು ಬಿಎಸ್‌ಪಿ ಮೂಲಕ ಪ್ರತಿನಿಧಿ ಯೊಬ್ಬರನ್ನು ಮೊದಲ ಬಾರಿಗೆ ವಿಧಾನಸಭೆಗೆ ಕಳುಹಿಸಿದ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಕ್ಸೂದ್‌ ಅಲಿ ಖಾನ್‌ ಒಬ್ಬರನ್ನು ಬಿಟ್ಟರೆ ನಂತರ ಯಾವುದೇ ಅಭ್ಯರ್ಥಿ ಸತತವಾಗಿ ಎರಡು ಬಾರಿ ಆಯ್ಕೆಯಾಗದಿರುವುದು ವಿಶೇಷ.

ಜತೆಗೆ ಕಾಂಗ್ರೆಸ್‌ನಿಂದ ಶಾಸಕ ರಹೀಮ್‌ ಖಾನ್‌ ಉಪಕದನದಲ್ಲೇ ಗೆಲುವಿನ ನಗೆ ಬೀರಿದ್ದು ಮಗದೊಂದು ವಿಶೇಷ. ಹೈದ್ರಾ ಬಾದ್‌ ರಾಜ್ಯಕ್ಕೊಳಪಟ್ಟಿದ್ದ ಈ ಕ್ಷೇತ್ರದಿಂದ ಶಫಿ ಯುದ್ದೀನ್‌ ಅಹ್ಮದ್‌ ಆಯ್ಕೆಯಾಗಿರುವ ಮೊದಲ ಶಾಸಕರೆಂಬ ಹೆಗ್ಗಳಿಕೆ ಹೊಂದಿದ್ದರೆ, ಜನಸಂಘದಿಂದ ಚಂದ್ರಕಾಂತ ಸಿಂದೋಲ್‌ ಮತ್ತು ಬಿಎಸ್‌ಪಿಯಿಂದ ಜುಲೆಧೀಕಾರ್‌ ಹಾಸ್ಮಿ ಆಯ್ಕೆಯಾಗಿದ್ದಾರೆ.

1952ರಿಂದ 2016ರವರೆಗೆ 17 ಚುನಾವಣೆ ಗಳನ್ನು ಕಂಡಿರುವ ಈ ಕ್ಷೇತ್ರದಲ್ಲಿ ಮೂರು ಬಾರಿ ಉಪ ಚುನಾವಣೆ ನಡೆದಿವೆ. ಒಟ್ಟು 9 ಬಾರಿ ಕಾಂಗ್ರೆಸ್‌, ಬಿಜೆಪಿ 3, ಪಕ್ಷೇತರ 2, ಬಿಎಸ್‌ಪಿ, ಕೆಜೆಪಿ ಮತ್ತು ಬಿಜೆಎಸ್‌ ತಲಾ ಒಂದು ಬಾರಿ ಗೆಲ್ಲುವ ಮೂಲಕ ಬೀದರ ಕೋಟೆಯನ್ನು ಆಳಿ ದ್ದಾರೆ. ಕಾಂಗ್ರೆಸ್‌ನ ಭದ್ರಕೋಟೆ ಎಂದು ಕರೆಯಿಸಿ ಕೊಂಡರೂ ಕ್ಷೇತ್ರದಲ್ಲಿ ಮಧ್ಯದಲ್ಲಿ ವಿವಿಧ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಹೈದ್ರಾಬಾದ್‌ ರಾಜ್ಯದಿಂದ ಮೈಸೂರು ರಾಜ್ಯ ಕ್ಕೊಳಪಟ್ಟ ನಂತರ 1957ರಲ್ಲಿ ನಡೆದ ಚುನಾವಣೆ ಯಲ್ಲಿ ಕಾಂಗ್ರೆಸ್‌ನ ಮಕ್ಸೂದ್‌ ಅಲಿಖಾನ್‌ 2,556 ಮತಗಳ ಅಂತರದಿಂದ ಆಯ್ಕೆಯಾಗಿದ್ದರು. ನಂತರ 1962ರಲ್ಲಿಯೂ 8116 ಮತಗಳ ಅಂತರ ದಿಂದ ಎರಡನೇ ಬಾರಿಗೆ ಗೆದ್ದರು. 1967ರಲ್ಲಿ ಹುಟ್ಟಿಕೊಂಡಿದ್ದ ಭಾರತೀಯ ಜನಸಂಘದಿಂದ ಚಂದ್ರಕಾಂತ ಸಿಂದೋಲ್‌ 5,634 ಮತ ಅಂತರದಿಂದ ಗೆಲುವು ಸಾಧಿ ಸಿ ಕಾಂಗ್ರೆಸ್‌ನ ಎಂ.ಎ. ಖಾನ್‌ ಅವರನ್ನು ಮಣಿಸಿದ್ದರು.

ನಂತರ ಸತತ ಮೂರು ಬಾರಿ ಕಾಂಗ್ರೆಸ್‌ ಗೆಲುವು ಕಂಡಿತು. 1972ರಲ್ಲಿ ಮಾಣಿಕರಾವ್‌ ಫುಲೇಕರ್‌ ಪಕ್ಷೇತರ ಅಭ್ಯರ್ಥಿ ಮಡಿವಾಳಪ್ಪ ಖೇಣಿ ವಿರುದ್ಧ 2,309 ಮತ ಅಂತರದಿಂದ ಜಯ ಗಳಿಸಿದ್ದರೆ, 1978ರಲ್ಲಿ ವೀರಶೆಟ್ಟಿ ಕುಶನೂರ ಜನತಾ ಪಕ್ಷದ ಕಾಶೀನಾಥ ಗುರಪ್ಪ ವಿರುದ್ಧ 16,294 ಮತಗಳ ಅಂತರದಿಂದ ಹಾಗೂ 1982ರಲ್ಲಿ ಮೊಹಸಿನ್‌ ಕಮಾಲ್‌ ಬಿಜೆಪಿಯ ನಾರಾಯಣರಾವ್‌ ಮನ್ನಳ್ಳಿ ವಿರುದ್ಧ 4,385 ಮತಗಳ ಅಂತರದಿಂದ ಆಯ್ಕೆಯಾಗಿದ್ದರು.

1983ರಲ್ಲಿ ಕಾಂಗ್ರೆಸ್‌ನ ಓಟಕ್ಕೆ ಬ್ರೇಕ್‌ ಹಾಕಿದ ವರು ಬಿಜೆಪಿಯ ನಾರಾಯಣರಾವ್‌ ಮನ್ನಳ್ಳಿ. ಪಕ್ಷೇತರರಾಗಿದ್ದ ಮೊಹಸಿನ್‌ ಕಮಾಲ್‌ ವಿರುದ್ಧ 6,154 ಮತ ಅಂತರದಿಂದ ಜಯ ಸಾ ಧಿಸಿದ್ದರು. ಮತ್ತೆ 1985ರಲ್ಲಿ ಕಾಂಗ್ರೆಸ್‌ ಮೆಲುಗೈ ಸಾಧಿ ಸಿತು. ಮಹ್ಮದ್‌ ಲೈಕೋದ್ದೀನ್‌ ಬಿಜೆಪಿಯ ನಾರಾಯಣ ರಾವ್‌ ಅವರನ್ನು 3157 ಮತ ಅಂತರದಿಂದ ಮಣಿಸಿದರೆ, 1989ರಲ್ಲಿ ಬಿಜೆಪಿಯ ಮನ್ನಳ್ಳಿ ಲೈಕೋದ್ದೀನ್‌ ಅವರನ್ನು 1,592 ಮತಗಳಿಂದ ಸೋಲಿಸಿದ್ದರು.

1994ರವರೆಗೆ ಕೇವಲ ಕಾಂಗ್ರೆಸ್‌ ಮತ್ತು ಬಿಜೆಪಿಗೆ ನಿಷ್ಠರಾಗಿದ್ದ ಮತದಾರರು ಬಳಿಕ ಬಿಎಸ್‌ಪಿ ಯನ್ನು ಗೆಲ್ಲಿಸಿದರು. ಜುಲೆಧೀಕಾರ್‌
ಹಾಸ್ಮಿ ಜನತಾ ದಳದ ಅಮೃತ ಚಿಮಕೋಡರನ್ನು 3,552 ಮತ ಅಂತರದಿಂದ ಮಣಿಸಿದರು. 1999ರಲ್ಲಿ ಬಿಜೆಪಿಯ ರಮೇಶ ಪಾಂಡೆ ಕಾಂಗ್ರೆಸ್‌ನ ಬಂಡೆಪ್ಪ ಖಾಶೆಂಪುರ ವಿರುದ್ಧ 2,090 ಮತಗಳಿಂದ ಗೆದ್ದರು. ಆದರೆ, 2004ರಲ್ಲಿ ಖಾಶೆಂಪುರ ಅದೇ ಹಾಸ್ಮಿ ವಿರುದ್ಧ 27,225 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿ ಸಿ ಗಮನ ಸೆಳೆದಿದ್ದರು.

2008ರಲ್ಲಿ ಔರಾದ ಮೀಸಲು ಕ್ಷೇತ್ರವಾದ ಹಿನ್ನೆಲೆಯಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಬೀದರ ಕ್ಷೇತ್ರಕ್ಕೆ ವಲಸೆ ಬಂದು ಕಾಂಗ್ರೆಸ್‌ನಿಂದ ಸ್ಪ ರ್ಧಿಸಿ, ಬಿಎಸ್‌ಪಿಯ ರಹೀಮ್‌ ಖಾನ್‌ರನ್ನು 3 ಸಾವಿರ ಮತಗಳಿಂದ ಸೋಲಿಸಿದ್ದರು. ಆದರೆ, ಶಾಸಕ ನಾಗಮಾರಪಳ್ಳಿ ಅವರ ರಾಜೀನಾಮೆ ಯಿಂದ ತೆರವಾದ್ದರಿಂದ 2009ರಲ್ಲಿ ಉಪ ಚುನಾ ವಣೆ ನಡೆಯಿತು. ಕಾಂಗ್ರೆಸ್‌ನಿಂದ ಸ್ಪ ರ್ಧಿಸಿದ್ದ ರಹೀಮ್‌ ಖಾನ್‌ ಗೆಲುವಿನ ನಗೆ ಬೀರಿದ್ದರು.

ಬಿಜೆಪಿಯಿಂದ ಸ್ಪಧಿಸಿದ್ದ ನಾಗಮಾರಪಳ್ಳಿ ಅವರ ಪುತ್ರ ಸೂರ್ಯಕಾಂತ ಸೋಲಿನ ಕಹಿ ಅನುಭವ ಕಂಡರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಹೀಮ್‌ ವಿರುದ್ಧ ಗುರುಪಾದಪ್ಪ ಕೆಜೆಪಿಯಿಂದ ಸ್ಪ ರ್ಧಿಸಿ ಜಯ ಗಳಿಸಿದ್ದರು. ನಂತರ ಗುರುಪಾದಪ್ಪ ಅವರ ನಿಧನದಿಂದ ಖಾಲಿಯಾದ ಸ್ಥಾನಕ್ಕೆ 2016ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಹೀಮ್‌ ಖಾನ್‌ ಅವರು ಬಿಜೆಪಿಯ ಪ್ರಕಾಶ ಖಂಡ್ರೆ ವಿರುದ್ಧ ಜಯಗಳಿಸಿದ್ದರು.

* ಶಶಿಕಾಂತ ಬಂಬುಳಗೆ

-ಉದಯವಾಣಿ

Comments are closed.