ಕರ್ನಾಟಕ

ಲೋಕಾಯುಕ್ತ ಕಚೇರಿಯಲ್ಲಿ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಚಾಕು ಇರಿದ ಆರೋಪಿ ತೇಜಸ್ ಶರ್ಮಾ ಬಂಧನ

Pinterest LinkedIn Tumblr

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಯುವಕನೊಬ್ಬ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಲೋಕಾಯುಕ್ತ ಕಚೇರಿಗೆ ಬಂದಿದ್ದ ತುಮಕೂರು ಮೂಲದ ಆರೋಪಿ ತೇಜಸ್ ಶರ್ಮಾ ವಿಶ್ವನಾಥ್ ಶೆಟ್ಟಿ ಅವರಿಗೆ ಚೂರಿ ಇರಿದಿದ್ದಾನೆ. ಚೂರಿ ಇರಿತದಿಂದ ವಿಶ್ವನಾತ್ ಶೆಟ್ಟಿ ಅವರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಆಸ್ಪತ್ರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಪ್ರಕರಣ ವಿಚಾರಣೆ ಸಂಬಂಧ ತೇಜಸ್ ಶರ್ಮಾ ಲೋಕಾಯುಕ್ತ ಕಚೇರಿಗೆ ಬಂದಿದ್ದು ಈ ವೇಳೆ ಆತ ಮೂರು ಬಾರಿ ಲೋಕಾಯುಕ್ತರಿಗೆ ಚೂರಿ ಇರಿದಿದ್ದು ಇರಿತದ ತೀವ್ರತೆಗೆ ಚಾಕು ಮುರಿದು ಹೋಗಿದೆ ಎನ್ನಲಾಗಿದೆ.

ಲೋಕಾಯುಕ್ತರಿಗೆ ಮಲ್ಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುಮಾರ್ ಎಂಬ ವಕೀಲರ ಹೆಸರು ಹೇಳಿಕೊಂಡು ಆರೋಪಿ ಒಬ್ಬನೇ ಎರಡನೇ ಮಹಡಿಯಲ್ಲಿರುವ ಲೋಕಾಯುಕ್ತ ಕಚೇರಿ ಪ್ರವೇಶಿಸಿದ್ದ. ಕಚೇರಿಯಲ್ಲಿ ಸಿಸಿಟಿವಿ ಕ್ಯಾಮೆರಾ ಕೂಡ ಇದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯ ವಿರುದ್ಧ ಹಲವು ಪ್ರಕರಣಗಳಿವೆ ಎನ್ನಲಾಗಿದೆ. ಆತ ಲೋಕಾಯುಕ್ತ ಕಚೇರಿಯೊಳಗೆ ಚಾಕು ಕೊಂಡೊಯ್ಯಲು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಸದ್ಯ ಆರೋಪಿ ತೇಜಸ್ ಶರ್ಮಾನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Comments are closed.