ಕರ್ನಾಟಕ

ಒಂದೂವರೆ ಲಕ್ಷ ವೇತನ ಬಿಟ್ಟು ಹೋರಾಟಕ್ಕಿಳಿದ ನಾಗರಾಜ್‌ !

Pinterest LinkedIn Tumblr


ಬಾಗಲಕೋಟೆ: ಈ ಯುವಕ ವಿದೇಶದಲ್ಲಿ ತಿಂಗಳಿಗೆ ಬರೋಬ್ಬರಿ ಒಂದೂವರೆ ಲಕ್ಷ ವೇತನ ಸಂಪಾದಿಸುತ್ತಿದ್ದ. ಆದರೆ, ಅದನ್ನು ತೊರೆದು ಬಂದು ದೇಶದ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಟಕ್ಕಿಳಿದ. ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಹೊರಟಿದ್ದಾರೆ.

ಈ ಯುವಕ ನಾಗರಾಜ ಕಲಕುಟಗರ. ಜರ್ಮನಿಯಲ್ಲಿ ಕ್ಯಾಡ್‌ಫಮ್‌ ವಚ್ಯುìವಲ್‌ ಸಿಟಿ ಸಿಸ್ಟಮ್‌ ಕಂಪನಿಯಲ್ಲಿ ಹಿರಿಯ ಎಂಜಿನಿಯರ್‌ ಆಗಿದ್ದ. ಇವರು ಬಾಗಲಕೋಟೆ ನವನಗರ ನಿವಾಸಿಯಾಗಿದ್ದು, 2012ರಲ್ಲಿ ದೆಹಲಿಯ ಗ್ಯಾಂಗ್‌ ರೇಪ್‌ ನಡೆದ ಬಳಿಕ ಸ್ವದೇಶಕ್ಕೆ ಬಂದಿದ್ದರು.

ಆ ಘಟನೆ, ಅವರನ್ನು ಮರಳಿ ಜರ್ಮನಿಗೆ ಕರೆದೊಯ್ಯಲಿಲ್ಲ. ಜರ್ಮನಿಗೆ ಹೋಗದೆ ಭ್ರಷ್ಟಾಚಾರ, ಅನಾಚಾರ, ಅತ್ಯಾಚಾರ ಹಾಗೂ ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಹೋರಾಟ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿದರು.ಈಗಾಗಲೇ ಬೀದರ ಜಿಲ್ಲೆ ಹೊರತುಪಡಿಸಿ ರಾಜ್ಯದ 29 ಜಿಲ್ಲೆಗಳಲ್ಲೂ ಸುತ್ತಾಡಿದ್ದಾರೆ.

ಪ್ರತಿ ಜಿಲ್ಲೆಯ ನಗರ, ಗ್ರಾಮೀಣ ಪ್ರದೇಶದ ಜೀವನ, ರೈತರ ಸ್ಥಿತಿಗತಿ ಕುರಿತು ಅಧ್ಯಯನ ಮಾಡಿದ್ದಾರೆ.ಆಪ್‌ನ ಸಂಸ್ಥಾಪಕರಲ್ಲಿ ಇವರೂ ಒಬ್ಬರಾದರು. ಮುಂದೆ ಆಪ್‌ ಹಾದಿ ತಪ್ಪಿತೆಂದು ಅದನ್ನು ತೊರೆದು ಏಕಾಂಗಿಯಾಗಿ ತಮ್ಮ ಹೋರಾಟ ಮುಂದುವರಿಸಿದರು.

ಹಳ್ಳಿ ಹಳ್ಳಿಗೆ ಜಾಗೃತಿ: 2014ರಿಂದ ರಾಜ್ಯದ ವಿವಿಧ ಜಿಲ್ಲೆಗಳೂ ಸೇರಿದಂತೆ, ಬಾಗಲಕೋಟೆಯ ಪ್ರತಿ ಹಳ್ಳಿ- ಗಲ್ಲಿಗೆ ಹೋಗಿ, ಸ್ವಂತ ಮೈಕ್‌ ಕೈಗೆ ಹಿಡಿದು ಸ್ವತ್ಛ ವಿಧಾನಸಭಾ ಅಭಿಯಾನ ಶುರು ಮಾಡಿದ್ದಾರೆ. ಈ ಅಭಿಯಾನದಡಿ ಭ್ರಷ್ಟರೇ ರಾಜಕೀಯ ಬಿಟ್ಟು ತೊಲಗಿ ಎಂಬುದು ಅವರ ಧ್ಯೇಯವಾಕ್ಯ.

ಪ್ರತಿಯೊಂದು ಹಳ್ಳಿಗೆ ಹೋದಾಗ ಜನರು ಅವರ ಕನಸು-ಗುರಿ, ಯೋಜನೆಗಳಿಗೆ ಬೆಂಬಲ ಕೊಟ್ಟಿದ್ದಾರೆ. ಇಂತಹ ಆಡಳಿತ ಬರಬೇಕ್ರಿ, ಆದ್ರ ಹಣ- ಹೆಂಡಕ್ಕೆ ಜನರೂ ಮರಳಾಗ್ತಾರೆ ಎಂದು ಎಷ್ಟೊ ಜನರು ಹೇಳಿದ್ದಾರಂತೆ. ಹೀಗಾಗಿ ಮೊದಲು ಜನರ ಜಾಗೃತಿಗೊಳ್ಳಬೇಕು ಎಂಬುದು ಅವರ ನಿಲುವು.

ಬಾಗಲಕೋಟೆಯಿಂದ ಸ್ಪರ್ಧೆ: ದೇಶದಲ್ಲಿ ಕಾಂಗ್ರೆಸ್‌- ಬಿಜೆಪಿಯಿಂದ ಭ್ರಷ್ಟಾಚಾರ ತಡೆಯಲು ಸಾಧ್ಯವಿಲ್ಲ. ಪರ್ಯಾಯ ಶಕ್ತಿ ರೂಪಿಸಬೇಕು. ಅದಕ್ಕೆ ಯುವ ಸಮೂಹ ಇದರ ವಿರುದ್ಧ ಹೋರಾಟ ನಡೆಸಬೇಕು. ಹೀಗಾಗಿ ಬರುವ ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಜನ ಸಾಮಾನ್ಯರ ಪಕ್ಷ ಮತ್ತು ಸ್ವರಾಜ್‌ ಇಂಡಿಯಾ ಪಕ್ಷದಿಂದ ಸ್ಪರ್ಧೆಗೆ ಆಹ್ವಾನವಿದೆ.

ಇದರಲ್ಲಿ ಜನ ಸಾಮಾನ್ಯರ ಪಕ್ಷದಿಂದ ನಿಲ್ಲಬೇಕೆಂದು ಬಯಸಿದ್ದೇನೆ. ಅವರು ಅಭ್ಯರ್ಥಿ ಎಂದು ಘೋಷಣೆ ಮಾಡದಿದ್ದರೂ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ಭ್ರಷ್ಟಾಚಾರ ತೊಡೆದು ಸ್ವತ್ಛ ವಿಧಾನಸಭೆ ಕ್ಷೇತ್ರ ಮಾಡುವುದು ನನ್ನ ಗುರಿ ಎಂದು ನಾಗರಾಜ್‌, ಉದಯವಾಣಿಗೆ ತಿಳಿಸಿದರು.

* ಶ್ರೀಶೈಲ ಕೆ. ಬಿರಾದಾರ

-ಉದಯವಾಣಿ

Comments are closed.