ಬೀದರ್: ಒಂದೆಡೆ ಗೋವು ರಕ್ಷಣೆಯ ಕೂಗು ಕೇಳಿ ಬರುತ್ತಿದ್ದರೆ ಮತ್ತೊಂದೆಡೆ ಅವುಗಳ ಮರಣ ಪ್ರಮಾಣವೂ ಹೆಚ್ಚಾಗುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ.
ಬಾಲ್ಕಿಯ ಮಲ್ಲಣ್ಣ ದೇವಸ್ಥಾನದ ಗೋಶಾಲೆಯಲ್ಲಿನ ಹಸುಗಳು ಆಹಾರ, ನೀರಿಲ್ಲದೆ ಪ್ರಾಣ ಬಿಡುತ್ತಿರುವುದನ್ನು ನೋಡಿದರೆ ಕರುಳು ಹಿಂಡುತ್ತದೆ. ಇನ್ನೊಂದು ಕ್ರೂರತ್ವ ಎಂದರೆ ಹಸುಗಳು ಸಾಯುವುದಕ್ಕೂ ಮೊದಲೇ ಅವುಗಳನ್ನು ಹೂಳಲು ಗುಂಡಿ ತೋಡಿಟ್ಟಿರುವುದು ಎಂಥವರಲ್ಲೂ ಆಕ್ರೋಶ ಹುಟ್ಟಿಸುತ್ತದೆ.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ ಬಾಲ್ಕಿ ಮಲ್ಲಣ್ಣ ದೇವಸ್ಥಾನಕ್ಕೆ ಹರಕೆ ಹೊತ್ತ ಭಕ್ತರು ಇಲ್ಲಿಗೆ ಗೋವುಗಳನ್ನು ತಂದು ಬಿಡುತ್ತಾರೆ. ಆದರೆ, ಈ ಗೋಶಾಲೆಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಆಹಾರ, ನೀರು ಇಲ್ಲ. ಅಲ್ಲದೆ, ರೋಗದಿಂದ ಬಳಲುತ್ತಿರುವ ಆಕಳು ಕರುಗಳಿಗೆ ಸೂಕ್ತ ಚಿಕಿತ್ಸೆಯೂ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಅನೇಕ ಹಸುಗಳು ಮೃತಪಟ್ಟಿವೆ.
ಅಲ್ಲದೆ, ಇಲ್ಲಿನ ಅಧಿಕಾರಿಗಳು ಹಸುಗಳು ಸಾಯುವ ಮೊದಲೇ ಗುಂಡಿಗಳನ್ನು ತೋಡಿಸಿಟ್ಟಿದ್ದಾರೆ. ದೇಗುಲದಲ್ಲೇ ದೇವ ಸ್ವರೂಪಿ ಹಸುಗಳು ಹೀಗೆ ಮೃತಪಡುತ್ತಿದ್ದು ಇನ್ನಾದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.