ಕರ್ನಾಟಕ

ಬಿಎಂಟಿಸಿ ಬಸ್‌ನಲ್ಲೇ ವಿಮಾನದ ಬೋರ್ಡಿಂಗ್‌ ಪಾಸ್‌

Pinterest LinkedIn Tumblr


ಬೆಂಗಳೂರು: ವಿಮಾನ ಪ್ರಯಾಣಿಕರು ಇನ್ನು ಮುಂದೆ ಬೋರ್ಡಿಂಗ್‌ ಪಾಸ್‌ ಪಡೆಯಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್‌) ತೆರಳಿ ಸರದಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಬಿಎಂಟಿಸಿ ಬಸ್‌ಗಳಲ್ಲೇ ಪಡೆದುಕೊಳ್ಳಬಹುದಾಗಿದೆ.

ಬಿಎಂಟಿಸಿ ಮತ್ತು ಕೆಐಎಎಲ್‌ ಸಂಸ್ಥೆಗಳು ವಿಮಾನ ಪ್ರಯಾಣಿಕರಿಗೆ ವಾಯುವಜ್ರ ಬಸ್‌ಗಳಲ್ಲೇ ಬೋರ್ಡಿಂಗ್‌ ಪಾಸ್‌ ಪಡೆಯುವ ವ್ಯವಸ್ಥೆ ಮಾಡಿಕೊಟ್ಟಿವೆ. ವಿಮಾನ ನಿಲ್ದಾಣದ ಆವರಣದಲ್ಲಿರುವ ಸೆಲ್ಫ್‌ ಚೆಕ್‌ ಇನ್‌ ಬೋರ್ಡಿಂಗ್‌ ಪಾಸ್‌ ವಿತರಿಸುವ ಕಿಯೋಸ್ಕ್‌ ಯಂತ್ರವನ್ನು ಬಸ್‌ನಲ್ಲಿ ಅಳವಡಿಸಲಾಗಿದೆ. ಹೀಗಾಗಿ, ಬಿಎಂಟಿಸಿ ವಾಯುವಜ್ರ ಬಸ್‌ಗಳಲ್ಲಿ ಸಂಚರಿಸುವವರು ಪ್ರಯಾಣದ ಮಧ್ಯೆಯೇ ಮುದ್ರಿತ ಬೋರ್ಡಿಂಗ್‌ ಪಾಸ್‌ ಪಡೆದುಕೊಳ್ಳಬಹುದಾಗಿದೆ.

ನಗರದ ಎಲೆಕ್ಟ್ರಾನಿಕ್‌ ಸಿಟಿಯಿಂದ ಕೆಐಎಎಲ್‌ಗೆ ಸಂಚರಿಸುವ ಮಾರ್ಗ ಸಂಖ್ಯೆ 8ರ ವಾಯುವಜ್ರ ಬಸ್‌ನಲ್ಲಿ ಪ್ರಾಯೋಗಿಕವಾಗಿ ಕಿಯೋಸ್ಕ್‌ ಯಂತ್ರವನ್ನು ಅಳವಡಿಸಲಾಗಿದೆ. ವಿಮಾನ ಪ್ರಯಾಣಿಕರು ತಮ್ಮ ಟಿಕೆಟ್‌ನ ಪಿಎನ್‌ಆರ್‌ ಸಂಖ್ಯೆಯನ್ನು ನಮೂದಿಸಿ, ಬೋರ್ಡಿಂಗ್‌ ಪಾಸ್‌ ಪಡೆಯಬಹುದಾಗಿದೆ. ಈ ವ್ಯವಸ್ಥೆಯಿಂದ ಪ್ರಯಾಣಿಕರು ಪಾಸ್‌ ಪಡೆಯಲು ಸರದಿ ಸಾಲಿನಲ್ಲಿ ನಿಲ್ಲುವ ಬದಲು ನೇರವಾಗಿ ಭದ್ರತಾ ತಪಾಸಣಾ ಸ್ಥಳಕ್ಕೆ ತೆರಳಬಹುದು. ಈ ಮೊದಲು ಮೆಜೆಸ್ಟಿಕ್‌-ಕೆಐಎಎಲ್‌ ನಡುವೆ ಸಂಚರಿಸುವ ಮಾರ್ಗ ಸಂಖ್ಯೆ 9ರಲ್ಲಿ ಈ ಸೇವೆ ಕಲ್ಪಿಸಲಾಗಿತ್ತು.

”ಎಲೆಕ್ಟ್ರಾನಿಕ್‌ ಸಿಟಿಯಿಂದ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಯುವಜ್ರ ಬಸ್‌ನಲ್ಲಿ ಪ್ರಾಯೋಗಿಕವಾಗಿ ಬೋರ್ಡಿಂಗ್‌ ಪಾಸ್‌ ವಿತರಿಸುವ ಕಿಯೋಸ್ಕ್‌ ಯಂತ್ರವನ್ನು ಅಳವಡಿಸಲಾಗಿದೆ. ವಾಹನದ ಮಧ್ಯದಲ್ಲಿ ಈ ಯಂತ್ರವನ್ನು ಇಟ್ಟಿದ್ದು, ಯುಪಿಎಸ್‌ ಸಂಪರ್ಕ ಕಲ್ಪಿಸಲಾಗಿದೆ. ವಿಮಾನ ನಿಲ್ದಾಣ ತಲುಪಲು ಒಂದು ತಾಸು ಸಮಯ ಬೇಕಾಗುತ್ತದೆ. ಈ ಅವಧಿಯಲ್ಲಿಯೇ ಪ್ರಯಾಣಿಕರು ಬೋರ್ಡಿಂಗ್‌ ಪಾಸ್‌ನ ಪ್ರಿಂಟ್‌ ಔಟ್‌ ಪಡೆಯುತ್ತಿದ್ದಾರೆ. ಇದಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ,” ಎಂದು ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ರಮೇಶ್‌ (ಕೇಂದ್ರೀಯ ವಲಯ) ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.

”ಜನವರಿಯಿಂದ 15 ದಿನಗಳ ಕಾಲ ಮೆಜೆಸ್ಟಿಕ್‌ನಿಂದ ವಿಮಾನ ನಿಲ್ದಾಣಕ್ಕೆ ಕಾರ್ಯಾಚರಣೆಗೊಳ್ಳುವ ಬಸ್‌ನಲ್ಲಿ ಕಿಯೋಸ್ಕ್‌ ಯಂತ್ರ ಅಳವಡಿಸಲಾಗಿತ್ತು. ಈ ಅವಧಿಯಲ್ಲಿ ಸುಮಾರು 600 ಮಂದಿ ಬೋರ್ಡಿಂಗ್‌ ಪಾಸ್‌ ಪಡೆದುಕೊಂಡಿದ್ದಾರೆ. ಕಳೆದ 20 ದಿನಗಳಿಂದ ಎಲೆಕ್ಟ್ರಾನಿಕ್‌ ಸಿಟಿ ಮಾರ್ಗದಲ್ಲಿ ಯಂತ್ರವನ್ನು ಇಟ್ಟಿದ್ದು, 300-400 ಮಂದಿ ಬೋರ್ಡಿಂಗ್‌ ಪಾಸ್‌ ಪಡೆದಿದ್ದಾರೆ,” ಎಂದು ಹೇಳಿದರು.

Comments are closed.