ಕರ್ನಾಟಕ

ಗೋವಾ, ಮಹಾ ಗಡಿಯಿಂದ ನುಸುಳುವ ಮದ್ಯಕ್ಕೆ ಬ್ರೇಕ್‌

Pinterest LinkedIn Tumblr


ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಗಡಿ ಪ್ರದೇಶಗಳಿಂದ ಬೆಳಗಾವಿಗೆ ಒಳ ಪ್ರವೇಶಿಸುವ ಅಕ್ರಮ ಮದ್ಯ ಸಾಗಾಟಕ್ಕೆ ಬ್ರೇಕ್‌ ಹಾಕಲು ಅಬಕಾರಿ ಇಲಾಖೆ ಸಿದ್ಧವಾಗಿದೆ. ಗೋವಾ ಹಾಗೂ ಮಹಾರಾಷ್ಟ್ರಗಳಿಂದ ಅಕ್ರಮ ಮದ್ಯ ತಡೆಗೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ ಲಾಗಿದೆ. ಗಡಿ ಭಾಗಗಳಾದ ಕಣಕುಂಬಿ ಹಾಗೂ ಮಹಾರಾಷ್ಟ್ರದ ಕೊಗನೊಳ್ಳಿ ಚೆಕ್‌ ಪೋಸ್ಟ್‌ಗಳನ್ನು ಹೊರತುಪಡಿಸಿ ಇನ್ನೂ 20 ಚೆಕ್‌ಪೋಸ್ಟ್‌ಗಳನ್ನು ತೆರೆದು ಎಲ್ಲೆಡೆಯೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಅಬಕಾರಿ ಕಣ್ಗಾವಲು: ಬೆಳಗಾವಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸಿಂಧದುರ್ಗ, ಕೊಲ್ಲಾಪುರ ಹಾಗೂ ಸಾಂಗಲಿ ಜಿಲ್ಲೆಗಳು, ಗೋವಾದ ಪಣಜಿ ಜಿಲ್ಲೆಗಳಿಂದ ಮದ್ಯ ಬಾರದಂತೆ ತಡೆಯಲು ಪ್ರತಿ ಚೆಕ್‌ಪೋಸ್ಟ್‌ಗೆ ಇಬ್ಬರು ಅಬಕಾರಿ ನಿರೀಕ್ಷಕರು ಠಿಕಾಣಿ ಹೂಡಲಿದ್ದು, ಪೊಲೀಸ್‌ ಸಿಬ್ಬಂದಿ, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಕೂಡ ಇರಲಿದ್ದಾರೆ. ವಾಹನಗಳ ಮೇಲೆ ನಿಗಾ ಇಡಲು ಸಿಸಿ ಕ್ಯಾಮರಾ ಅಳವಡಿಸುವ ಮೂಲಕ 45 ದಿನಗಳ ಕಾಲ ಬ್ಯಾಕ್‌ಅಪ್‌ ಇರುವಂತೆ ನೋಡಿಕೊಳ್ಳಲಿದೆ. ವಿಧಾನಸಭೆ ಚುನಾ ವಣೆಯ ನೀತಿ ಸಂಹಿತೆ ಜಾರಿಯಾದ ಬಳಿಕ ಚೆಕ್‌ ಪೋಸ್ಟ್‌ ಗಳು ಕಾರ್ಯಾರಂಭಿಸಲಿವೆ.

ಜಿಲ್ಲೆಯಲ್ಲಿ 40 ವೈನ್‌ (ದ್ರಾಕ್ಷಾರಸ) ಅಂಗಡಿಗಳು ಸೇರಿ ಒಟ್ಟು 575 ಮದ್ಯದ ಅಂಗಡಿಗಳಿದ್ದು, ಪ್ರತಿ ತಿಂಗಳಿಗೆ ಸುಮಾರು 2.50 ಲಕ್ಷ ಬಾಕ್ಸ್‌ ಮದ್ಯ, ಒಂದು ಲಕ್ಷ ಬಿಯರ್‌ ಬಾಕ್ಸ್‌ಗಳು ಮಾರಾಟವಾಗುತ್ತವೆ. ಚುನಾವಣೆ ಇದ್ದರೂ ಇಲಾಖೆಯಿಂದ ಇಷ್ಟೇ ಪ್ರಮಾಣದ ಮದ್ಯ ನೀಡಲಾ ಗುತ್ತದೆ. ಕಳೆದ ವರ್ಷ ನೀಡಿದ್ದಕ್ಕಿಂತ ಈ ವರ್ಷದಲ್ಲಿ ಆ ತಿಂಗಳು ಶೇ.20ರಷ್ಟು ಹೆಚ್ಚಿನ ಪೂರೈಕೆ ಮಾಡಲಾಗುತ್ತದೆ. ಹೆಚ್ಚಿನ ಮದ್ಯ ಬೇಕಾದರೆ ಇಲಾಖೆಯ ಅನುಮತಿ ಪಡೆದು ಮದ್ಯ ಪಡೆದುಕೊಳ್ಳಬಹುದು.

ಕಳೆದ ವಿಧಾನಸಭೆ ಚುನಾವಣೆಯಲ್ಲೂ ಅಬಕಾರಿ ಇಲಾಖೆ ವಿವಿಧ ಕಡೆ ದಾಳಿ ನಡೆಸಿ ಅಕ್ರಮ ಮದ್ಯ ಹಾಗೂ ವಿವಿಧ ವಾಹನಗಳನ್ನು ಜಪ್ತಿ ಮಾಡಿಕೊಂಡಿತ್ತು. ಜಿಲ್ಲೆಯ ಬೆಳಗಾವಿ ಉಪವಿಭಾಗ, ಚಿಕ್ಕೋಡಿ ಉಪವಿಭಾಗ ಹಾಗೂ ರಾಮದುರ್ಗ ಉಪ ವಿಭಾಗದಲ್ಲಿ 743 ದಾಳಿ ನಡೆಸಿ ಒಟ್ಟು 1.02 ಕೋಟಿ ರೂ. ಮೌಲ್ಯದ ಮದ್ಯ, 22 ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿತ್ತು.

ಮಿಲಿಟರಿ ಕ್ಯಾಂಟೀನ್‌: ನಗರದ ವ್ಯಾಪ್ತಿಯಲ್ಲಿ 8 ಮಿಲಿಟರಿ ಕ್ಯಾಂಟೀನ್‌ಗಳಿದ್ದು, ಇಲ್ಲಿ ಸೈನ್ಯದಲ್ಲಿದ್ದ ವರಿಗೆ ನಾಲ್ಕು ಬಾಟಲ್‌ಗ‌ಳನ್ನು ಪ್ರತಿ ತಿಂಗಳು ನೀಡಲಾಗುತ್ತದೆ. ಅಬಕಾರಿ ಇಲಾಖೆಯಿಂದಲೇ ಪ್ರತಿ ತಿಂಗಳು 25 ಸಾವಿರ ಬಾಕ್ಸ್‌ಗಳನ್ನು ಇಲಾಖೆ ಪೂರೈಸುತ್ತದೆ. ಇಂಥ ಕ್ಯಾಂಟೀನ್‌ಗಳಲ್ಲೂ ಕಟ್ಟೆಚ್ಚರ ವಹಿಸುವಂತೆ ಇಲಾಖೆ ಸೂಚನೆ ನೀಡಿದೆ. ಕಡ್ಡಾಯವಾಗಿ ಗುರುತಿನ ಚೀಟಿ ಇದ್ದವ ರಿಗೆ ಮಾತ್ರ ಪೂರೈಸುವಂತೆ ಹೇಳಿದೆ.

ಕಂಟ್ರಿ ಸಾರಾಯಿ ಇಲ್ಲ: ಕಂಟ್ರಿ ಸಾರಾಯಿಗೆ ಬೇಡಿಕೆಯೇ ಇರುವುದಿಲ್ಲ. ಕಾಂಚಾಣ ಕುಣಿಯುತ್ತಿರುವಾಗ ಬ್ರಾಂಡೆಡ್‌ ಸಾರಾಯಿ ಯನ್ನೇ ಮದ್ಯ ಪ್ರಿಯರು ಸವಿಯುತ್ತಾರೆ. ಆದರೂ ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಲು ಇಲಾಖೆ ಅನೇಕ ಕ್ರಮಗಳನ್ನು ಕೈಗೊಂಡಿದೆ. ಕಳ್ಳಭಟ್ಟಿ ಸಾರಾಯಿ ಬಹುತೇಕ ಕಡೆ ಸ್ಥಗಿತಗೊಂಡಿದ್ದರೂ ಕೆಲ ಗುಡ್ಡಗಾಡು ಪ್ರದೇಶಗಳಲ್ಲಿ ಕಳ್ಳಭಟ್ಟಿ ಸಾರಾಯಿ ಅಡ್ಡೆಗಳ ಮೇಲೆ ದಾಳಿ ನಡೆಸಲಿದೆ.

ಎಲ್ಲೆಲ್ಲಿ ಚೆಕ್‌ ಪೋಸ್ಟ್‌?: ಖಾನಾಪುರದ ಕಣಕುಂಬಿ, ಲೋಂಡಾ ಅರಣ್ಯ ಪ್ರದೇಶ, ಬೆಳಗಾವಿ ಉತ್ತರ ಭಾಚಿ, ಉಚಗಾಂವ- ಕೋವಾಡ, ಬೆಳಗಾವಿ ದಕ್ಷಿಣದ ರಾಕಸಕೊಪ್ಪ, ಚಿಕ್ಕೋಡಿಯ ಕೊಗನೊಳ್ಳಿ, ಬೋರಗಾಂವ ಸರ್ಕಲ್‌(ಇಚಲಕರಂಜಿ ಚೆಕ್‌ ಪೋಸ್ಟ್‌), ಅಪ್ಪಾಚಿವಾಡಿ, ರಾಧಾ ನಗರ ರೋಡ್‌, ಮಾಂಗೂರ ಕ್ರಾಸ್‌ (ಮಾಂಗನೂರ- ಹುಪರಿ ರೋಡ್‌), ಸದಲಗಾ-ದತ್ತವಾಡ ಕ್ರಾಸ್‌, ಹುಕ್ಕೇರಿಯ ಹಿಟ್ನಿ ಕ್ರಾಸ್‌, ಬುಗಟೆ ಆಲೂರ, ಕುರಣಿ ಕ್ರಾಸ್‌ (ಚಿಕ್ಕಾಲಗುಡ್ಡ- ಕಲಾದಗಿ) ಉಳ್ಳಾಗಡ್ಡಿ ಖಾನಾಪುರ, ದಡ್ಡಿ ಕ್ರಾಸ್‌, ಅಥಣಿಯ ಕಾಗವಾಡ(ಮಿರಜ್‌ ರೋಡ್‌), ಮಧಬಾಂವಿ(ಮಿರಜ್‌ ರೋಡ್‌, ಸಾಲಗಾರ ಕ್ರಾಸ್‌), ಬಾಳಿಗೇರಿ ಕ್ರಾಸ್‌(ಜತ್ತ ರೋಡ್‌), ಕೊಟ್ಟಲಗಿ-ಗುಡ್ಡಾಪುರ ಹಾಗೂ ಮಂಗಸೂಳಿ-ಅರಗರಸ್ತೆಯಲ್ಲಿ ಹೀಗೆ ಒಟ್ಟು 22 ಚೆಕ್‌ ಪೋಸ್ಟ್‌ಗಳನ್ನು ಅಬಕಾರಿ ಇಲಾಖೆ ನಿರ್ಮಿಸಲಿದೆ.

* ಭೈರೋಬಾ ಕಾಂಬಳೆ

-ಉದಯವಾಣಿ

Comments are closed.