ದಾವಣಗೆರೆ: ಇದು ಸಿದ್ದರಾಮಯ್ಯ ಸರ್ಕಾರ ಅಲ್ಲ, ಸೀದಾ ರುಪಾಯಿ ಸರ್ಕಾರ. ಇಲ್ಲಿ 10 ಪರ್ಸೆಂಟ್ 20 ಪರ್ಸೆಂಟ್ ಕಮಿಷನ್ ಕೊಟ್ಟರೆ ಮಾತ್ರ ಕೆಲಸವಾಗುತ್ತದೆ. ಇಲ್ಲದಿದ್ದರೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರದ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ದಾವಣಗೆರೆಯಲ್ಲಿ ರೈತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮತ್ತೆ ರಾಜ್ಯ ಸರ್ಕಾರ 10 ಪರ್ಸೆಂಟ್ 20 ಪರ್ಸೆಂಟ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಎಲ್ಲಿಯವರೆಗೆ ಪರ್ಸೆಂಟ್ ವ್ಯವಹಾರ ಮುಗಿಯುವುದಿಲ್ಲವೋ, ಅಲ್ಲಿಯವರೆಗೆ ರಾಜ್ಯದಲ್ಲಿ ಯಾವುದೇ ಕೆಲಸ ನಡೆಯಲ್ಲ. ಈ ಸೀದಾ ರುಪಾಯಿಯ ಸರ್ಕಾರ ನಿಮಗೆ ಬೇಕಾ? ಎಂದು ಪ್ರಶ್ನಿಸಿದರು.
ಸೀದಾ ರೂಪಾಯಿ ಸರ್ಕಾರ ತೊಲಗಬೇಕಿದೆ. ಪ್ರಾಮಾಣಿಕ ಕೆಲಸ ಮಾಡುವ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ. ರಾಜ್ಯದ ಪ್ರತಿ ಜನರೂ ಈ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದರು.
ದೇಶದಲ್ಲಿ ಬಹುತೇಕ ಎಲ್ಲ ಸಮಸ್ಯೆಗಳಿಗೆ ಕಾಂಗ್ರೆಸ್ ಸಂಸ್ಕೃತಿಯೇ ಕಾರಣ. ದೇಶದ ಅಭಿವೃದ್ಧಿಯಾಗಬೇಕಾದರೆ, ಗ್ರಾಮಗಳು ಬದಲಾಗಬೇಕು, ರೈತರು ಅಭಿವೃದ್ಧಿ ಹೊಂದಬೇಕು ಎಂದು ಪ್ರಧಾನಿ ಹೇಳಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಸಾಕಷ್ಟು ಅನುದಾನ ನೀಡಿದೆ. ಆದರೆ ಕೇಂದ್ರದ ಅನುದಾನ ಬಳಕೆಯಾಗದೇ ಉಳಿದಿದೆ. ಸ್ಮಾರ್ಟ್ ಸಿಟಿ ಯೋಜನೆಗೆ 300 ಕೋಟಿ ರುಪಾಯಿ ನೀಡಿದೆ. ಆದರೆ ಅದು ಇನ್ನೂ ಖರ್ಚಾಗಿಲ್ಲ. ಸ್ವಚ್ಛತಾ ಅಭಿಯಾನದ ಬಗ್ಗೆಯೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರಧಾನಿ ಆರೋಪಿಸಿದರು.
ದೇಶದಲ್ಲಿ ಯಾವುದೇ ಸಚಿವರ ಮನೆ ಮೇಲೂ ದಾಳಿ ನಡೆದಿಲ್ಲ. ಆದರೆ ಕರ್ನಾಟಕದ ಸಚಿವರ ಮನೆ ಮೇಲೆ ದಾಳಿ ನಡೆಯುತ್ತೆ. ಮನೆಯಲ್ಲಿ ಡೈರಿ ಸಿಗುತ್ತೆ, ನೋಟಿನ ಬಂಡಲ್ಗಳು ಸಿಗುತ್ತವೆ.
ಆ ಹಣ ಎಲ್ಲಿಂದ ಬಂತು? ಇದು ಸೀದಾ ರುಪಾಯಿಯೇ? ಎಂದು ಮೋದಿ ಪ್ರಶ್ನಿಸಿದರು.