ಕರ್ನಾಟಕ

ಜೆಡಿಎಸ್‌ನಿಂದ ಕನಿಷ್ಠ 15 ಮಹಿಳೆಯರಿಗೆ ಟಿಕೆಟ್‌: ಕುಮಾರಸ್ವಾಮಿ

Pinterest LinkedIn Tumblr


ಬಳ್ಳಾರಿ: ಮುಂಬರುವ ಕರ್ನಾಟಕ ವಿಧಾಸಭಾ ಚುನಾವಣೆಯಲ್ಲಿ ಜೆಡಿಎ‌ಸ್‌ನಿಂದ ಕನಿಷ್ಠ 15 ಮಹಿಳೆಯರಿಗೆ ಟಿಕೆಟ್‌ ನೀಡುತ್ತಿರುವುದಾಗಿ ಪಕ್ಷದ ರಾಜ್ಯಾಧ್ಯಕ್ಷ
ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸಂಡೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, “ಶೀಘ್ರದಲ್ಲೇ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಿದ್ದೇವೆ. ನಾನು ಇನ್ನೂ 22 ದಿನಗಳ ಮಟ್ಟಿಗೆ 40 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದೇನೆ. ರಾಯಚೂರಿನಲ್ಲಿ ಬೃಹತ್ ರ‍್ಯಾಲಿ ಹಮ್ಮಿಕೊಳ್ಳಲಾಗುತ್ತಿದೆ.

ಉತ್ತರ ಕರ್ನಾಟಕದ ಕ್ಷೇತ್ರಗಳಿಗೆ ಹೆಚ್ಚು ಭೇಟಿ ನೀಡಿ ತುರುಸಿನ ಪ್ರಚಾರ ಮಾಡಿ ಐವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಿಸುವ ನಿರೀಕ್ಷೆ ಇದೆ” ಎಂದು ಕುಮಾಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
“ಬಳ್ಳಾರಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಜೆಡಿಎಸ್‍ ಪಕ್ಷ ಕವಲು ದಾರಿಯಲ್ಲಿತ್ತು. ಜಿಲ್ಲೆಯ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಉಳಿದ 7 ಕ್ಷೇತ್ರಗಳ ಅಭ್ಯರ್ಥಿಗಳನ್ನು ಯುಗಾದಿಯೊಳಗೆ ಘೋಷಿಸುತ್ತೇವೆ. ಕಾಂಗ್ರೆಸ್ ಮುಖಂಡ ಇಕ್ಬಾಲ್ ಹೊತ್ತೂರು ನಮ್ಮ ಪಕ್ಷವನ್ನು ಸೇರಿದ್ದು ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ” ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

“ಜೆಡಿಎಸ್‌ನಲ್ಲಿ ಹಣ ತಂದು ಚುನಾವಣೆ ಮಾಡಲು ಸಾಧ್ಯವಿಲ್ಲ. ದೊಡ್ಡ ಮಟ್ಟದ ನಾಯಕರು ಬೇರೆ ಪಕ್ಷದಿಂದ ಬರುವವರು ಯಾರು ಇಲ್ಲ. ಬೇರೆ ಪಕ್ಷಗಳಲ್ಲಿ ಅಸಮಾಧಾನಗೊಂಡವರಿಗೆ ಈ ಬಾರಿ ನಮ್ಮಲ್ಲಿ ಅವಕಾಶವಿಲ್ಲ. ಬಿಜೆಪಿ ಕಾಂಗ್ರೆಸ್ ಎರಡು ಕೂಡ ನಿರಾಶ್ರಿತರ ಕೇಂದ್ರಗಳು. ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್‌ನ ಬಹುತೇಕ ನಾಯಕರು ಜೆಡಿಎಸ್‍ನಿಂದ ವಲಸೆ ಹೋದವರೇ ಆಗಿದ್ದಾರೆ. ಅವರು ನಮ್ಮ ಪಕ್ಷದಲ್ಲಿ ದೊಡ್ಡವರಾಗಿ ಶಕ್ತಿ ಬಂದ ಕೂಡಲೇ ರಾಷ್ಟ್ರೀಯ ಪಕ್ಷಕ್ಕೆ ಹಾರುತ್ತಾರೆ” ಎಂದು ಹೆಚ್‌ಡಿಕೆ ಆಪಾದಿಸಿದ್ದಾರೆ.

Comments are closed.