ಕರ್ನಾಟಕ

ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ಕಂಡಿಲ್ಲ: ಸಿದ್ದರಾಮಯ್ಯ

Pinterest LinkedIn Tumblr


ಬಾಗಲಕೋಟೆ: ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಚಿಕ್ಕಪಡಸಲಗಿ ಗ್ರಾಮದಲ್ಲಿ ಕಿರು ಸಮಾವೇಶದಲ್ಲಿ ಮೋದಿ ಅವರು ನುಡಿದಂತೆ ನಡೆದುಕೊಳ್ಳುತ್ತಿಲ್ಲ. ಬರಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ‘ಅಚ್ಚೇ ದಿನ್ ಆಯೇಗ’ ಎಂದು ಹೇಳಿದರು. ಆದರೆ, ಯಾರಿಗೆ ಬಂದವೋ ಗೊತ್ತಿಲ್ಲ. ನೀರವ್ ಮೋದಿ, ವಿಜಯ್‍ಮಲ್ಯ, ಲಲಿತ್ ಮೋದಿ ಲೂಟಿ ಮಾಡಿ ದೇಶ ಬಿಟ್ಟು ಹೋಗಲು ಮೋದಿ ಅವರ ಸಹಕಾರ ಇದ್ದೇ ಇದೆ. ಸಮಸ್ಯೆಗಳ ಬಗ್ಗೆಯೂ ಚಕಾರ ಎತ್ತದ ಮೋದಿ ಪ್ರತಿ ಬಾರಿಯೂ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಹೇಳುತ್ತಾರೆ.

ಜೈಲಿಗೆ ಹೋದವರನ್ನು ಅಕ್ಕಪಕ್ಕ ಕೂರಿಸಿಕೊಂಡು, ನಮ್ಮ ಸರ್ಕಾರವನ್ನು ಭ್ರಷ್ಟ ಸರಕಾರ ಎಂದು ಹೇಳುತ್ತಾರೆ. ರೈತರ ಸಾಲ ಮನ್ನಾ ಮಾಡದೆ ಈಗ ರೈತರ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಬೇಕೆಂದು ನಾವು ಒತ್ತಾಯಿಸಿದ್ದೆವು. ಆಗ ಸಾಧ್ಯವಿಲ್ಲ. ನಾವು ನೋಟು ಮುದ್ರಿಸುವ ಯಂತ್ರ ಇಟ್ಟಿಲ್ಲ ಎಂದು ಯಡಿಯೂರಪ್ಪ ಹೇಳಿದ್ದರು. ಕೇಂದ್ರದಲ್ಲಿ ಮೋದಿ ರೈತರ ಸಾಲ ಮನ್ನಾ ಮಾಡಲು ಒಪ್ಪದವರನ್ನು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಬಿಡಬೇಕಾ ಸಿದ್ದರಾಮಯ್ಯ ಪ್ರಶ್ನಿಸಿದರು.

ಕರ್ನಾಟಕದಲ್ಲಿರುವ ಸರಕಾರವನ್ನು ಭ್ರಷ್ಟ ಎಂದು ಜರೆದಿರುವ ಮೋದಿ ಅವರು., ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿರುವುದು ಯಾರನ್ನ? ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪರನ್ನು. ಜೈಲಿಗೆ ಹೋಗಿ ಬಂದವರಿಗೆ ಮತ್ತೆ ನೀವು ವೋಟು ಹಾಕುತ್ತೀರಾ? ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹೇಳಿಕೊಳ್ಳುವಂಥ ಸಾಧನೆಯನ್ನೂ ಮಾಡಿಲ್ಲ. ಸೀರೆ, ಸೈಕಲ್ ಕೊಟ್ಟೆ ಎಂದು ಬಿಟ್ಟರೆ ಜೈಲಿಗೆ ಹೋಗಿ ಬಂದೆ ಎಂದು ಹೇಳಬೇಕಷ್ಟೇ. ನಮ್ಮ ಸರ್ಕಾರ ರೈತರ ಸಾಲ ಮನ್ನಾ ಸೇರಿದಂತೆ, ಹಲವು ಜನಪರ ಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದೆ. ಯಾವುದೇ ಭ್ರಷ್ಟಾಚಾರವಿಲ್ಲದೆ ಉತ್ತಮ ಆಡಳಿತ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.

Comments are closed.