ಕರ್ನಾಟಕ

ಬೆಂಗಳೂರಿನಲ್ಲಿ ನಡೆದ ನರಸಿಂಹಮೂರ್ತಿ ಕೊಲೆ ಹಿಂದೆ ಪತ್ನಿ ಪಾತ್ರದ ಬಗ್ಗೆ ಶಂಕೆ

Pinterest LinkedIn Tumblr

ಬೆಂಗಳೂರು: ಕುರುಬರಹಳ್ಳಿಯ ನಿವಾಸಿ ಪಾನಿಪುರಿ ವ್ಯಾಪಾರಿ 35 ವರ್ಷದ ನರಸಿಂಹಮೂರ್ತಿಯನ್ನು ನಿನ್ನೆ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದು ಈ ಕೊಲೆಗೆ ಸಂಬಂಧಿಸಿದಂತೆ ಪತ್ನಿಯ ಪಾತ್ರದ ಕುರಿತು ಪೊಲೀಸರು ಶಂಕಿಸಿದ್ದಾರೆ.

ರಾಮನಗರ ಮೂಲದ ನರಸಿಂಹಮರ್ತಿ 7 ವರ್ಷಗಳ ಹಿಂದೆ ಮಾಗಡಿ ಮೂಲದ 27 ವರ್ಷದ ಅನಿತಾ ಅವರನ್ನು ವಿವಾಹವಾಗಿದ್ದರು. 4 ವರ್ಷದ ಮಗನ ಜತೆ ಕುರುಬರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗುರುವಾರ ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅನಿತಾ ಮುಖಕ್ಕೆ ಪ್ರಜ್ಞೆ ತಪ್ಪಿಸುವ ರಾಸಾಯನಿಕ ಸಿಂಪಡಿಸಿ ನಂತರ ಪತಿಯನ್ನು ಹತ್ಯೆ ಮಾಡಿ ಶವವನ್ನು ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿ ಮಂಚದ ಕೆಳಗೆ ತುರುಕಿ ಪರಾರಿಯಾಗಿದ್ದರು.

ಮಾರನೇ ದಿನ ಬೆಳಗ್ಗೆ ಎಚ್ಚರಗೊಂಡ ಅನಿತಾ ಪತಿಗಾಗಿ ಹುಡುಕಾಡಿದ್ದಾಳೆ. ಮಂಚದ ಕೆಳಗೆ ಶವ ಕಂಡು ಮನೆಯಿಂದ ಹೊರಬಂದು ಕಿರುಚಿಕೊಂಡಿದ್ದಾಳೆ. ನೆರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಮಧ್ಯೆ ಮೃತ ನರಸಿಂಹಮೂರ್ತಿ ತಾಯಿ ಸೊಸೆ ಅನಿತಾ ಹಾಗೂ ಪ್ರಿಯಕರ ಪ್ರವೀಣ್ ಸೇರಿ ಮಗನನ್ನು ಹತ್ಯೆ ಮಾಡಿದ್ದಾರೆ ಎಂದು ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಅನಿತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ವಿಚಾರಣೆ ವೇಳೆ ಅನಿತಾ ಕ್ಷಣಕ್ಕೊಂದು ಹೇಳಿಕೆ ನೀಡುತ್ತಿದ್ದು ಅನಿತಾಳ ಅನೈತಿಕ ಸಂಬಂಧ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Comments are closed.