ಕರ್ನಾಟಕ

ಲಕ್ಷಾಂತರ ರೈತರು, ಅಭಿಮಾನಿಗಳು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಪುಟ್ಟಣ್ಣಯ್ಯ ಅಂತ್ಯಕ್ರಿಯೆ

Pinterest LinkedIn Tumblr

ಮಂಡ್ಯ: ರೈತ ಮುಖಂಡ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಗುರುವಾರ ಪಾಂಡವಪುರ ತಾಲ್ಲೂಕಿನ ಸ್ವಗ್ರಾಮ ಕ್ಯಾತನಹಳ್ಳಿಯಲ್ಲಿ ಅವರ ತೆಂಗಿನ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ರೈತರು, ಅಭಿಮಾನಿಗಳು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದ ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾದರು.

‘ಹಸಿರು ನಮನ‘
ಅಂತ್ಯ ಸಂಸ್ಕಾರವನ್ನು ಯಾವುದೇ ಧಾರ್ಮಿಕ ವಿಧಿವಿಧಾನದಿಂದ ಮಾಡದೆ ಹೋರಾಟ ಗೀತೆ, ರೈತಗೀತೆ, ವಿಶ್ವಮಾನವ ಗೀತೆಯೊಂದಿಗೆ ಮಾಡಲಾಯಿತು.

ಕುಸ್ತಿಪಟುವಾಗಿ, ಭೂಮಿಪುತ್ರನಂತಿದ್ದ ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರಕ್ಕೆ ‘ಹಸಿರು ಹೊದಿಕೆ’ ಮಾಡಿ, ರಾಜ್ಯ ರೈತಸಂಘ, ಹಸಿರು ಸೇನೆ ಹಾಗೂ ನೆರದಿದ್ದ ಸಾವಿರಾರು ರೈತರು ಹಸಿರು ಶಾಲು ಬೀಸುವ ಮೂಲಕ ‘ಹಸಿರು ನಮನ’ ಸಲ್ಲಿಸಿದ್ದು ವಿಶೇಷವಾಗಿತ್ತು.

ರೈತರು ತಂದರು ಹಿಡಿ ಮಣ್ಣು
ವಿವಿಧ ಜಿಲ್ಲೆಗಳಿಂದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸಾವಿರಾರು ರೈತರು ತಮ್ಮ ನೆಲದಿಂದ ಹಿಡಿ ಮಣ್ಣು ತಂದು ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರಕ್ಕೆ ಸಲ್ಲಿಸಿದರು. ಈ ಮೂಲಕ ಭೂತಾಯಿಯೊಂದಿಗೆ ಪುಟ್ಟಣ್ಣಯ್ಯ ಅವರಿಗಿದ್ದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದರು.

ಜಿಲ್ಲಾಧಿಕಾರಿ ಎನ್‌. ಮಂಜುಶ್ರೀ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸ್ಥಳದಲ್ಲಿದ್ದು ಸರ್ಕಾರಿ ಗೌರವ ಸಲ್ಲಿಸಿದರು. ವಿವಿಧ ಮಠಗಳ ಮಠಾಧೀಶರು, ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ ಸೇರಿದಂತೆ ಹಲವು ಶಾಸಕರು, ಮುಖಂಡರು, ರೈತ ನಾಯಕರು ಭಾಗಿಯಾಗಿದ್ದರು.

ಅಂತಿಮ ನಮನ ಸಲ್ಲಿಸಿದ ದೇವೇಗೌಡ
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಬೆಳಿಗ್ಗೆ ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿ ತೆರಳಿದರು.

ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ಯೋಗೇಂದ್ರ ಯಾದವ್‌ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Comments are closed.