ಕರ್ನಾಟಕ

ರಾಜಧಾನಿಯ ಶೇ.90 ಕಟ್ಟಡಗಳು ಕಾನೂನು ಬಾಹಿರ!

Pinterest LinkedIn Tumblr


ಬೆಂಗಳೂರು: ನಗರದಲ್ಲಿರುವ ಅಪಾರ್ಟ್‌ಮೆಂಟ್‌, ಟೆಕ್‌ಪಾರ್ಕ್‌, ಮಾಲ್‌, ಮಲ್ಟಿಫ್ಲೆಕ್ಸ್‌ ಸೇರಿ ಶೇ.90ರಷ್ಟು ಕಟ್ಟಡಗಳಿಗೆ ಬಿಬಿಎಂಪಿ ನಗರ ಯೋಜನೆ ಅಧಿಕಾರಿಗಳು ನಕಲಿ ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ) ನೀಡಿ, ಪಾಲಿಕೆಗೆ ಸಾವಿರಾರು ಕೋಟಿ ರೂ. ವಂಚಿಸಿದ್ದಾರೆ ಎಂದು ಬಿಜೆಪಿ ನಗರ ವಕ್ತಾರ ಎನ್‌.ಆರ್‌.ರಮೇಶ್‌ ಆರೋಪಿಸಿದರು.

ನಗರದ ಹೋಟೆಲೊಂದರಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆಮಾಡಿ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಲ್ಲಿ ಪ್ರತಿಷ್ಠಿತ ಕ್ರೆಡಾಯ್‌ ಮತ್ತು ಬಿಆರ್‌ಎಐ ಸಂಸ್ಥೆಗಳಲ್ಲಿ ಸದಸ್ಯರಾದ 668 ಸಂಸ್ಥೆಗಳಿಂದ ನಗರದಲ್ಲಿ 50ಕ್ಕಿಂತಲೂ ಹೆಚ್ಚು ಯೂನಿಟ್‌ಗಳಿರುವ 22,500 ವಸತಿ ಸಂಕೀರ್ಣಗಳು ನಿರ್ಮಾಣವಾಗಿವೆ. ಅವುಗಳ ಪೈಕಿ 20 ಸಾವಿರ ಸಂಕೀರ್ಣಗಳು ನಕಲಿ ಸ್ವಾಧೀನಾನುಭವ ಪತ್ರವನ್ನು ಪಡೆದಿವೆ ಎಂಬ ಆತಂಕಕಾರಿ ವಿಚಾರ ದಾಖಲೆಗಳಿಂದ ಬಯಲಾಗಿದೆ ಎಂದರು.

ನಗರದಲ್ಲಿರುವ 79 ಟೆಕ್‌ಪಾರ್ಕ್‌ಗಳು, 3,758 ಐಟಿ ಕಂಪನಿಗಳು, 3 ಸಾವಿರಕ್ಕೂ ಹೆಚ್ಚು ವಾಣಿಜ್ಯ ಸಂಕೀರ್ಣಗಳು ನಕಲಿ ಒಸಿ ಪಡೆದಿವೆ. ಪಾಲಿಕೆಯಿಂದ ಅಧಿಕೃತವಾಗಿ ಒಸಿ ಪಡೆದಿರುವ ಕಟ್ಟಡಗಳ ಸಂಖ್ಯೆ ಕೇವಲ 1,142 ಮಾತ್ರ. ಆದರೆ, ಅಧಿಕಾರಿಗಳೊಂದಿಗೆ ಬ್ಯಾಂಕ್‌ಗಳು ಶಾಮೀಲಾಗಿ ನಕಲಿ ಒಸಿಗಳಿಗೆ ಸಾಲ ಸೌಲಭ್ಯ ಒದಗಿಸುತ್ತಿರುವುದರಿಂದ ಗ್ರಾಹಕರು ಮೋಸ ಹೋಗುತ್ತಿದ್ದಾರೆ ಎಂದು ದೂರಿದರು.

ಪಾಲಿಕೆಯ ನಗರ ಯೋಜನೆ ವಿಭಾಗದ ಅಧಿಕಾರಿಗಳು ಲಂಚಕ್ಕಾಗಿ ಕಾನೂನು ಬಾಹಿರವಾಗಿ ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಹಾಗೂ ನಕಲಿ ಸ್ವಾಧೀನಾನುಭವ ಪತ್ರ ನೀಡುತ್ತಿದ್ದಾರೆ. ಹಣ ಮಾಡಬೇಕೆಂಬ ಉದ್ದೇಶದಿಂದಲೇ ಅಧಿಕಾರಿಗಳು ಮುಖ್ಯಮಂತ್ರಿಗಳು ಹಾಗೂ ಸಚಿವರುಗಳಿಂದ ಶಿಫಾರಸ್ಸು ಪತ್ರಗಳನ್ನು ಪಡೆದು ನಗರ ಯೋಜನೆ ವಿಭಾಗಕ್ಕೆ ಬರುತ್ತಿದ್ದಾರೆ ಎಂದು ಆರೋಪಿಸಿದರು.

ನಿಯಮಗಳಂತೆ ಪಾಲಿಕೆಯ ನಗರ ಯೋಜನೆ ವಿಭಾಗಕ್ಕೆ ಕೇವಲ 41 ಹುದ್ದೆಗಳು ಮಂಜೂರಾಗಿವೆ. ಆದರೆ, ವಿಭಾಗದಲ್ಲಿ ಸದ್ಯ 123 ಅಧಿಕಾರಿಗಳಿದ್ದು, ಪ್ರಭಾರಿಯಾಗಿ ಆಯ್ಕೆಯಾದವರು ಕಳೆದ 18 ತಿಂಗಳಿಂದ ಉಪನಿರ್ದೇಶಕರಾಗಿ ಮುಂದುವರಿಯುತ್ತಿದ್ದಾರೆ. ಕಳೆದ 8 ವರ್ಷಗಳಲ್ಲಿ ಪಾಲಿಕೆಗೆ ಸ್ವಾಧೀನಾನುಭವ ಪ್ರಮಾಣ ಪತ್ರಗಳಿಂದ 8 ಸಾವಿರ ಕೋಟಿ ರೂ. ವರಮಾನ ಬರಬೇಕಿತ್ತಾದರೂ, ಕೇವಲ 3,500 ಕೋಟಿ ಮಾತ್ರ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಗಣಿ ಹಗರಣ ಬಿಟ್ಟರೆ ಮತ್ತೂಂದು ಬೃಹತ್‌ ಹಗರಣವೆಂದರೆ ಅದು ನಗರದಲ್ಲಿ ವಸತಿ ಸಂಕೀರ್ಣಗಳಿಗೆ ಕಾನೂನು ಬಾಹಿರವಾಗಿ ನಕ್ಷೆ ಮಂಜೂರಾತಿ ಹಾಗೂ ಸ್ವಾಧೀನಾನುಭವ ಪತ್ರ ನೀಡುವುದಾಗಿದೆ. ಕಟ್ಟಡ ನಿರ್ಮಾಣ ಸಂಸ್ಥೆಗಳು 12 ಲಕ್ಷ ಗ್ರಾಹಕರಿಗೆ ವಂಚಿಸಿರುವ 60 ಸಾವಿರ ಕೋಟಿ ರೂ. ಹಗರಣ ಇದಾಗಿದ್ದು, ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಹಗರಣದಲ್ಲಿ ಭಾಗಿಯಾಗಿರುವ 668 ನಿರ್ಮಾಣ ಸಂಸ್ಥೆಗಳು, ಪಾಲಿಕೆಯ ಅಧಿಕಾರಿಗಳು ಹಾಗೂ ನಗರ ಯೋಜನೆ ವಿಭಾಗಕ್ಕೆ ಅಧಿಕಾರಿಗಳನ್ನು ಶಿಫಾರಸ್ಸು ಮಾಡಿದ ಮುಖ್ಯಮಂತ್ರಿಗಳು ಹಾಗೂ ಸಚಿವರ ವಿರುದ್ಧ ಎಸಿಬಿ, ಲೋಕಾಯುಕ್ತ ಹಾಗೂ ಬಿಎಂಟಿಎಫ್ನಲ್ಲಿ ದೂರು ದಾಖಲಿಸಲಾಗಿದೆ ಎಂದರು.

-ಉದಯವಾಣಿ

Comments are closed.